ಅಪರೂಪದ ಕಂಕಣ ಸೂರ್ಯಗ್ರಹಣ: ಆಕಾಶದಲ್ಲಿ ಅಪರೂಪವಾಗಿ ಕಾಣಿಸುವ ಖಗೋಳ ಘಟನೆಗಳಲ್ಲಿ ಒಂದಾದ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ಇದೇ ಫಬ್ರವರಿ 17 ರ ಮಂಗಳವಾರ ಮಧ್ಯಾಹ್ನ 3.26 ರಿಂದ ಸಂಜೆ 7.57 ರವರೆಗೆ ಜರುಗಲಿರುವ ಈ ಅಪರೂಪದ ಖಗೋಳ ಘಟನೆಯ ದೃಶ್ಯ ಕೆಲವೇ ದೇಶಗಳಲ್ಲಿ ಮಾತ್ರ ಗೋಚರಿಸಲಿದೆ.
ಅನೇಕರು ತುಂಬಾ ಆಸಕ್ತಿಯಿಂದ ಕಾಯುತ್ತಿರುವ ವಿಶೇಷ ಕ್ಷಣವಾಗಲಿದೆ. ಈ ಗ್ರಹಣವು ಸುಮಾರು 4 ಗಂಟೆ 30 ನಿಮಿಷಗಳ ನಡೆಯಲಿದ್ದು, 2 ನಿಮಿಷ 20 ಸೆಕೆಂಡ್ ಗಳ ಕಾಲ ಚಂದ್ರನು ಸೂರ್ಯನ ಮದ್ಯಭಾಗವನ್ನು ಮರೆಮಾಡುವ ಮೂಲಕ ವಿಶೇಷ ದೃಶ್ಯ ಮೂಡುತ್ತದೆ. ಆದರೆ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಚಂದ್ರನು ಭೂಮಿಯಿಂದ ದೂರದಲ್ಲಿರುವುದರಿಂದ ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡಲು ಸಾಧ್ಯವಾಗದೆ, ಅದರ ಸುತ್ತಲೂ ಬೆಳಕಿನ ಉಂಗುರದಂತೆ ಕಾಣುತ್ತದೆ. ಇದನ್ನು ಕಂಕಣ ಸೂರ್ಯಗ್ರಹಣ ಎನ್ನುವರು.
ಇದು ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ತಾಂಜಾನಿಯಾ, ಜಾಂಬಿಯಾ, ಜಿಂಬಾಬ್ವೆ ಮುಂತಾದ ದೇಶಗಳಲ್ಲಿ ಮಾತ್ರ ಈ ಅದ್ಭುತವನ್ನು ವಿಶೇಷ ಉಪಕರಣಗಳ ಮೂಲಕ ನೋಡಿ ಕಣ್ತುಂಬಿ ಕೊಳ್ಳಬಹುದು ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್. ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.