
ಯುಗಾದಿ ಹಬ್ಬವನ್ನು ಯುಗದ ಆದಿ ಎಂದೂ ಕರೆಯುತ್ತಾರೆ. ಇದರರ್ಥ ‘ಹೊಸ ಯುಗದ ಆರಂಭ’. ಹಿಂದೂ ಪಂಚಾಂಗದ ಪ್ರಕಾರ, ಪ್ರಸ್ತುತ ಫಾಲ್ಗುಣ ಮಾಸ, ಮಂಗಳಕರವಾದ ನಾಮ ವರ್ಷವು ಮಾರ್ಚ್ 29ರಂದು ಕೊನೆಗೊಳ್ಳುತ್ತದೆ. ಅದಾದ ನಂತರ ಮಾರ್ಚ್ 30ರಿಂದ ಚೈತ್ರ ಮಾಸ ಆರಂಭವಾಗಲಿದೆ.

ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಆ ದಿನದಿಂದ ‘ಶುಭಕೃತು ನಾಮ ಸಂವತ್ಸರ’ ಪ್ರಾರಂಭವಾಗುತ್ತದೆ. ಶುಭಕೃತ ನಾಮ ಸಂವತ್ಸರದಲ್ಲಿ ಯುಗಾದಿ ಹಬ್ಬವನ್ನು ಮಾರ್ಚ್ 30 ಭಾನುವಾರ ಅಂದ್ರೆ ಇಂದು ಆಚರಿಸಲಾಗುತ್ತಿದೆ.

ಹೊಸ ವರ್ಷದ ಆರಂಭವನ್ನು ಸೂಚಿಸುವ ಹಬ್ಬ
ಯುಗಾದಿಯು ಹಿಂದೂ ಹೊಸ ವರ್ಷದ ಆರಂಭವನ್ನು ಸೂಚಿಸುವ ಹಬ್ಬವಾಗಿದೆ. ಯುಗಾದಿ ಎನ್ನುವ ಪದವು ‘ಯುಗ’ ಮತ್ತು ‘ಆದಿ’ (ಆರಂಭ) ಸಂಸ್ಕೃತ ಪದಗಳಿಂದ ಹುಟ್ಟಿಕೊಂಡಿವೆ, ಇದು ‘ಹೊಸ ಯುಗದ ಆರಂಭ’ವನ್ನು ಸೂಚಿಸುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಸಾಮಾನ್ಯವಾಗಿ ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಬರುವ ಈ ದಿನವು ಹಿಂದೂಗಳಿಗೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಮತ್ತು ಕರ್ನಾಟಕದಲ್ಲಿ ಯುಗಾದಿ ಎಂದು ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಇದು ಅನಾದಿ ಕಾಲದ ಸಂಪ್ರದಾಯವಾಗಿದೆ.

ಈ ವಿಶೇಷ ದಿನದಂದು ಜನರು ಮುಂಜಾನೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆಯನ್ನು ಧರಿಸಿ, ಬೇವು ಬೆಲ್ಲ ತಿಂದು ಮನೆಯನ್ನು ಶುದ್ಧಗೊಳಿಸಿ ರಂಗೋಲಿ ಹಾಕಿ, ತೋರಣ ಕಟ್ಟಿ ದೇವರಿಗೆ ಪೂಜೆಯನ್ನು ಮಾಡಿ, ನೈವೇದ್ಯವನ್ನು ಅರ್ಪಿಸಿ, ಮನೆಯ ಸದಸ್ಯರೆಲ್ಲಾ ಸಿಹಿ ತಿನ್ನುವ ಸಂಪ್ರದಾಯವಿದೆ. ಈ ದಿನ 6 ಸ್ವಾದಗಳುಳ್ಳ ಪಚಡಿ ಎಂಬ ವಿಶೇಷ ಭಕ್ಷ್ಯವನ್ನು ತಯಾರಿಸಿ ಪರಸ್ಪರ ಹಂಚಿಕೊಳ್ಳುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ.
ಯುಗಾದಿ ಇತಿಹಾಸ
ಸೃಷ್ಟಿಕರ್ತನಾದ ಬ್ರಹ್ಮ ದೇವರು ಯುಗಾದಿಯಂದು ಬ್ರಹ್ಮಾಂಡವನ್ನು ಸೃಷ್ಟಿಸಿದ ಎಂಬುದು ಈ ಹಬ್ಬದ ಕಥೆ. ವಸಂತ ನವರಾತ್ರಿಯ 9 ದಿನಗಳ ಉತ್ಸವವು ಈ ದಿನದಂದು ಪ್ರಾರಂಭವಾಗುತ್ತದೆ ಮತ್ತು ರಾಮ ನವಮಿಯಂದು ಕೊನೆಗೊಳ್ಳುತ್ತದೆ. ಈ ದಿನ, ಚೈತ್ರ ಶುದ್ಧ ಪಾಡ್ಯಮಿ ಅಥವಾ ಯುಗಾದಿ ದಿನದಂದು ಬ್ರಹ್ಮ ದೇವರು ಆ ಸೃಷ್ಟಿಯನ್ನು ಪ್ರಾರಂಭಿಸಿದನು ಎಂದು ಹಿಂದೂಗಳು ನಂಬುತ್ತಾರೆ. 12ನೇ ಶತಮಾನದಲ್ಲಿ ಮಾಡಿದ ಭಾರತೀಯ ಗಣಿತಶಾಸ್ತ್ರಜ್ಞ ಭಾಸ್ಕರಾಚಾರ್ಯ ಅವರ ಖಗೋಳಶಾಸ್ತ್ರದ ಲೆಕ್ಕಾಚಾರಗಳು ಯುಗಾದಿಯ ದಿನಾಂಕದ ಸೂರ್ಯೋದಯದಿಂದ ಹೊಸ ವರ್ಷ, ಹೊಸ ತಿಂಗಳು ಮತ್ತು ಹೊಸ ದಿನ ಎಂದು ನಿರ್ಧರಿಸಿದವು.
ಯುಗಾದಿ ಹಬ್ಬದ ಹಿನ್ನೆಲೆ
ಯುಗಾದಿಗೆ ತನ್ನದೇ ಆದ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯಿದೆ. ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಶಬ್ದಗಳಿಂದ ಯುಗಾದಿ ಉಗಮವಾಗಿದೆ. ಕನ್ನಡದಲ್ಲಿ ಹೊಸ ವರ್ಷ ‘ಆರಂಭ’ ಎಂದೇ ಇದರರ್ಥ. ಇದೇ ದಿನ ಅಂದರೆ, ಚೈತ್ರಶುದ್ಧ ಪಾಡ್ಯದ ಸೂರ್ಯೋದಯ ಸಮಯಕ್ಕೆ ಬ್ರಹ್ಮ ವಿಶ್ವವನ್ನು ಸೃಷ್ಟಿಸಿದನೆಂದೂ, ಸತ್ಯ ಯುಗ ಅಂದೇ ಆರಂಭವಾಯಿತೆಂದೂ, ರಾವಣನನ್ನು ಸಂಹರಿಸಿ ವಿಜಯಿಯಾಗಿ ಹಿಂದಿರುಗಿದ ಶ್ರೀರಾಮನ ಪಟ್ಟಾಭಿಷೇಕದ ದಿನವೆಂದೂ ಪುರಾಣವಿದೆ. ಸೂರ್ಯನ ಮೊದಲ ಕಿರಣ ಭುವಿಯನ್ನು ಸ್ಪರ್ಶಿಸಿದ ದಿನವೆಂತಲೂ ಪ್ರತೀತಿ ಇದೆ. ಇದು ರಾಮನು ವಾಲಿಯನ್ನು ವಧಿಸಿದ ದಿನವೆಂದೂ, ಮಹಾ ವಿಷ್ಣು ಮತ್ಸ್ಯಾವತಾರ ತಾಳಿದ ದಿನವೆಂದೂ ಹೇಳುತ್ತದೆ ಪುರಾಣ. ಅಂದೇ ಶಾಲಿವಾಹನ ಶಕೆ ಆರಂಭಗೊಂಡಿತೆಂಬ ಒಂದು ಕತೆಯೂ ಇದೆ.
ಯುಗಾದಿಯನ್ನು ಹೇಗೆ ಆಚರಿಸಲಾಗುತ್ತದೆ?
ಜನರು ಯುಗಾದಿ ಹಬ್ಬದ ತಯಾರಿಯನ್ನು ಒಂದು ವಾರ ಮುಂಚಿತವಾಗಿಯೇ ಪ್ರಾರಂಭಿಸುತ್ತಾರೆ ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು, ಹೊಸ ಬಟ್ಟೆಗಳನ್ನು ಖರೀದಿಸುವುದು ಮುಂತಾದ ಸಂಪ್ರದಾಯಗಳನ್ನು ಇದು ಒಳಗೊಂಡಿರುತ್ತದೆ. ಯುಗಾದಿಯಂದು ಜನರು ಬೆಳಗಾಗುವ ಮೊದಲು ಎದ್ದೇಳುತ್ತಾರೆ, ನಂತರ ಅಭ್ಯಂಗ ಸ್ನಾನ ಎಂದರೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿದ ನಂತರ ತಲೆ ಸ್ನಾನ ಮಾಡುತ್ತಾರೆ. ಯುಗಾದಿ ವಸಂತ ಮತ್ತು ಬೆಚ್ಚಗಿನ ಹವಾಮಾನದ ಬರುವಿಕೆಯನ್ನು ಸೂಚಿಸುತ್ತದೆ. ಈ ಹಬ್ಬವು ಸಮೃದ್ಧಿ ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ. ಆದ್ದರಿಂದ, ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಈ ದಿನವನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಬಹುದು.
ವಿವಿಧ ಹೆಸರಿನಲ್ಲಿ ಆಚರಣೆ
ದೇಶದ ಇತರೆ ಭಾಗಗಳಲ್ಲಿ ಈ ದಿನವನ್ನು ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ, ಪಂಜಾಬ್‌ನಲ್ಲಿ ಬೈಸಾಖಿ, ಸಿಂಧಿಗಳಲ್ಲಿ ಚೈತಿ ಚಂದ್, ತಮಿಳುನಾಡಿನಲ್ಲಿ ಪುತಾಂಡು ಮತ್ತು ರಾಜಸ್ಥಾನದಲ್ಲಿ ಥಾಪನಾ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.
Source: Vishwavani