“ತರಬೇತಿ ಪಡೆದ ಉಪನ್ಯಾಸಕರು ಫಲಿತಾಂಶ ಹೆಚ್ಚಿಸಲು ಶಕ್ತರು” — ಪಿ.ಎಂ.ಜಿ. ರಾಜೇಶ್.

ಚಿತ್ರದುರ್ಗದಲ್ಲಿ ಪಿಯು ಉಪನ್ಯಾಸಕರಿಗೆ ತರಬೇತಿ ಶಿಬಿರ — ಫಲಿತಾಂಶ ಸುಧಾರಣೆಗೆ ಹೊಸ ಪ್ರಯತ್ನ

ಚಿತ್ರದುರ್ಗ ನ. 11

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಹೊಸ ವಿಚಾರಗಳನ್ನು ಅರಿತು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲು ಉಪನ್ಯಾಸಕರಿಗೆ ತರಬೇತಿ ಅತ್ಯಾವಶ್ಯಕ. ಇದು ಫಲಿತಾಂಶ ಸುಧಾರಣೆಗೂ ಸಹಕಾರಿ ಎಂದು ಪ್ರಾಚಾರ್ಯರ ಸಂಘದ ಅಧ್ಯಕ್ಷ ಪಿ.ಎಂ.ಜಿ. ರಾಜೇಶ್ ಹೇಳಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಉಪನ್ಯಾಸಕರ ತರಬೇತಿ ಸಮಾರಂಭದಲ್ಲಿ ಮಾತನಾಡಿದ ಅವರು. ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸುವ ಬದಲು ತನ್ನದೇ ಆದ ಸ್ವತಂತ್ರ ಅಸ್ತಿತ್ವ ಉಳಿಸಲು ಆದ್ಯತೆ ನೀಡಬೇಕು ಎಂದರು.

ಸರ್ಕಾರಿ ಹಾಗೂ ಅನುದಾನಿತ ಪಿಯು ಕಾಲೇಜುಗಳಲ್ಲಿ ಪ್ರತಿಭಾನ್ವಿತ ಉಪನ್ಯಾಸಕರಿದ್ದಾರೆ. ಆದರೆ, ಈ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗುತ್ತಿರುವ ಕಾರಣ ಉತ್ತಮ ಪಾಠ ಮಾಡಿದರೂ ಉಪಯೋಗಕ್ಕೆ ಬರುತ್ತಿಲ್ಲ. ಇದರಿಂದ ಫಲಿತಾಂಶ ಕೂಡ ಕುಸಿಯುತ್ತಿದೆ. ಆರ್ಥಿಕವಾಗಿ ಹಿಂದುಳಿದಿರುವವರ ಮಕ್ಕಳು ಕಾಲೇಜುಗಳಿಗೆ ನಿರಂತರವಾಗಿ ಬರುವಂತಾಗಬೇಕು ಎಂದು ತಿಳಿಸಿದರು.

ಡಿಡಿಪಿಯು ಕೆ. ತಿಮ್ಮಯ್ಯ ಮಾತನಾಡಿ ತರಬೇತಿ ಕಾರ್ಯಕ್ರಮಗಳನ್ನು ಉಪನ್ಯಾಸಕರು ಸದುಪಯೋಗ ಮಾಡಿಕೊಳ್ಳಬೇಕು. ಆ ಮೂಲಕ ದ್ವಿತೀಯ ಪಿಯು ಫಲಿತಾಂಶದ ಸುಧಾರಣೆಗೆ ಪ್ರಯತ್ನಿಸಬೇಕು. ಈ ಬಾರಿ ಜಿಲ್ಲೆಯ ಫಲಿತಾಂಶ ಶೇ 90ಕ್ಕಿಂತಲೂ ಹೆಚ್ಚಾಗಬೇಕು ಎಂದು ಹೇಳಿದರು.

ಡಯಟ್ ಪ್ರಾಂಶುಪಾಲ ನಾಸಿರುದ್ದೀನ್ ಮಾತನಾಡಿ ಕಾರ್ಯಾಗಾರದಲ್ಲಿ ಉಪನ್ಯಾಸಕರಿಗೆ ನೀಡುವ 40 ಪುಟಗಳಷ್ಟು ಸಂಪನ್ಮೂಲ, ಮಾಹಿತಿಯ ವೆಚ್ಚವನ್ನು ಡಯಟ್ ವತಿಯಿಂದಲೇ ಭರಿಸಲಾಗುತ್ತಿದೆ. ತರಬೇತಿಗೆ ತಗಲುವ ವೆಚ್ಚವನ್ನೂ ಭರಿಸುತ್ತಿದ್ದೇವೆ ಎಂದರು.

ಹಿರಿಯ ಉಪನ್ಯಾಸಕ ನಾಗಭೂಷಣ್, ಉಪನ್ಯಾಸಕರ ಸಂಘದ ಅಧ್ಯಕ್ಷ ಮಲ್ಲೇಶ್, ಪ್ರಾಚಾರ್ಯ ದೊಡ್ಡಯ್ಯ, ಶಬ್ಬೀರ್ ಅಹಮದ್ ಖಾನ್, ಉಮೇಶ್, ಮಂಜುನಾಥ್ ಇದ್ದರು.

Views: 14

Leave a Reply

Your email address will not be published. Required fields are marked *