ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೆ ಎನ್ ಕೋಟೆ ಉಪಾರೋಗ್ಯ ಕೇಂದ್ರ ಸಹಕಾರದಲ್ಲಿ ಆಯುಷ್ಮಾನ್ ಆಯುರ್ವೇದ ಕೇಂದ್ರ ಜೆ ಎನ್ ಕೋಟೆ ವತಿಯಿಂದ ದಿನಾಂಕ: 23/1/2025ರ ಗುರುವಾರ ಗ್ರಾಮದಲ್ಲಿ ಕ್ಷಯರೋಗ ನಿರ್ಮೂಲನ ಜನಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚಿತ್ರದುರ್ಗ: ಜ.23 : ನಿಕ್ಷಯ ಯೋಜನೆಯು ಭಾರತದಲ್ಲಿ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ಈ ಯೋಜನೆಯ ಸಫಲತೆಗೆ ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆಯಿಂದ 100ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮಾಜದ ಎಲ್ಲಾ ವರ್ಗದ ಜನರ ಸಹಕಾರ ಇದಕ್ಕೆ ಅತ್ಯಗತ್ಯವಾಗಿದೆ. ಎಂದು ಜೆ ಎನ್ ಕೋಟೆ ಆಯುಷ್ಮಾನ್ ಆಯುರ್ವೇದ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ|| ವಿಜಯಲಕ್ಷ್ಮಿ ಪಿ ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೆ ಎನ್ ಕೋಟೆ ಉಪಾರೋಗ್ಯ ಕೇಂದ್ರ ಸಹಕಾರದಲ್ಲಿ ಆಯುಷ್ಮಾನ್ ಆಯುರ್ವೇದ ಕೇಂದ್ರ ಜೆ ಎನ್ ಕೋಟೆ ವತಿಯಿಂದ ದಿನಾಂಕ: 23/1/2025ರ ಗುರುವಾರ ಗ್ರಾಮದಲ್ಲಿ ಕ್ಷಯರೋಗ ನಿರ್ಮೂಲನ ಜನಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಿಕ್ಷಯ ಯೋಜನೆ ಭಾರತದಲ್ಲಿ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಆರಂಭಿಸಿರುವ ಒಂದು ವ್ಯಾಪಕವಾದ ಅಭಿಯಾನವಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶಗಳು ಕ್ಷಯರೋಗಿಗಳಿಗೆ ಉಚಿತ ಚಿಕಿತ್ಸೆ, ಪೋಷಣೆ ಮತ್ತು ಸಾಮಾಜಿಕ ಬೆಂಬಲವನ್ನು ಒದಗಿಸುವುದು ಕ್ಷಯರೋಗದ ಹರಡುವಿಕೆಯನ್ನು ತಡೆಯುವುದು.ಕ್ಷಯರೋಗಿಗಳ ಮರಣ ದರವನ್ನು ಕಡಿಮೆ ಮಾಡುವುದು. ಕ್ಷಯರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವುದು.ಸಮಾಜದಲ್ಲಿ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವುದು. ಸಾರ್ವಜನಿಕರು ಯೋಜನೆಯ ಲಾಭ ಪಡೆದು ಗ್ರಾಮವನ್ನು ಕ್ಷಯರೋಗ ಮಕ್ತಗೊಳಸಲು ಮುಂದಾಗಬೇಕು ಎಂದು ಹೇಳಿದರು.
ಜಾಗೃತಿ ಜಾಥದ ನೇತೃತ್ವವಹಿಸಿದ್ದ ಯೋಗ ತರಬೇತುದಾರ ರವಿ ಕೆ.ಅಂಬೇಕರ್ ಮಾತನಾಡಿ ” ಕ್ಷಯ ರೋಗಿಗಳ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಬೇಕು. ಇದು ಒಂದು ಸಾಂಕ್ರಾಮಿಕ ರೋಗವಾಗಿದೆ ಎಂಬುದು ನಿಜ, ಆದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಸರಿಯಾದ ಔಷಧಿ ಮತ್ತು ಚಿಕಿತ್ಸೆಯೊಂದಿಗೆ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು.
ಇದು ಗಾಳಿಯ ಮೂಲಕ ಹರಡುತ್ತದೆ ಮತ್ತು ಯಾರಿಗೂ ಬರಬಹುದು. ಕ್ಷಯ ರೋಗಿಗಳನ್ನು ಅವರ ಕಾಯಿಲೆಯಿಂದಾಗಿ ಬೇರ್ಪಡಿಸುವುದು ಮಾನವೀಯವಲ್ಲ. ಕ್ಷಯ ರೋಗಿಗಳು ಸಾಮಾಜಿಕ ಕಳಂಕದಿಂದಾಗಿ ಮಾನಸಿಕವಾಗಿ ತೊಂದರೆಗೊಳಗಾಗಬಹುದು.ನಿಕ್ಷಯ ಯೋಜನೆಯು ಕ್ಷಯ ರೋಗಿಗಳಿಗೆ ಉತ್ತಮ ಜೀವನ ನೀಡಲು ಸಹಾಯ ಮಾಡುತ್ತದೆ.ನಾವೆಲ್ಲರೂ ಕ್ಷಯ ರೋಗಿಗಳ ಬಗ್ಗೆ ಧನಾತ್ಮಕ ದೃಷ್ಟಿಕೋನ ಹೊಂದುವ ಮೂಲಕ ಅವರಿಗೆ ಬೆಂಬಲ ನೀಡೋಣ. ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಜೆ ಎನ್ ಕೋಟೆ ಸಮುದಾಯ ಆರೋಗ್ಯಾಧಿಕಾರಿ ರಮೇಶ್ ಮಾತನಾಡಿ ಸರಿಯಾದ ಔಷಧಿ ಮತ್ತು ಚಿಕಿತ್ಸೆಯೊಂದಿಗೆ ಕ್ಷಯ ರೋಗವನ್ನು ಸಂಪೂರ್ಣ ಗುಣಪಡಿಸಬಹುದು ಇದು ಗಾಳಿಯ ಮೂಲಕ ಹರಡುವ ರೋಗವಾಗಿದ್ದು ಗಾಳಿಯ ಮೂಲಕ ಇದು ಯಾರಿಗಾದರೂ ಬರಬಹುದು. ಆದ್ದರಿಂದ ಕ್ಷಯರೋಗಕ್ಕೆ ತುತ್ತಾದವರು ಕೆಮ್ಮುವಾಗ ಯಾವಾಗಲೂ ಕರವಸ್ತ್ರವನ್ನು ಉಪಯೋಗಿಸಬೇಕು. ಹಾಗೆಯೇ ಎಲ್ಲರೂ ಕ್ಷಯ ರೋಗಿಗಳ ಬಗ್ಗೆ ಧನಾತ್ಮಕ ದೃಷ್ಟಿಕೋನ ಹೊಂದುವ ಮೂಲಕ ಅವರಿಗೆ ಬೆಂಬಲ ನೀಡಬೇಕು ಎಂದು ತಿಳಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಕ್ಷಯರೋಗ ನಿರ್ಮೂಲನ ಜಾಗೃತಿ ಮೂಡಿಸುವ ಬಿತ್ತಿಪತ್ರಗಳನ್ನು ಹಿಡಿದು ಗ್ರಾಮದ ಕೇರಿಗಳಲ್ಲು ಅಂಚರಿಸಿ ಕ್ಷಯರೋಗ ದೂರಮಾಡೋಣ ಕ್ಷಯರೋಗಿಯನ್ನಲ್ಲ ಎಂದು ಘೋಷಣೆ ಕೂಗುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಜಾಥದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯಿನಿ ಶ್ರೀಮತಿ ಮಂಜುಳಾ ಕೆ ಕೆ .ಸಹ ಶಿಕ್ಷಕರಾದ ನಾಗರತ್ನಮ್ಮ, ತಬ್ಸುಮ್ ಬಾನು, ಮಂಜುಳಾ ಬಿ ಹೆಚ್ ಆಶಾ ಕಾರ್ಯಕರ್ತೆ ಶಾರದಾ ಹಾಗೂ ಇನ್ನಿತರರು ಭಾಗವಹಿಸಿದ್ದರು.