Umran Malik: ಬೆಂಕಿ ಬೌಲಿಂಗ್​ ಮೂಲಕ ಹೊಸ ದಾಖಲೆ ಬರೆದ ಉಮ್ರಾನ್ ಮಲಿಕ್

Fastest ball by an Indian in ODI: 156 Kmph by Umran Malik

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ವೇಗಿ ಉಮ್ರಾನ್ ಮಲಿಕ್ ಭರ್ಜರಿ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ 14ನೇ ಓವರ್​ನಲ್ಲಿ ಎಸೆದ 4ನೇ ಎಸೆತವು ಹೊಸ ದಾಖಲೆಗೆ ಕಾರಣವಾಗಿದೆ. ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆ ದಾಖಲೆ ಇದೀಗ ಉಮ್ರಾನ್ ಮಲಿಕ್ ಪಾಲಾಗಿದೆ.
2018ರ ಬಾರ್ಡರ್‌- ಗವಾಸ್ಕರ್‌ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಸ್‌ಪ್ರೀತ್‌ ಬೂಮ್ರಾ ಗಂಟೆಗೆ 153.2 ಕಿ.ಮಿ ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದಿದ್ದರು.

ಈ ದಾಖಲೆಯನ್ನು ಇತ್ತೀಚೆಗಷ್ಟೇ ಉಮ್ರಾನ್ ಮಲಿಕ್ ಮುರಿದಿದ್ದರು. ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 155 kmph ವೇಗದಲ್ಲಿ ಚೆಂಡೆಸೆದು ಜಮ್ಮು ಎಕ್ಸ್​ಪ್ರೆಸ್ ಹೊಸ ಇತಿಹಾಸ ಬರೆದಿದ್ದರು. ಇದೀಗ ಏಕದಿನ ಕ್ರಿಕೆಟ್​ನಲ್ಲೂ ಅತ್ಯಂತ ವೇಗವಾಗಿ ಚೆಂಡೆಸೆದ ಭಾರತೀಯ ಬೌಲರ್​ ಎನಿಸಿಕೊಂಡಿದ್ದಾರೆ.

23 ವರ್ಷದ ಯುವ ಉಮ್ರಾನ್ ಮಲ್ಲಿಕ್ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 156 kmph ಬೌಲಿಂಗ್ ಮಾಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ ಮೂಲಕ ಬರೆದಿದ್ದ ತನ್ನದೇ ದಾಖಲೆಯನ್ನು ಉಮ್ರಾನ್ ಮಲಿಕ್ ಮುರಿದಿರುವುದು ವಿಶೇಷ.

ಪಂದ್ಯದ 14ನೇ ಓವರ್‌ನಲ್ಲಿ ಉಮ್ರಾನ್ ಅವರ ವೇಗ ಹೀಗಿತ್ತು:-

  • ಮೊದಲ ಎಸೆತ: 147 kmph
  • ಎರಡನೇ ಎಸೆತ: 151 kmph
  • ಮೂರನೇ ಎಸೆತ: 151 kmph
  • ನಾಲ್ಕನೇ ಎಸೆತ: 156 kmph
  • ಐದನೇ ಎಸೆತ: 146 kmph
  • ಆರನೇ ಎಸೆತ: 145 kmph

ಇನ್ನು ಜಾಗತಿಕ ಕ್ರಿಕೆಟ್​ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರ ಹೆಸರಿನಲ್ಲಿದೆ. ಅಖ್ತರ್ 161 ಕಿ.ಮಿ ವೇಗದಲ್ಲಿ ಬೌಲಿಂಗ್ ಮಾಡಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಉಮ್ರಾನ್ ಮಲಿಕ್ ಮುರಿಯಲಿದ್ದಾರಾ ಕಾದು ನೋಡಬೇಕಿದೆ.

ಟೀಮ್ ಇಂಡಿಯಾಗೆ ಭರ್ಜರಿ ಜಯ:

ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 143 ರನ್​ಗಳ ಜೊತೆಯಾಟವಾಡಿದ ಶುಭ್​ಮನ್ ಗಿಲ್ 70 ರನ್ ಬಾರಿಸಿ ಔಟಾದರು. ಇದರ ಬೆನ್ನಲ್ಲೇ 67 ಎಸೆತಗಳಲ್ಲಿ 83 ರನ್​ ಬಾರಿಸಿದ್ದ ರೋಹಿತ್ ಶರ್ಮಾ ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಭರ್ಜರಿ ಇನಿಂಗ್ಸ್ ಆಡಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ 47 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಬೆನ್ನಲ್ಲೇ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ವಿರಾಟ್ ಕೊಹ್ಲಿಯ ಕ್ಯಾಚ್ ಕೈಚೆಲ್ಲಿದ್ದರು. ಇದರ ಸಂಪೂರ್ಣ ಲಾಭ ಪಡೆದ ಕಿಂಗ್ ಕೊಹ್ಲಿ 80 ಎಸೆತಗಳಲ್ಲಿ 10 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ ವಿರಾಟ್ ಕೊಹ್ಲಿ ಶತಕ ಪೂರೈಸಿದರು. ಈ ಮೂಲಕ 7 ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾ 373 ರನ್​ ಕಲೆಹಾಕಿತು.

374 ರನ್​ಗಳ ಕಠಿಣ ಗುರಿ ಪಡೆದ ಶ್ರೀಲಂಕಾ ಪರ ನಾಯಕ ದುಸನ್ ಶಾನಕ ಭರ್ಜರಿ ಶತಕ ಬಾರಿಸಿದರು. 88 ಎಸೆತಗಳನ್ನು ಎದುರಿಸಿದ ಶಾನಕ 3 ಸಿಕ್ಸ್ ಹಾಗೂ 12 ಫೋರ್​ನೊಂದಿಗೆ ಅಜೇಯ 108 ರನ್ ಕಲೆಹಾಕಿದ್ದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಶ್ರೀಲಂಕಾ ತಂಡವು 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 306 ರನ್​ಗಳಿಸಷಲಷ್ಟೇ ಶಕ್ತರಾದರು. ಇದರೊಂದಿಗೆ ಟೀಮ್ ಇಂಡಿಯಾ 67 ರನ್​ಗಳ ಭರ್ಜರಿ ಜಯ ಸಾಧಿಸಿತು. ಟೀಮ್ ಇಂಡಿಯಾ ಪರ ಉಮ್ರಾನ್ ಮಲಿಕ್ 3 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದು ಮಿಂಚಿದರು.

 

 

source https://tv9kannada.com/sports/cricket-news/fastest-ball-by-an-indian-in-odi-156-kmph-by-umran-malik-kannada-news-zp-au50-499045.html

Leave a Reply

Your email address will not be published. Required fields are marked *