ಮುಂಬೈಗೆ ಸುಲಭ ಜಯ; ಲೀಗ್ ಹಂತದಲ್ಲೇ ಪ್ರಯಾಣ ಮುಗಿಸಿದ ಯುಪಿ ವಾರಿಯರ್ಸ್.

ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ ಮೂರನೇ ಬಾರಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಸನಿಹದಲ್ಲಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ತಂಡವು ತನ್ನ ಆರನೇ ಪಂದ್ಯದಲ್ಲಿ ಅದ್ಭುತ ಗೆಲುವು ಸಾಧಿಸಿ ಮುಂದಿನ ಸುತ್ತು ತಲುಪುವ ಭರವಸೆಯನ್ನು ಇನ್ನಷ್ಟು ಬಲಪಡಿಸಿದೆ. ಲಕ್ನೋದಲ್ಲಿ ನಡೆದ ಈ ಪಂದ್ಯದಲ್ಲಿ, ಹೇಲಿ ಮ್ಯಾಥ್ಯೂಸ್ ಅವರ ಅದ್ಭುತ ಆಲ್‌ರೌಂಡ್ ಪ್ರದರ್ಶನ ಮತ್ತು ಅಮೆಲಿಯಾ ಕಾರ್ ಅವರ 5 ವಿಕೆಟ್‌ಗಳ ಆಧಾರದ ಮೇಲೆ ಮುಂಬೈ ತಂಡ, ಯುಪಿ ವಾರಿಯರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಮತ್ತೆ ಎರಡನೇ ಸ್ಥಾನಕ್ಕೇರಿದರೆ, ಇತ್ತ ಈ ಸೋಲಿನೊಂದಿಗೆ ಯುಪಿಯ ಪ್ರಯಾಣ ಲೀಗ್ ಹಂತದಲ್ಲೇ ಬಹುತೇಕ ಅಂತ್ಯಗೊಂಡಿದೆ.

ಜಾರ್ಜಿಯಾ, ಕಾರ್ ಪ್ರತಿದಾಳಿ

ಲಕ್ನೋದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್​ ತಂಡವು ಭರ್ಜರಿ ಆರಂಭ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಆರಂಭಿಕ ಜೋಡಿ ಗ್ರೇಸ್ ಹ್ಯಾರಿಸ್ (28) ಮತ್ತು ಜಾರ್ಜಿಯಾ ವಾಲ್ ಕೇವಲ ಎಂಟು ಓವರ್‌ಗಳಲ್ಲಿ 74 ರನ್‌ಗಳನ್ನು ಸೇರಿಸುವ ಮೂಲಕ ಸ್ಫೋಟಕ ಆರಂಭವನ್ನು ನೀಡಿದರು. ಹ್ಯಾರಿಸ್ ನಿಧಾನವಾಗಿ ಬ್ಯಾಟಿಂಗ್ ಮಾಡಿದರಾದರೂ ತಂಡದ ಸಹ ಆಟಗಾರ್ತಿ ಜಾರ್ಜಿಯಾ ವಾಲ್ ಸ್ಫೋಟಕ ಅರ್ಧಶತಕ ಗಳಿಸಿದರು.

21 ವರ್ಷದ ಜಾರ್ಜಿಯಾ ವಾಲ್ ಕಳೆದ ಪಂದ್ಯದಲ್ಲಿ WPL ಗೆ ಪಾದಾರ್ಪಣೆ ಮಾಡಿದರಾದರೂ ಆ ಪಂದ್ಯದಲ್ಲಿ ಅವರಿಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ವಾಲ್ ಕೇವಲ 33 ಎಸೆತಗಳಲ್ಲಿ 55 ರನ್ ಗಳಿಸಿದರು. ಉತ್ತಮ ಆರಂಭದ ಹೊರತಾಗಿಯೂ, ಅಮೆಲಿಯಾ ಕಾರ್ (5/38) ಮತ್ತು ಹೇಲಿ ಮ್ಯಾಥ್ಯೂಸ್ (2/25) ಅವರ ಸ್ಪಿನ್ ಜೋಡಿ ವಿಕೆಟ್‌ಗಳನ್ನು ಕಬಳಿಸಿದ್ದರಿಂದ ಯುಪಿ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ವಿಫಲವಾಯಿತು. ಕೊನೆಯಲ್ಲಿ, ಸೋಫಿ ಎಕ್ಲೆಸ್ಟೋನ್ 16 ರನ್ ಗಳಿಸಿ ತಂಡವನ್ನು 9 ವಿಕೆಟ್ ನಷ್ಟಕ್ಕೆ 150 ರನ್‌ಗಳ ಗಡಿ ದಾಟಿಸಿದರು.

ಮ್ಯಾಥ್ಯೂಸ್-ಸಿವರ್ ಬ್ರಂಟ್ ಮ್ಯಾಜಿಕ್

ಈ ಗುರಿ ಬೆನ್ನಟ್ಟಿದ ಮುಂಬೈ ಕೂಡ ಸ್ಫೋಟಕ ಆರಂಭ ಪಡೆಯಿತು. ಮ್ಯಾಥ್ಯೂಸ್ (68) ಮತ್ತು ನ್ಯಾಟ್ ಸಿವರ್-ಬ್ರಂಟ್ (37) ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ ಕೇವಲ 57 ಎಸೆತಗಳಲ್ಲಿ 92 ರನ್‌ಗಳ ಸ್ಫೋಟಕ ಜೊತೆಯಾಟ ಹಂಚಿಕೊಂಡರು, ಇದು ಯುಪಿ ತಂಡದ ಕೈಯಿಂದ ಪಂದ್ಯವನ್ನು ಕಸಿದುಕೊಂಡಿತು.

ಈ ಇಬ್ಬರ ವಿಕೆಟ್ ಪತನದ ನಂತರ ಯುವ ಆಲ್‌ರೌಂಡರ್ ಅಮನ್‌ಜೋತ್ ಕೌರ್ ಮತ್ತೊಮ್ಮೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಮುಂಬೈ ತಂಡ 4 ವಿಕೆಟ್​ಗಳನ್ನು ಕಳೆದುಕೊಂಡು 19 ನೇ ಓವರ್‌ನಲ್ಲಿ ಗುರಿ ಮುಟ್ಟಿತು. ಇದು ಮುಂಬೈ ತಂಡದ ನಾಲ್ಕನೇ ಗೆಲುವಾಗಿದ್ದು, ತಂಡದ ಬಳಿ ಈಗ ಒಟ್ಟು 8 ಅಂಕಗಳಿವೆ. ಇದೀಗ ಮುಂಬೈ ತಂಡವು ಪ್ಲೇಆಫ್‌ಗೆ ತಲುಪಲು ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು, ಕೇವಲ 2 ಅಂಕಗಳ ಅಗತ್ಯವಿದೆ.

ಪ್ಲೇಆಫ್ ಲೆಕ್ಕಾಚಾರ ಹೀಗಿದೆ

ಸತತ ಎರಡು ಫೈನಲ್ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್, ಇದುವರೆಗೆ ಪ್ಲೇಆಫ್‌ಗೆ ಅರ್ಹತೆ ಪಡೆದ ಏಕೈಕ ತಂಡವಾಗಿದೆ. ಮತ್ತೊಂದೆಡೆ, ಗುಜರಾತ್ ಜೈಂಟ್ಸ್ 6 ಅಂಕಗಳನ್ನು ಹೊಂದಿದ್ದು, ಕೇವಲ 2 ಪಂದ್ಯಗಳು ಮಾತ್ರ ಉಳಿದಿವೆ ಮತ್ತು ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದ್ದು, ರೇಸ್ ನಿಂದ ಹೊರಬೀಳುವ ಭೀತಿಯಲ್ಲಿದೆ. ಆರ್​ಸಿಬಿಗೆ ಇದೀಗ 4 ಅಂಕಗಳ ಅಗತ್ಯವಿದ್ದು, ತಂಡ ಇನ್ನು 2 ಪಂದ್ಯಗಳನ್ನು ಆಡಬೇಕಿದೆ. ಇತ್ತ ಇದುವರೆಗೆ 7 ಪಂದ್ಯಗಳನ್ನಾಡಿರುವ ಯುಪಿ 5 ಪಂದ್ಯಗಳಲ್ಲಿ ಸೋತು, 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ತಂಡದ ಬಳಿ ಕೇವಲ 4 ಅಂಕಗಳಿವೆ. ಉಳಿದಿರುವ ಏಕೈಕ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಗೆದ್ದರೂ ಅದು ಪ್ಲೇಆಫ್‌ಗೇರುವ ಸಾಧ್ಯತೆಗಳಿಲ್ಲ.

Source : https://tv9kannada.com/sports/cricket-news/wpl-2025-standings-playoff-update-psr-988169.html

Leave a Reply

Your email address will not be published. Required fields are marked *