ಚಿತ್ರದುರ್ಗ: ಜು.4 ಪರಿಶಿಷ್ಟ ಜಾತಿಯಲ್ಲಿನ ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತರಲು ಹಾಗೂ ಅವರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯಮಟ್ಟದ ಅಲೆಮಾರಿಗಳ ಸಮಾವೇಶ ಆಯೋಜಿಸಲು ಪೂರ್ವಭಾವಿ ಸಭೆಯನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಜು.5 ಶನಿವಾರ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.
ಮಾಜಿ ಸಚಿವ, ಅಲೆಮಾರಿ ಸಮುದಾಯದ ಹಿತಚಿಂತಕ ಹೆಚ್.ಆಂಜನೇಯ ನೇತೃತ್ವದಲ್ಲಿ ಪೂರ್ವಭಾವಿ ಆಯೋಜಿಸಿದ್ದು, ಸಭೆಯಲ್ಲಿ ಅಲೆಮಾರಿ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುವುದು. ಜೊತೆಗೆ ಸಮಾವೇಶದ ದಿನಾಂಕ, ಸಮಾವೇಶ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅನೇಕ ಸಚಿವರು, ಜನಪ್ರತಿನಧಿಗಳನ್ನು ಆಹ್ವಾನಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು.
ಪರಿಶಿಷ್ಟ ಗುಂಪಿನಲ್ಲಿರುವ ಅಲೆಮಾರಿಗಳು ಅಸ್ಪೃಶ್ಯ ನೋವು ಜೊತೆಗೆ ನೆಲೆ ಇಲ್ಲದೆ ಅಲೆದಾಟದ ಬದುಕು ನಡೆಸುತ್ತಿದ್ದಾರೆ. ಈ ಸಮುದಾಯಕ್ಕೆ ನಿವೇಶನ, ಮನೆ, ಜಮೀನು, ಪ್ರತ್ಯೇಕ ಮೀಸಲಾತಿ, ಆರ್ಥಿಕ ನೆರವು, ಉದ್ಯೋಗ, ಶಿಕ್ಷಣ ಹೀಗೆ ವಿವಿಧ ಸೌಲಭ್ಯಗಳನ್ನು ಒದಗಿಸುವುದು ಆಳುವ ಸರ್ಕಾರದ ಹೊಣೆಗಾರಿಕೆ ಆಗಿದೆ.
ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಹಾಗೂ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಹೆಚ್.ಆಂಜನೇಯ ನೇತೃತ್ವದಲ್ಲಿ ಸಮಾವೇಶದ ಪೂರ್ವಭಾವಿ ಆಯೋಜಿಸಲಾಗಿದೆ. ರಾಜ್ಯದ ವಿವಿಧೆಡೆ ನೆಲೆಸಿರುವ ನೈಜ ಅಲೆಮಾರಿ 49 ಜಾತಿಗಳ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಸಲಹೆ, ಸೂಚನೆ ನೀಡಬೇಕೆಂದು ಸಂಘಟಕರಾದ ಶಾಂತಕುಮಾರ್, ಸಣ್ಣಮಾರಪ್ಪ ಕೋರಿದ್ದಾರೆ.