U19 ಏಷ್ಯಾಕಪ್: ಅಭಿಗ್ಯಾನ್ ಕುಂಡು ದ್ವಿಶತಕ, ಮಲೇಷ್ಯಾ ವಿರುದ್ಧ ಭಾರತ ಯುವ ಪಡೆಯಿಂದ 408 ರನ್‌ಗಳ ಮಹಾಪೂರ

ದುಬೈನಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಷ್ಯಾಕಪ್ (U19 Asia Cup) ಟೂರ್ನಿಯಲ್ಲಿ ಭಾರತ ಯುವ ತಂಡ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ ಬರೋಬ್ಬರಿ 408 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.

ಈ ಅದ್ಭುತ ಇನ್ನಿಂಗ್ಸ್‌ಗೆ ನಾಯಕತ್ವ ವಹಿಸಿದವರು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಭಿಗ್ಯಾನ್ ಕುಂಡು. ಅವರು 125 ಎಸೆತಗಳಲ್ಲಿ 16 ಬೌಂಡರಿ ಮತ್ತು 9 ಸಿಕ್ಸರ್‌ಗಳೊಂದಿಗೆ ಅಜೇಯ 209 ರನ್‌ಗಳ ದ್ವಿಶತಕ ಬಾರಿಸಿ ತಂಡವನ್ನು ದಾಖಲೆ ಮಟ್ಟದ ಮೊತ್ತಕ್ಕೆ ಕೊಂಡೊಯ್ದರು. ಅವರ ಜೊತೆಗೆ ವೇದಾಂತ್ ತ್ರಿವೇದಿ 106 ಎಸೆತಗಳಲ್ಲಿ 90 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದ್ದು, ಈ ಜೋಡಿ ನಾಲ್ಕನೇ ವಿಕೆಟ್‌ಗೆ 209 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿತು.

ಟಾಸ್ ಗೆದ್ದು ಮಲೇಷ್ಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಭಾರತಕ್ಕೆ ಆಘಾತ ಎದುರಾಯಿತು. ನಾಯಕ ಆಯುಷ್ 14 ರನ್‌ಗಳಿಗೆ ಮತ್ತು ವಿಹಾನ್ 7 ರನ್‌ಗಳಿಗೆ ಔಟಾದರು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಸ್ಫೋಟಕ ಆಟವಾಡಿ 26 ಎಸೆತಗಳಲ್ಲಿ ಅರ್ಧಶತಕ (50 ರನ್) ಬಾರಿಸಿ ತಂಡಕ್ಕೆ ವೇಗ ನೀಡಿದರು. ಶತಕದತ್ತ ಸಾಗುವ ವೇಳೆ ಅವರು ಔಟಾದರೂ, ಅವರ ಇನ್ನಿಂಗ್ಸ್ ತಂಡದ ದೊಡ್ಡ ಮೊತ್ತಕ್ಕೆ ಭುನಾದಿ ಹಾಕಿತು.

ಮಲೇಷ್ಯಾ ಪರವಾಗಿ ಮುಹಮ್ಮದ್ ಅಕ್ರಮ್ 89 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು. ಆದರೂ ಭಾರತದ ಬ್ಯಾಟಿಂಗ್ ದಾಳಿಯನ್ನು ತಡೆಯಲು ಮಲೇಷ್ಯಾ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಪಂದ್ಯಕ್ಕೆ ಯೂತ್ ಏಕದಿನ ಅಂತರರಾಷ್ಟ್ರೀಯ (Youth ODI) ಸ್ಥಾನಮಾನ ಇಲ್ಲ. ಮಲೇಷ್ಯಾ ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರವಾಗಿಲ್ಲದ ಕಾರಣ, ಅಭಿಗ್ಯಾನ್ ಕುಂಡು ಅವರ ದ್ವಿಶತಕ ಸೇರಿದಂತೆ ಈ ಪಂದ್ಯದಲ್ಲಿನ ದಾಖಲೆಗಳನ್ನು ಅಧಿಕೃತ ಯೂತ್ ಏಕದಿನ ದಾಖಲೆ ಪಟ್ಟಿಯಲ್ಲಿ ಎಣಿಸಲಾಗುವುದಿಲ್ಲ. ಇದೇ ರೀತಿಯಾಗಿ, ಹಿಂದೆ ಪಾಕಿಸ್ತಾನದ ಸಮೀರ್ ಮಿನ್ಹಾಸ್ ಹಾಗೂ ಬಾಂಗ್ಲಾದೇಶದ ಸೌಮ್ಯ ಸರ್ಕಾರ್ ಸಾಧನೆಗಳನ್ನೂ ದಾಖಲೆಗಳಾಗಿ ಪರಿಗಣಿಸಲಾಗಿರಲಿಲ್ಲ.

ಒಟ್ಟಾರೆ, ದಾಖಲೆ ಪಟ್ಟಿಗೆ ಸೇರದಿದ್ದರೂ, ಭಾರತ ಯುವ ತಂಡದ ಈ ಪ್ರದರ್ಶನ ಟೂರ್ನಿಯಲ್ಲಿನ ಅವರ ಬಲಿಷ್ಠತೆ ಮತ್ತು ಬ್ಯಾಟಿಂಗ್ ಆಳವನ್ನು ಸ್ಪಷ್ಟವಾಗಿ ತೋರಿಸಿದೆ.

Leave a Reply

Your email address will not be published. Required fields are marked *