GIRL DIED DURING DANCE : ವಿವಾಹದ ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವಾಗಲೇ ಯುವತಿಯೊಬ್ಬರು ಹಠಾತ್ ಕುಸಿದು ಸಾವನ್ನಪ್ಪಿದ್ದಾರೆ.

ವಿದಿಶಾ (ಮಧ್ಯಪ್ರದೇಶ) : ಸೋದರ ಸಂಬಂಧಿ ಮದುವೆಯ ಸಂಭ್ರಮದಲ್ಲಿ ಕುಣಿಯುತ್ತಿದ್ದ ಯುವತಿ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್ನ ವಿದಿಶಾದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
23 ವರ್ಷದ ಪರಿಣಿತಾ ಜೈನ್ ಮೃತ ಯುವತಿ. ಇಂಧೋರ್ ನಿವಾಸಿಯಾದ ಈಕೆ ಸಂಬಂಧಿಯ ವಿವಾಹಕ್ಕಾಗಿ ಭೋಪಾಲ್ಗೆ ಬಂದಿದ್ದರು. ವಿದಿಶಾದ ರೆಸಾರ್ಟ್ವೊಂದರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿಯೇ ಈ ದುರಂತ ಸಂಭವಿಸಿದೆ.
ನೃತ್ಯ ಮಾಡುವಾಗಲೇ ಎರಗಿದ ಯಮ : ವಿವಾಹದ ಹಳದಿ ಕಾರ್ಯಕ್ರಮ ಜರುಗುತ್ತಿತ್ತು. ಈ ವೇಳೆ ಸಂಭ್ರಮಾಚರಣೆಗೆ ವೇದಿಕೆ ಸಿದ್ಧಪಡಿಸಲಾಗಿತ್ತು. ಎಲ್ಲರಂತೆ ಯುವತಿಯೂ ನೃತ್ಯ ಮಾಡುತ್ತಿದ್ದರು. ಎರಡೇ ನಿಮಿಷಗಳಲ್ಲಿ ಆಕೆ ಕುಣಿಯುತ್ತಲೇ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದವರು ಸಹಾಯಕ್ಕೆ ಬಂದಿದ್ದಾರೆ.
ಯುವತಿಯು ಯಾವುದೇ ಚಲನೆ ತೋರದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಬಳಿಕ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರಿಶೀಲನೆ ನಡೆಸಿದ ವೈದ್ಯರು ಆಕೆ ಹೃದಸ್ತಂಭನದಿಂದ ಸಾವನ್ನಪ್ಪಿದ್ದಾಗಿ ಘೋಷಿಸಿದ್ದಾರೆ.
ಸಂಭ್ರಮದ ಮಧ್ಯೆ ಶೋಕ : ಯುವತಿಯ ದಿಢೀರ್ ಸಾವು, ವಿವಾಹ ಸಂಭ್ರಮದಲ್ಲಿ ಕುಣಿದಾಡಬೇಕಿದ್ದ ಕುಟುಂಬವು ಶೋಕದಲ್ಲಿ ಮುಳುಗಿದೆ. ಹಳದಿ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಜನರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಆಸ್ಪತ್ರೆಯ ವೈದ್ಯ ಗಜೇಂದ್ರ ರಘುವಂಶಿ ಪ್ರಕಾರ, ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿಯನ್ನು ಕರೆತರಲಾಯಿತು. ಆಸ್ಪತ್ರೆಯ 8 ವೈದ್ಯರ ತಂಡವು ತಪಾಸಣೆ ನಡೆಸಿದಾಗ, ಆಕೆ ಸಾವನ್ನಪ್ಪಿದ್ದಳು. ಹೃದಯಸ್ತಂಭನವಾಗಿರುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಹೃದಯಾಘಾತದ ಪ್ರಕರಣಗಳಲ್ಲಿ ತ್ವರಿತಗತಿ ಏರಿಕೆ ಕಂಡುಬಂದಿದೆ. ಏಕಾಏಕಿ ಕಠಿಣ ದೈಹಿಕ ಚಟುವಟಿಕೆ, ಒತ್ತಡ ಮತ್ತು ಗುಪ್ತ ಹೃದಯ ಸಂಬಂಧಿತ ಸಮಸ್ಯೆಗಳು ಇಂತಹ ದುರಂತಗಳಿಗೆ ಕಾರಣವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಯುವತಿಯ ಸಾವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದುರಂತವೆಂದರೆ, ಯುವತಿಯ ಸಹೋದರನೂ 12ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.