Valentine’s Day 2025: ಫೆಬ್ರವರಿ 14 ಪ್ರೇಮಿಗಳ ದಿನ. ಹೌದು, ವ್ಯಾಲೆಂಟೈನ್ಸ್ ಡೇ ಪ್ರೇಮಿಗಳಿಗೆ ಹಬ್ಬವೇ ಸರಿ. ಇಷ್ಟ ಪಡುವ ಮನಸ್ಸನ್ನು ಖುಷಿ ಪಡಿಸಲು ಯುವಕ ಯುವತಿಯರು ಕಾಯುವ ದಿನ. ಹೆಚ್ಚಿನವರು ದುಬಾರಿ ಬೆಲೆಯ ಗಿಫ್ಟ್, ಡಿನ್ನರ್, ಟ್ರಿಪ್ ಎಂದೆಲ್ಲಾ ಪ್ಲಾನ್ ಮಾಡಿಕೊಂಡು ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುತ್ತಾರೆ. ಹಾಗಾದ್ರೆ ಪ್ರೇಮಿಗಳಿಗೆ ಮೀಸಲಾಗಿರುವ ಈ ದಿನದ ಆಚರಣೆ ಶುರುವಾದದ್ದು ಯಾವಾಗ? ಏನಿದರ ಇತಿಹಾಸ ಹಾಗೂ ಮಹತ್ವ? ಎನ್ನುವ ಮಾಹಿತಿ ಇಲ್ಲಿದೆ.

ಪ್ರೀತಿ ಎರಡಕ್ಷರ ಅಲ್ಲ, ಎರಡು ಮನಸ್ಸುಗಳ ಮಿಲನ. ಈ ಸುಂದರ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ. ಜೀವಕ್ಕಿಂತ ಜೀವ ಎಂದು ಪ್ರೀತಿಸುವ ಪ್ರೇಮಿಗಳಿಗೆ ಫೆಬ್ರವರಿ 14 ಸಂಭ್ರಮದ ದಿನ. ಪ್ರೇಮ ಪಯಣಿಗರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಪ್ರೇಮಿಗಳ ದಿನದಂದು ಜಗತ್ತಿನಾದಂತ್ಯ ಪರಸ್ಪರ ಉಡುಗೊರೆಗಳನ್ನು ನೀಡುವ ಮೂಲಕ ಸೆಲೆಬ್ರೇಟ್ ಮಾಡುತ್ತಾರೆ. ಆದರೆ ಪ್ರೇಮಿಗಳ ದಿನವನ್ನು ಫೆಬ್ರುವರಿ 14 ರಂದೇ ಆಚರಿಸುವುದು ಯಾಕೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಈ ದಿನವನ್ನು ಆಚರಿಸುವುದಕ್ಕೂ ಈ ದಿನದ ಆಚರಣೆಯ ಹಿಂದಿನ ಕಾರಣವು ತಿಳಿದಿರಲಿ.
ಪ್ರೇಮಿಗಳ ದಿನದ ಇತಿಹಾಸ
ಪ್ರೇಮಿಗಳ ದಿನದ ಬಗ್ಗೆ ಒಂದೊಂದು ರೀತಿ ಕಥೆಗಳಿವೆ. ವ್ಯಾಲೆಂಟೈನ್ಸ್ ಡೇ ಲುಪರ್ಕಾಲಿಯಾ ಹಬ್ಬದೊಂದಿಗೆ ಪ್ರಾರಂಭವಾಯಿತು ಎನ್ನಲಾಗುತ್ತದೆ.ಈ ದಿನವು ವಸಂತಕಾಲದ ಬರುವಿಕೆಯನ್ನು ಆಚರಿಸುತ್ತದೆ. ಐದನೇ ಶತಮಾನದಲ್ಲಿ ಪೋಪ್ ಗೆಲಾಸಿಯಸ್ ಈ ಪ್ರೇಮಿಗಳ ದಿನದ ಆಚರಣೆಯನ್ನು ನಿಷೇಧಿಸಲಾಯಿತು. ಆ ಬಳಿಕ ಅದನ್ನು ಸೇಂಟ್ ವ್ಯಾಲೆಂಟೈನ್ಸ್ ಡೇಗೆ ಬದಲಾಯಿಸಲಾಯಿತು. ಆದರೂ ಫೆಬ್ರವರಿ 14 ಅನ್ನು ಪ್ರಣಯದ ದಿನವಾಗಿ ಆಚರಿಸುವ ಸಂಪ್ರದಾಯ ಸುಮಾರು 14ನೇ ಶತಮಾನದವರೆಗೆ ಪ್ರಾರಂಭವಾಗಲಿಲ್ಲ. ಫೆಬ್ರವರಿ 14 270 AD ರಂದು ಚಕ್ರವರ್ತಿ ಕ್ಲಾಡಿಯಸ್ II ಗೋಥಿಕಸ್ನಿಂದ ಮರಣದಂಡನೆಗೆ ಗುರಿಯಾದ ನಂತರದಲ್ಲಿ ಮರಣದಂಡನೆಗೊಳಗಾದ ಪ್ರಸಿದ್ಧ ಸಂತ ವ್ಯಾಲೆಂಟೈನ್ನ ಗೌರವಾರ್ಥವಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ.
ಹೌದು, ಸೇಂಟ್ ವ್ಯಾಲೆಂಟೈನ್ ತನ್ನ ಸೈನ್ಯದಲ್ಲಿ ಪುರುಷರನ್ನು ನೇಮಿಸಿಕೊಳ್ಳಲು ಮದುವೆಗಳನ್ನು ನಿಷೇಧಿಸಿದ ರೋಮನ್ ರಾಜನ ನಿಯಮವನ್ನು ಉಲ್ಲಂಘಿಸಿದ ಕಾರಣ ಅವನಿಗೆ ಮರಣದಂಡನೆ ವಿಧಿಸಲಾಯಿತು. ಸೇಂಟ್ ವ್ಯಾಲೆಂಟೈನ್ ಈ ಕ್ರಮವು ಅನ್ಯಾಯವೆಂದು ಭಾವಿಸಿದ್ದರು. ಆದ್ದರಿಂದ ಅವರು ನಿಯಮಗಳನ್ನು ಮುರಿದು ರಹಸ್ಯವಾಗಿ ಮದುವೆಗಳನ್ನು ಏರ್ಪಡಿಸಿದರು. ಸೇಂಟ್ ವ್ಯಾಲೆಂಟೈನ್ ಜೈಲರ್‌ನ ಮಗಳನ್ನು ಪ್ರೀತಿಸುತ್ತಿದ್ದರು. ಫೆಬ್ರವರಿ 14ರಂದು ಅವರನ್ನು ಕೊಲ್ಲಲು ಕರೆದೊಯ್ಯುವಾಗ, “ನಿಮ್ಮ ವ್ಯಾಲೆಂಟೈನ್” ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ತನ್ನ ಪ್ರೇಯಸಿಗೆ ಕಳುಹಿಸಿದರು. ಈ ವೇಳೆಯ್ಲಲಿ ಚಕ್ರವರ್ತಿಯ ಆದೇಶವನ್ನು ಧಿಕ್ಕರಿಸಿದ್ದರಿಂದ ಮರಣದಂಡನೆ ನೀಡಲಾಯಿತು. ಅಂದಿನಿಂದ ಫೆಬ್ರವರಿ 14 ನ್ನು ಪ್ರೀತಿಯ ದಿನವೆಂದು ಆಚರಿಸಲಾಗುತ್ತದೆ.
ಪ್ರೇಮಿಗಳ ದಿನದ ಮಹತ್ವ ಹಾಗೂ ಆಚರಣೆ
ಪ್ರೀತಿಯೆನ್ನುವುದು ಒಂದು ದಿನಕ್ಕೆ ಮಾತ್ರವಲ್ಲ, ಆದರೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ದಿನವೇ ಈ ಪ್ರೇಮಿಗಳ ದಿನ. ಹೀಗಾಗಿ ಪ್ರೀತಿಯಲ್ಲಿ ಬಿದ್ದ ಪ್ರತಿಯೊಬ್ಬರಿಗೂ ಈ ದಿನ ವಿಶೇಷವಾಗಿದೆ. ಈ ದಿನವನ್ನು ಪ್ರತಿಯೊಬ್ಬ ಪ್ರೇಮಿಯೂ ವಿಭಿನ್ನವಾಗಿ ಆಚರಿಸಿಕೊಳ್ಳುತ್ತಾರೆ.ಈ ದಿನದಂದು ಸಂಗಾತಿಗಳು, ಪ್ರೇಮಿಗಳು ಗ್ರೀಟಿಂಗ್ ಕಾರ್ಡ್‌ಗಳು, ಚಾಕೊಲೇಟ್‌ಗಳ ಬಾಕ್ಸ್, ಡಿನ್ನರ್ ನೈಟ್ ಮತ್ತು ಗುಲಾಬಿ ಹೂವುಗಳು ಸೇರಿದಂತೆ ಪ್ರೀತಿಯ ಸಂದೇಶಗಳನ್ನು ಕಳುಹಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.