ಉಳವಿ ಚನ್ನಬಸವೇಶ್ವರ ಪಾದಯಾತ್ರೆ: ಲಿಂಗಾಯತ ಧರ್ಮ ಜಾಗೃತಿಗೆ ಜಂಗಮರ ಜನಪರ ಹೆಜ್ಜೆ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಡಿ. 09:
ಉಳವಿ ಚನ್ನಬಸವಣ್ಣನವರ ಐತಿಹಾಸಿಕ ರಥೋತ್ಸವದ ಅಂಗವಾಗಿ ಲಿಂಗಾಯತ ಧರ್ಮ ಜಾಗೃತಿಗೆ ಮಹತ್ವದ ಹೆಜ್ಜೆಯಾಗಿ ಜಂಗಮರ ಪಾದಯಾತ್ರೆ ಕೈಗೊಳ್ಳುವ ಕುರಿತು ಹೊಳಲ್ಕೆರೆಯ ಒಂಟಿ ಕಂಬದ ಮುರುಘಾ ಮಠದಲ್ಲಿ ಸಭೆ ಸೇರಿತು. ಹಲವು ಬಸವಪರ ಸಂಘಟನೆಗಳು, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಉಳವಿ ಚನ್ನಬಸವೇಶ್ವರ ಪಾದಯಾತ್ರೆ ಸಮಿತಿಯ ಸಹಯೋಗದಲ್ಲಿ ಈ ಸಭೆ ನಡೆಸಲ್ಪಟ್ಟಿತು.

ಸಭೆಯನ್ನು ಶ್ರೀ ತಿಪ್ಪೇರುದ್ರಸ್ವಾಮಿಗಳ ಸಮ್ಮುಖದಲ್ಲಿ ನಡೆಸಲಾಗಿದ್ದು, ಪಾದಯಾತ್ರೆಯ ಮುಖ್ಯ ಉದ್ದೇಶವನ್ನು ಅವರು ವಿವರಿಸಿದರು. ಇತ್ತೀಚಿನ ದಿನಮಾನಗಳಲ್ಲಿ ಲಿಂಗಾಯತ ಸಮುದಾಯದಲ್ಲಿ ಧಾರ್ಮಿಕ ಶ್ರದ್ಧೆ ಕುಂದಿರುವುದನ್ನು ಅವರು ಉಲ್ಲೇಖಿಸಿ, ಪಾದಯಾತ್ರೆ ಮೂಲಕ ಹಳ್ಳಿಹಳ್ಳಿಗಳಲ್ಲಿ ಬಸವ ಧರ್ಮದ ಜಾಗೃತಿ ಮೂಡಿಸುವುದು, ಶರಣರ ತತ್ವಗಳನ್ನು ಜನರಿಗೆ ಪರಿಚಯಿಸುವುದು ಅತ್ಯವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪಾದಯಾತ್ರೆಯ ಬಳಿಕ ಉಳವಿಯಲ್ಲಿ ಮೂರು ದಿನಗಳ ಅನ್ನದಾಸೋಹದ ವ್ಯವಸ್ಥೆಯೂ ಮಾಡಲಾಗುವುದು ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ನಂದೀಶ್ ಮಾತನಾಡಿ, ಲಿಂಗಾಯತ ಧರ್ಮ 900 ವರ್ಷಗಳ ವೈಭವ ಹೊಂದಿದ ಜಾತ್ಯತೀತ ಧರ್ಮವಾಗಿದ್ದರೂ ಇತ್ತೀಚಿನ ಯುವ ಪೀಳಿಗೆಯಲ್ಲಿ ಧರ್ಮಶ್ರದ್ಧೆ ಕುಂದಿದೆ ಎಂದು ತಿಳಿಸಿದರು. ವಚನಗಳ ತಿರುಚು, ಲಿಂಗಾಯತ ಧರ್ಮವನ್ನು ಅಸ್ತಿತ್ವವಿಲ್ಲದಂತೆ ತೋರಿಸಲು ಕೆಲವು ಕುತಂತ್ರಿಗಳು ಮಾಡುತ್ತಿರುವ ಪ್ರಯತ್ನಗಳ ವಿರುದ್ಧ ಸಂಘಟಿತವಾಗಿ ನಿಲ್ಲಬೇಕೆಂದು ಕರೆ ನೀಡಿದರು.

ಜಿಲ್ಲಾ ಲಿಂಗಾಯತ ಮಹಾಸಭಾ ಅಧ್ಯಕ್ಷ ಕೆಂಚವೀರಪ್ಪ ಮಾತನಾಡಿ ಹೊಳಲ್ಕೇರೆಯಲ್ಲಿ ಶೀಘ್ರದಲ್ಲೇ ತಾಲೂಕು ಶಾಖೆ ಸ್ಥಾಪಿಸಿ ಸದಸ್ಯತ್ವ ಹೆಚ್ಚಿಸಲು ಮನವಿ ಮಾಡಿದರು.

ಸಭೆಯಲ್ಲಿ ಖಜಾಂಚಿ ವಾಗೀಶ್, ಕಾರ್ಯದರ್ಶಿ ಧನಂಜಯ್, ರೈತ ಮುಖಂಡರು ಸೇರಿದಂತೆ ನುಲೆನೂರು, ಗಿಲ್ಕೇನಹಳ್ಳಿ, ಈಚಗಟ್ಟ ಸೇರಿದಂತೆ ಹಲವಾರು ಗ್ರಾಮಸ್ಥರು ಭಾಗವಹಿಸಿದ್ದರು. ಪಾದಯಾತ್ರೆಗೆ ಭಾರೀ ಬೆಂಬಲ ಸೂಚನೆಯೊಂದಿಗೆ ಸಭೆ ಯಶಸ್ವಿಯಾಯಿತು.

Leave a Reply

Your email address will not be published. Required fields are marked *