
ತುಮಕೂರು: ಅನುದಾನ ಕೊರತೆಯಿಂದ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನಕ್ಕೆ ಬಂದಿದೆ. ಕೂಡಲೇ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ತಾಲ್ಲೂಕಿನ ಬೆಳ್ಳಾವಿಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘₹400 ಕೋಟಿ ಅನುದಾನ ನೀಡಲು ಆಗದೆ ವಿಶ್ವವಿದ್ಯಾಲಯ ಮುಚ್ಚಲು ಸರ್ಕಾರ ತೀರ್ಮಾನಿಸಿರುವುದು ಬಹಳ ದುರಾದೃಷ್ಟಕರ.
ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಬಿಜೆಪಿ ಸರ್ಕಾರದಲ್ಲಿ ಆರಂಭಿಸಿದ್ದ ವಿ.ವಿಗಳನ್ನು ಮುಚ್ಚಲು ಕಾಂಗ್ರೆಸ್ ಮುಂದಾಗಿದೆ. ಇದರಿಂದ ಮಕ್ಕಳಿಗೆ ಅನ್ಯಾಯವಾಗುತ್ತದೆ’ ಎಂದರು.
ಬಿಜೆಪಿ ರಾಜ್ಯ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಯಾವಾಗ ಬೇಕಾದರೂ ಕೇಂದ್ರದ ವರಿಷ್ಠರು ರಾಜ್ಯಕ್ಕೆ ಭೇಟಿ ನೀಡಬಹುದು. ಶಾಸಕರ ಜತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಫೆ.20ರ ಒಳಗೆ ಅಧ್ಯಕ್ಷರ ಆಯ್ಕೆಯಾಗಲಿದೆ ಎಂದು ಹೇಳಿದರು.