ಹರಾರೆ: ಕ್ರಿಕೆಟ್ ಜಗತ್ತಿನ ಕಿರಿಯರ ಸಮರದಲ್ಲಿ ಭಾರತ ಮತ್ತೊಮ್ಮೆ ತನ್ನ ಪಾರುಪತ್ಯ ಮೆರೆದಿದೆ. ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2026ರ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ, ಭಾರತದ ಕಿರಿಯರ ತಂಡ ಬಲಿಷ್ಠ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ದಾಖಲೆಯ 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ.
ಭಾರತದ ಗೆಲುವಿನ ರೂವಾರಿಯಾಗಿ ಮೈದಾನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ, ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಅಚ್ಚಳಿಯದ ಇನ್ನಿಂಗ್ಸ್ ಒಂದನ್ನು ಕಟ್ಟಿದರು.
ವೈಭವ್ ಸೂರ್ಯವಂಶಿ: ದಾಖಲೆಗಳ ಸರದಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಸಿಕ್ಕಿದ್ದು ಸ್ಫೋಟಕ ಆರಂಭ. ಎದುರಾಳಿ ಬೌಲರ್‌ಗಳ ಬೆವರಿಳಿಸಿದ ವೈಭವ್ ಸೂರ್ಯವಂಶಿ, ಕೇವಲ 80 ಎಸೆತಗಳಲ್ಲಿ ಬರೋಬ್ಬರಿ 175 ರನ್‌ಗಳನ್ನು ಸಿಡಿಸಿದರು. ಇವರ ಈ ದೈತ್ಯ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ 15 ಮುಗಿಲೆತ್ತರದ ಸಿಕ್ಸರ್‌ಗಳಿದ್ದವು.
ವಿಶೇಷವೆಂದರೆ, ಕೇವಲ 52 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ವೈಭವ್, ಅಂಡರ್-19 ವಿಶ್ವಕಪ್ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರ ಈ ಪ್ರದರ್ಶನವೇ ಪಂದ್ಯದ ಗತಿಯನ್ನು ಭಾರತದತ್ತ ತಿರುಗಿಸಿತು.
ಬೃಹತ್ ಮೊತ್ತದ ಸವಾಲು ವೈಭವ್ ಅವರಿಗೆ ನಾಯಕ ಆಯುಷ್ ಮ್ಹಾತ್ರೆ ಉತ್ತಮ ಸಾಥ್ ನೀಡಿದರು. 51 ಎಸೆತಗಳನ್ನು ಎದುರಿಸಿದ ಆಯುಷ್ 53 ರನ್‌ಗಳ (7 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಆಟವಾಡಿದರು. ಇವರಿಬ್ಬರ ಜೊತೆಯಾಟದಲ್ಲಿ ಎರಡನೇ ವಿಕೆಟ್‌ಗೆ 142 ರನ್ ಹರಿದುಬಂತು. ಮಧ್ಯಮ ಕ್ರಮಾಂಕದಲ್ಲಿ ಅಭಿಜ್ಞಾನ್ ಕುಂಡು (40) ಮತ್ತು ಕಾನಿಷ್ಕ್ ಚೌಹಾಣ್ (37) ಅವರ ಕೊಡುಗೆಯಿಂದಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್‌ಗಳ ಬೆಟ್ಟದಂತಹ ಮೊತ್ತವನ್ನು ಕಲೆಹಾಕಿತು.
ಹೋರಾಡಿ ಸೋತ ಇಂಗ್ಲೆಂಡ್ 412 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಆರಂಭಿಕ ಆಘಾತದ ನಡುವೆಯೂ ದಿಟ್ಟ ಹೋರಾಟ ಪ್ರದರ್ಶಿಸಿತು. ಇಂಗ್ಲೆಂಡ್ ಪರ ಕ್ಯಾಲೆಬ್ ಫಾಲ್ಕನರ್ ಏಕಾಂಗಿ ಹೋರಾಟ ನಡೆಸಿ, ಕೇವಲ 67 ಎಸೆತಗಳಲ್ಲಿ 115 ರನ್ (7 ಸಿಕ್ಸರ್, 9 ಬೌಂಡರಿ) ಸಿಡಿಸಿ ಶತಕ ಸಂಭ್ರಮ ಆಚರಿಸಿದರು. ಬೆನ್ ಡಾಕಿನ್ಸ್ (66) ಕೂಡ ಉತ್ತಮ ಸಾಥ್ ನೀಡಿದರು.
ಆದರೆ, ಭಾರತದ ಬೌಲಿಂಗ್ ದಾಳಿಗೆ ಮಣಿದ ಇಂಗ್ಲೆಂಡ್ ಅಂತಿಮವಾಗಿ 40.1 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಆರ್.ಎಸ್. ಅಂಬರೀಶ್ 3 ವಿಕೆಟ್ ಪಡೆದರೆ, ದೀಪೇಶ್ ದೇವೇಂದ್ರ ಮತ್ತು ಕಾನಿಷ್ಕ್ ಚೌಹಾಣ್ ತಲಾ 2 ವಿಕೆಟ್ ಪಡೆದು ಗೆಲುವನ್ನು ಖಚಿತಪಡಿಸಿದರು.
ಈ ಗೆಲುವಿನೊಂದಿಗೆ ಭಾರತದ ಕಿರಿಯರ ತಂಡ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪಂದ್ಯದ ಗತಿ ಬದಲಿಸಿದ ವೈಭವ್ ಸೂರ್ಯವಂಶಿ ಅರ್ಹವಾಗಿಯೇ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.