Vijay Hazare Trophy 2025: 5ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಕರ್ನಾಟಕ; ಕರುಣ್ ತಂಡಕ್ಕೆ ಸೋಲು

Vijay Hazare Trophy 2025: ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯ ಇಂದು ಬರೋಡದ ಕೊಟಂಬಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ವಿದರ್ಭ ತಂಡವನ್ನು 36 ರನ್​ಗಳಿಂದ ಮಣಿಸಿದ ಕರ್ನಾಟಕ ತಂಡ ಐದನೇ ಬಾರಿಗೆ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇತ್ತ ಮೊದಲ ಬಾರಿಗೆ ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದ ವಿದರ್ಭ ತಂಡಕ್ಕೆ ಸೋಲಿನ ನಿರಾಸೆ ಎದುರಾಗಿದೆ.

ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಕರುಣ್ ನಾಯರ್ ನೇತೃತ್ವದ ವಿದರ್ಭ ತಂಡ ಮಣಿಸಿದ ಕರ್ನಾಟಕ 5ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿದೆ. ರೋಚಕ ಹೋರಾಟದಲ್ಲಿ ಕರ್ನಾಟಕ ಬಾಯ್ಸ್ ದಿಟ್ಟ ಹೋರಾಟ ನೀಡಿ ಚಾಂಪಿಯನ್ ಆಗಿದ್ದಾರೆ.

ವಡೋದರ(ಜ.18) ದೇಶಿಯ ಕ್ರಿಕೆಟ್‌ನಲ್ಲಿ ಮತ್ತೆ ಕರ್ನಾಟಕದ ಗತವೈಭವ ಮರುಕಳಿಸುತ್ತಿದೆ. ವಿಜಯ್ ಹಜಾರೆ ಟೂರ್ನಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿದರ್ಭಮಣಿಸಿ ಚಾಂಂಪಿಯನ್ ಆಗಿ ಹೊರಹೊಮ್ಮಿದೆ. ವಿದರ್ಭ ವಿರುದ್ದ ಕರ್ನಾಟಕ 36 ರನ್ ಗೆಲುವು ದಾಖಲಿಸಿದೆ. ಕರ್ನಾಟಕ ನೀಡಿದ 348 ರನ್ ಬೃಹತ್ ಟಾರ್ಗೆಟ್ ಚೇಸಿಂಗ್ ಮಾಡಿದ ವಿದರ್ಭ 312 ರನ್‌ಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಈ ಮೂಲಕ ಕರ್ನಾಟಕ 5ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಇತ್ತ ಚೊಚ್ಚಲ ಟ್ರೋಫಿ ಗೆಲ್ಲುವ ವಿದರ್ಭ ಕನಸು ನುಚ್ಚು ನೂರಾಗಿದೆ. ಕರ್ನಾಟಕದ ಮಾಜಿ ಆಟಗಾರ ಕರುಣ್ ನಾಯರ್ ಮುನ್ನಡೆಸಿದ ವಿದರ್ಭ ತಂಡ ಉತ್ತಮ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡಕ್ಕೆ ಯಶಸ್ಸು ಸಿಗಲಿಲ್ಲ.

ಸಮರನ್ ರವಿಚಂದ್ರನ್ ಶತಕ, ಕೃಷ್ಣನ್ ಶ್ರೀಜಿತ್ ಹಾಗೂ ಅಭಿನವ್ ಮನೋಹರ್ ಹಾಫ್ ಸೆಂಚುರಿ ನೆರವಿನಿಂದ ಕರ್ನಾಟಕ 6 ವಿಕೆಟ್ ನಷ್ಟಕ್ಕೆ 348 ರನ್ ಸಿಡಿಸಿತ್ತು. ಈ ಟಾರ್ಗೆಟ್‌ಗೆ ಉತ್ತರವಾಗಿ ವಿದರ್ಭ ದಿಟ್ಟ ಹೋರಾಟ ನೀಡಿತ್ತು. ಧ್ರುವ್ ಶೊರೆ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದ್ದರು. ಧ್ರುವ್ 110 ರನ್ ಸಿಡಿಸಿದರು. ಆದರೆ ಪ್ರಸಿದ್ಧ್ ಕೃಷ್ಣ ವಾಸುಕಿ ಕೌಶಿಕ್, ಅಭಿಲಾಶ್ ಶೆಟ್ಟಿ ಹಾಗೂ ಹಾರ್ದಿಕ್ ರಾಜ್ ದಾಳಿಗೆ ವಿದರ್ಭ ದಿಢೀರ್ ಕುಸಿತ ಕಂಡಿತು. 

ಅಂತಿಮ ಹಂತದಲ್ಲಿ ಹರ್ಷಾ ದುಬೆ ಹೋರಾಟ ನೀಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕರ್ನಾಟದ ದಿಟ್ಟ ಬೌಲಿಂಗ್ ದಾಳಿಗೆ ವಿದರ್ಭ 48.2 ಓವರ್‌ಗಳಲ್ಲಿ 312 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ 36 ರನ್ ಗೆಲುವು ಕಂಡಿತು. 

2020ರ ಬಳಿಕ ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ ಈ ಬಾರಿ ಪ್ರಶಸ್ತಿ ಕೊರಗು ನೀಗಿಸಿದೆ. ಬರೋಬ್ಬರಿ 4 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿ ಕರ್ನಾಟಕ ಗೆದ್ದುಕೊಂಡಿದೆ. 2019-20ರ ಸಾಲಿನಲ್ಲಿ ಕರ್ನಾಟಕ ಕೊನೆಯದಾಗಿ ವಿಜಯ್ ಹಜಾರೆ ಟ್ರೋಫಿ ಗೆದ್ದಿತ್ತು. 2013-14ರ ಸಾಲಿನಲ್ಲಿ ಕರ್ನಾಟಕ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತ್ತು. ಬಳಿಕ 2014-15ರಲ್ಲೂ ಟ್ರೋಫಿ ಗೆದ್ದಿತ್ತು. 2017-18 ಹಾಗೂ 2019-20ರಲ್ಲಿ ಟ್ರೋಫಿ ಗೆದ್ದಿತ್ತು. 

ಕರ್ನಾಟಕಕ್ಕೆ 21ನೇ ದೇಸಿ ಟ್ರೋಫಿ
ದೇಶಿ ಕ್ರಿಕೆಟ್‌ನಲ್ಲಿ ಕರ್ನಾಟಕ 21ನೇ ಟ್ರೋಫಿ ಗೆದ್ದ ಸಾಧನೆ ಮಾಡಿದೆ. 8 ಬಾರಿ ರಣಜಿ ಟ್ರೋಫಿ ಗೆದ್ದಿದ್ದರೆ, 6 ಬಾರಿ ಇರಾನ್ ಕಪ್ ಸಾಧನೆ ಮಾಡಿದೆ. 5 ಬಾರಿ ವಿಜಯ್ ಹಜಾರೆ ಟ್ರೋಫಿ, 2 ಬಾರಿ ಮುಷ್ತಾರ್ ಆಲಿ ಟಿ20 ಟೂರ್ನಿ ಟ್ರೋಫಿ ಗೆದ್ದಿದೆ. 
 

Leave a Reply

Your email address will not be published. Required fields are marked *