ಯುನೆಸ್ಕೊ ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಗೆ ಭಾರತದ 6 ತಾಣಗಳು ಸೇರ್ಪಡೆ; ಯಾವವು ಆ ಸ್ಥಳಗಳು?

ನವದೆಹಲಿ: ಅಶೋಕನ ಶಾಸನ ತಾಣಗಳು ಮತ್ತು ವಿವಿಧ ರಾಜ್ಯಗಳಲ್ಲಿ ಹರಡಿರುವ ಚೌಸತ್ ಯೋಗಿನಿ ದೇವಾಲಯಗಳು ಸೇರಿದಂತೆ ಆರು ಸ್ಥಳಗಳನ್ನು ಯುನೆಸ್ಕೋದ ವಿಶ್ವ ಪರಂಪರೆ ಕೇಂದ್ರವು ಭಾರತದ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರಿಸಿದೆ.

ಈ ತಾಣಗಳನ್ನು ಮಾರ್ಚ್ 7 ರಂದು ಪಟ್ಟಿಗೆ ಸೇರಿಸಲಾಗಿದೆ ಎಂದು ಯುನೆಸ್ಕೋಗೆ ಭಾರತದ ಖಾಯಂ ನಿಯೋಗ ಹೇಳಿಕೆಯಲ್ಲಿ ತಿಳಿಸಿದೆ. ಯುನೆಸ್ಕೋದ ಭಾರತ ವಿಭಾಗವು ಗುರುವಾರ ತಡರಾತ್ರಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಈ ಹೇಳಿಕೆಯನ್ನು ಶೇರ್ ಮಾಡಿದೆ.

ಭವಿಷ್ಯದಲ್ಲಿ ಸ್ಥಳವೊಂದನ್ನು ವಿಶ್ವ ಪರಂಪರೆಯ ಪಟ್ಟಿಗೆ ನಾಮನಿರ್ದೇಶನ ಮಾಡಬೇಕಾದರೆ ವಿಶ್ವ ಪರಂಪರೆ ಕೇಂದ್ರದ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗುವುದು ಕಡ್ಡಾಯವಾಗಿದೆ ಎಂದು ಅದು ಹೇಳಿದೆ.

ಯಾವ ರಾಜ್ಯದ ಯಾವ ತಾಣಗಳು ಈ ಪಟ್ಟಿಗೆ ಸೇರ್ಪಡೆ: ತಾತ್ಕಾಲಿಕ ಪಟ್ಟಿಗೆ ಸೇರಿಸಲಾದ ಆರು ಸ್ಥಳಗಳಲ್ಲಿ ಛತ್ತೀಸ್ ಗಢದ ಕಂಗರ್ ಕಣಿವೆ ರಾಷ್ಟ್ರೀಯ ಉದ್ಯಾನ, ತೆಲಂಗಾಣದ ಮುದುಮಲ್ ಮೆಗಾಲಿಥಿಕ್ ಮೆನ್ಹಿರ್ ಗಳು, ಮೌರ್ಯರ ಕಾಲದ (ಬಹು ರಾಜ್ಯಗಳು) ಅಶೋಕನ ಶಾಸನ ತಾಣಗಳ ಸರಣಿ, ಚೌಸತ್ ಯೋಗಿನಿ ದೇವಾಲಯಗಳ ಸರಣಿ (ಅನೇಕ ರಾಜ್ಯಗಳು), ಉತ್ತರ ಭಾರತದ (ಅನೇಕ ರಾಜ್ಯಗಳು) ಗುಪ್ತ ದೇವಾಲಯಗಳು ಮತ್ತು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಬುಂದೇಲರ ಅರಮನೆ – ಕೋಟೆಗಳು ಸೇರಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾತ್ಕಾಲಿಕ ಪಟ್ಟಿಯಲ್ಲಿ ಭಾರತದ 62 ತಾಣಗಳು: ಈ ಸೇರ್ಪಡೆಗಳೊಂದಿಗೆ ಭಾರತವು ಈಗ ತಾತ್ಕಾಲಿಕ ಪಟ್ಟಿಯಲ್ಲಿ 62 ತಾಣಗಳನ್ನು ಹೊಂದಿದೆ. ‘ತಾತ್ಕಾಲಿಕ ಪಟ್ಟಿ’ಯು ಯುನೆಸ್ಕೋ ನಾಮನಿರ್ದೇಶನಕ್ಕಾಗಿ ಪ್ರತಿ ದೇಶವು ಪರಿಗಣಿಸಲು ಬಯಸುವ ತನ್ನ ತಾಣಗಳ ಪಟ್ಟಿಯಾಗಿದೆ.

ಏನಿದು ಚೌಸತ್​​ ಯೋಗಿನಿ ದೇವಾಲಯಗಳು?: ಯುನೆಸ್ಕೋ ವೆಬ್ ಸೈಟ್ ಪ್ರಕಾರ, ಚೌಸತ್ ಯೋಗಿನಿ ದೇವಾಲಯಗಳು ದೇಶದ ಅನೇಕ ಸ್ಥಳಗಳಲ್ಲಿನ ತಾಣಗಳನ್ನು ಒಳಗೊಂಡಿವೆ. “ಚೌಸತ್ ಯೋಗಿನಿ ದೇವಾಲಯಗಳು ಪ್ರತ್ಯೇಕ ದೇವಾಲಯಗಳಲ್ಲಿ ಯೋಗಿನಿಗಳ 64 ಚಿತ್ರಗಳನ್ನು ಹೊಂದಿದ್ದು, ಇವುಗಳಲ್ಲಿ ಸಂಕೀರ್ಣವಾದ ಕಲ್ಲಿನ ಕೆತ್ತನೆಗಳನ್ನು ವೃತ್ತಾಕಾರವಾಗಿ ಜೋಡಿಸಲಾಗಿದೆ. ಈ ದೇವಾಲಯಗಳು ಹೆಚ್ಚಾಗಿ ಬೆಟ್ಟದ ತುದಿಗಳಲ್ಲಿವೆ. ‘ಯೋಗಿನಿ’ ಎಂಬುದು ಯೋಗಾಭ್ಯಾಸ ಮಾಡುವ ಮಹಿಳಾ ಸಾಧಕಿಯನ್ನು ಸೂಚಿಸುತ್ತದೆ ಮತ್ತು ‘ಚೌಸತ್’ ಎಂಬುದು 64 ಸಂಖ್ಯೆಯ ಹಿಂದಿ ಪದವಾಗಿದೆ. ಯೋಗಿನಿಗಳ ಸಂಖ್ಯೆ 64 ಮತ್ತು ಆದ್ದರಿಂದ ಇದನ್ನು ಚೌಸತ್ ಯೋಗಿನಿ ಎಂದು ಕರೆಯಲಾಗುತ್ತದೆ. ಇವರು ಅರಣ್ಯ ಚೇತನಗಳು ಮತ್ತು ತಾಯಿ ದೇವತೆಗಳ ಗುಂಪು” ಎಂದು ಯುನೆಸ್ಕೋ ವೆಬ್ ಸೈಟ್​ನಲ್ಲಿನ ವಿವರಣೆಯಲ್ಲಿ ತಿಳಿಸಲಾಗಿದೆ.

ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಪ್ರಸ್ತುತ 43 ತಾಣಗಳು: ಪ್ರಸ್ತುತ, ಭಾರತದ ಒಟ್ಟು 43 ತಾಣಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೆರ್ಪಡೆ ಮಾಡಲಾಗಿದೆ. ಇದರಲ್ಲಿ 35 ‘ಸಾಂಸ್ಕೃತಿಕ’ ವಿಭಾಗದಲ್ಲಿ, ಏಳು ‘ನೈಸರ್ಗಿಕ’ ಮತ್ತು ಒಂದು ‘ಮಿಶ್ರ’ ವಿಭಾಗದಲ್ಲಿದೆ.

Source : https://www.etvbharat.com/kn/!bharat/6-indian-sites-added-to-unesco-world-heritage-provisional-list-karnataka-news-kas25031402814

Leave a Reply

Your email address will not be published. Required fields are marked *