ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಯು ಐ’ ಇದೀಗ ತನ್ನ ವಾರ್ನರ್ ಶೀರ್ಷಿಕೆಯ ವಿಡಿಯೋ ಮೂಲಕ ಸಿನಿಪ್ರಿಯರ ಕುತೂಹಲ ಕೆರಳಿಸಿದೆ. 2040ರಲ್ಲಿ ದೇಶದ ಪರಿಸ್ಥಿತಿ ಹೇಗಿರುತ್ತದೆ ಎಂದು ಕಲ್ಪಿಸಿ ಸಿನಿಮಾ ಮಾಡಲಾಗಿದೆ.

ರಿಯಲ್ ಸ್ಟಾರ್ ಉಪೇಂದ್ರ, ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದಲ್ಲಿ ‘ಬುದ್ಧಿವಂತ’ ಅಂತಾ ಕರೆಸಿಕೊಳ್ಳೋ ಏಕೈಕ ನಟ – ನಿರ್ದೇಶಕ. ಬರೋಬ್ಬರಿ 7-8 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನಕ್ಕೆ ಇಳಿದಿರೋದು ನಿಮಗೆ ಗೊತ್ತೇ ಇದೆ. ಉಪ್ಪಿ ಡೈರೆಕ್ಷನ್ ಅಂದ್ಮೇಲೆ ರೆಗ್ಯೂಲರ್ ಸಿನಿಮಾ ನೋಡುವುದಕ್ಕೆ ಆಗುತ್ತಾ?. ಉಪೇಂದ್ರ ಅವರು ಸಿನಿಮಾವನ್ನು ನೋಡುವ ರೀತಿಯೇ ಬೇರೆ. ಈ ಹಿಂದೆ ಬಂದ ಸಿನಿಮಾಗಳು ಸಹ ಇದನ್ನು ಸಾಬೀತುಪಡಿಸಿವೆ. ಇದೀಗ ‘ಯು ಐ’ ಕೂಡಾ ಉಪೇಂದ್ರ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ ಆಗುವ ಎಲ್ಲಾ ಸುಳಿವುಗಳನ್ನು ಕೊಟ್ಟಿದೆ. ಈ ಮಾತಿಗೆ ಪೂರಕವಾಗಿ ಇಂದು ವಾರ್ನರ್ ಶೀರ್ಷಿಕೆಯಡಿ ಗ್ಲಿಂಪ್ಸ್ ಒಂದು ಅನಾವರಣಗೊಂಡಿದೆ. ರಿಯಲ್ ಸ್ಟಾರ್ ಉಪ್ಪಿ ತಮ್ಮದೇ ಶೈಲಿಯಲ್ಲಿ ಮತ್ತೊಂದು ವಿಭಿನ್ನ ಕಥೆ ಹೇಳೊಕೆ ಸಜ್ಜಾಗಿದ್ದಾರೆ ಅನ್ನೋದಿಕ್ಕೆ ಸಾಕ್ಷಿ ಈ ಹೊಸ ವಿಡಿಯೋ.
ಉಪೇಂದ್ರ ಯು ಐ ಸಿನಿಮಾ ಏಕೆ ತಡವಾಗುತ್ತಿರುವುದೇಕೆ?: ಉಪೇಂದ್ರ ಯು ಐ ಸಿನಿಮಾ ಏಕೆ ತಡವಾಗುತ್ತಿದೆ ಅನ್ನೋದಿಕ್ಕೆ ಸದ್ಯಕ್ಕೆ ಅನಾವರಣಗೊಂಡಿರುವ ವಾರ್ನರ್ ಹೆಸರಿನ ಟೀಸರ್ ನೋಡಿದ್ರೆ ತಿಳಿಯುತ್ತದೆ. ಸಿನಿಮಾ ಹಿಂದಿನ ಕೆಲಗಳು ಅಷ್ಟರ ಮಟ್ಟಿಗಿದೆ ಅನ್ನೋದು ಸ್ಪಷ್ಟವಾಗುತ್ತದೆ. 14 ವರ್ಷಗಳ ಹಿಂದೆ ಬಂದಿದ್ದ ಸೂಪರ್ ಸಿನಿಮಾದಲ್ಲಿ ಭಾರತದ ಭವಿಷ್ಯ ಹೇಗಿರಬೇಕು? ಅದಕ್ಕೆ ಏನೆಲ್ಲಾ ಬದಲಾವಣೆ ಆಗಬೇಕು? ಎನ್ನುವುದರ ಸುತ್ತ ಉಪೇಂದ್ರ ಕಥೆ ಮಾಡಿದ್ದರು. ರಿಯಲ್ ಸ್ಟಾರ್ ತಮ್ಮ ಹೊಸ ಕಾನ್ಸೆಪ್ಟ್ ಹಾಗೂ ವಿಭಿನ್ನ ಹೆರ್ ಸ್ಟೈಲ್ ಮೂಲಕ ಸದ್ದು ಮಾಡಿದ್ದಲ್ಲದೇ ತಮಿಳು ಸ್ಟಾರ್ ನಟಿ ನಯನತಾರ ಅವರನ್ನು ಈ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯಿಸಿದ್ದರು. ‘ಸೂಪರ್’ಗೆ ಸಿನಿಪ್ರೇಮಿಗಳು ಫಿದಾ ಆಗಿ ಸೂಪರ್ ಡೂಪರ್ ಎಂದು ಮೆಚ್ಚುಗೆ ಸೂಚಿಸಿದ್ದರು. ಆದರೆ ಈ ಬಾರಿ ಅದಕ್ಕೆ ವಿರುದ್ಧ ಎನ್ನುವಂತಹ ಕಥೆಯನ್ನು ಯುಐ ಚಿತ್ರದಲ್ಲಿ ಹೇಳಲೊರಟಿದ್ದಾರೆ.
ಮನುಷ್ಯನಿಗೆ ನಿಜವಾಗಿಗೂ ಬೇಕಿರುವುದೇನು?: ರಿಯಲ್ ಸ್ಟಾರ್ ಉಪೇಂದ್ರ 8 ವರ್ಷಗಳ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ತಮ್ಮ ವಿಶಿಷ್ಟ ಆಲೋಚನೆಯನ್ನು ತೆರೆ ಮೇಲೆ ತರಲು ಮುಂದಾಗಿದ್ದಾರೆ. ಜಗತ್ತು ವೇಗವಾಗಿ ಬೆಳೆಯುವ ಹಾದಿಯಲ್ಲಿ ಏನೆಲ್ಲಾ ಅನರ್ಥಗಳಾಗುತ್ತಿವೆ? ಮನುಷ್ಯನಿಗೆ ನಿಜವಾಗಿಗೂ ಬೇಕಿರುವುದೇನು? ಆದರೆ ಆತ ಮಾಡುತ್ತಿರುವುದು ಏನು? ಮುಂದೆ ಇದರಿಂದ ಏನೆಲ್ಲಾ ಆಗಬಹುದು ಎನ್ನುವುದನ್ನು ತಮ್ಮದೇ ಶೈಲಿಯಲ್ಲಿ ಹೇಳಲು ಸಜ್ಜಾಗಿದ್ದಾರೆ.
ಸೂಪರ್ ಚಿತ್ರದಲ್ಲಿ ಉಪೇಂದ್ರ 2030ರ ತಮ್ಮ ಕನಸಿನ ಭಾರತವನ್ನು ತೆರೆದಿಟ್ಟಿದ್ದರು. ಆದರೆ ಯು ಐ ಚಿತ್ರದಲ್ಲಿ 2040ರ ವರ್ಷದಲ್ಲಿ ದೇಶ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡು ಕಥೆ ಮಾಡಿದ್ದಾರೆ. ನಾವು ನೀವು ಎಲ್ಲರೂ ನಿಜವಾಗಿಯೂ ಬೇಕಾದ್ದನ್ನು ಬಿಟ್ಟು ಬೇಡದೇ ಇರುವು ವಿಷಯಗಳ ಹಿಂದೆ ಬಿದ್ದಿದ್ದೇವೆ. ಇದರಿಂದ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇನ್ನು 15 ವರ್ಷಗಳಲ್ಲಿ ಪ್ರಪಂಚ ವಿನಾಶದತ್ತು ಹೊರಳುತ್ತದೆ. ನಾವು ನೀವು ಇನ್ನೂ ಕೂಡಾ ಜಾತಿ, ಧರ್ಮ, ಮೊಬೈಲ್ ಗುಂಗಿನಲ್ಲೇ ಇದ್ದೇವೆ ಎಂಬ ಹೊಸ ಆಲೋಚನೆಯೊಂದಿಗೆ ಈ ಸಿನಿಮಾ ಮಾಡಲಾಗಿದೆ.
ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ: ಇಡೀ ಟೀಸರ್‌ನಲ್ಲಿ “ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ” ಎನ್ನುವ ಒಂದೇ ಒಂದು ಡೈಲಾಗ್ ಇದ್ದು ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಗ್ರಾಫಿಕ್ಸ್ ಹೆಚ್ಚಿದೆ. ಇತ್ತೀಚೆಗೆ ನಿಧನರಾದ ನಿರ್ದೇಶಕ ಗುರುಪ್ರಸಾದ್ ನಟನೆಯ ಕೊನೆಯ ಸಿನಿಮಾ ಯು ಐ. ಟೀಸರ್‌ನಲ್ಲಿ ಅವರ ಪಾತ್ರ ಹೈಲೆಟ್ ಆಗಿದೆ.
ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ದುಬಾರಿ ಸಿನಿಮಾ ಇದಾಗಿದೆ. ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ಅಲ್ಲದೇ ತಾಂತ್ರಿಕವಾಗಿಯೂ ಈ ಸಿನಿಮಾ ಅಡ್ವಾನ್ಸ್ ಆಗಿರುತ್ತದೆ ಅನ್ನೋದು ಈ ಟೀಸರ್‌ನಲ್ಲಿ ಗೊತ್ತಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಈ ಸಿನಿಮಾಗಿದೆ. ಚಿತ್ರದಲ್ಲಿ ಉಪೇಂದ್ರ ಅವರ ಜೊತೆ ಸಾಧುಕೋಕಿಲ, ಆರ್ಮುಗ ರವಿಶಂಕರ್ ನಟಿಸಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಸಲಗ ಸಿನಿಮಾದ ಬಳಿಕ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹಾಗೂ ನವೀನ್ ಮನೋಹರ್ ಜೊತೆ ಜಂಟಿಯಾಗಿ ನಿರ್ಮಾಣ ಮಾಡಿರೋ ಯು ಐ ಸಿನಿಮಾದ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಡಿಸೆಂಬರ್ 20ಕ್ಕೆ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.