VIDEO: ಪಾಕ್​ ಬೌಲರ್​ಗಳನ್ನ ಚೆಂಡಾಡಿದ ಎಬಿಡಿ: ಸೌತ್ ಆಫ್ರಿಕಾ ಚಾಂಪಿಯನ್ಸ್​.

ಟೂರ್ನಿಯಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡವನ್ನು ಬಗ್ಗು ಬಡಿಯುವ ಮೂಲಕ ಸೌತ್ ಆಫ್ರಿಕಾ ಚಾಂಪಿಯನ್ಸ್ WCL ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ತಂಡಕ್ಕೆ ಶರ್ಜೀಲ್ ಖಾನ್ ಉತ್ತಮ ಆರಂಭ ಒದಗಿಸಿದ್ದರು. 44 ಎಸೆತಗಳನ್ನು ಎದುರಿಸಿದ ಶರ್ಜೀಲ್ 4 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 76 ರನ್ ಬಾರಿಸಿದರು.

ಇನ್ನು ಮೊಹಮ್ಮದ್ ಹಫೀಝ್ 17 ರನ್ ಬಾರಿಸಿದರೆ, ಶೊಯೆಬ್ ಮಲಿಕ್ 20 ರನ್​ಗಳಿಸಿದರು. ಈ ಮೂಲಕ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 195 ರನ್​ಗಳಿಸಿತು.

196 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಹಾಶಿಮ್ ಆಮ್ಲಾ ಕೇವಲ 18 ರನ್​ಗಳಿಸಿ ಔಟಾದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಎಬಿ ಡಿವಿಲಿಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಎಡಗೈ ದಾಂಡಿಗ ಜೆಪಿ ಡುಪಿನಿ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಎಬಿಡಿ ಪಾಕಿಸ್ತಾನ್ ಬೌಲರ್​ಗಳನ್ನು ಚೆಂಡಾಡಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈದ ಎಬಿ ಡಿವಿಲಿಯರ್ಸ್ ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದರು.

ಸೆಂಚುರಿ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ಎಬಿಡಿ 60 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ ಅಜೇಯ 120 ರನ್ ಬಾರಿಸಿದರು. ಅತ್ತ ಜೆಪಿ ಡುಮಿನಿ 28 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 16.5 ಓವರ್​ಗಳಲ್ಲಿ 197 ರನ್​ ಬಾರಿಸಿ 9 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ 2025ರ ವರ್ಲ್ಡ್​ ಚಾಂಪಿಯನ್​​ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಸೌತ್ ಅಫ್ರಿಕಾ ಚಾಂಪಿಯನ್ಸ್ ತಂಡವು ಚೊಚ್ಚಲ ಬಾರಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದೆ.

Views: 5

Leave a Reply

Your email address will not be published. Required fields are marked *