Vijay Hazare Trophy -ವಿದರ್ಭಕ್ಕೆ `ಮಹಾ’ ಗೆಲುವು: ಪ್ರಶಸ್ತಿ ಸುತ್ತಿನಲ್ಲಿ ಕರ್ನಾಟಕಕ್ಕೆ ಕರುಣ್ ನಾಯರ್ ಸವಾಲು!

ಹೈಲೈಟ್ಸ್‌:

  • ವಿಜಯ್ ಹಜಾರೆ ಸೆಮಿಫೈನಲ್ ಹಣಾಹಣಿಯಲ್ಲಿ ಮಹಾರಾಷ್ಟ್ರನ್ನು 69 ರನ್ ಗಳಿಂದ ಸೋಲಿಸಿದ ವಿದರ್ಭ
  • ಧ್ರುವ್‌ ಶೋರೆ, ಯಶ್‌ ರಾಥೋಡ್‌ ಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿದ ಕರುಣ್ ನಾಯರ್ ಬಳಗ
  • ಜನವರಿ 18ರಂದು ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕರ್ನಾಟಕ vs ವಿದರ್ಭ ಜಟಾಪಟಿ

ವಿಜಯ್ ಹಜಾರೆ ಟ್ರೋಫಿ ಟೂರ್ನಿ ಇದೀಗ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳನ್ನು ಅಕ್ಷರಶಃ ತುದಿಗಾಲಲ್ಲಿ ನಿಲ್ಲಿಸಿದೆ. ಎರಡು ವರ್ಷಗಳ ಹಿಂದೆ ಕರ್ನಾಟಕ ತಂಡದಿಂದ ಹೊರಬಿದ್ದಿದ್ದ ಪ್ರತಿಭಾವಂತ ಬ್ಯಾಟರ್ ಕರುಣ್ ನಾಯರ್ ತಮ್ಮ ತಂಡವನ್ನು ಟೂರ್ನಿಯ ಫೈನಲ್ ಗೆ ತಂದು ನಿಲ್ಲಿಸಿದ್ದಾರೆ. ಅವರೀಗ ಎದುರಿಸಬೇಕಿರುವುದು ಮಾಾಯಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡವನ್ನು. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಗುರುವಾರ ನಡೆದ ಎರಡನೇ ಸೆಮಿಪೈನಲ್ ಪಂದ್ಯದಲ್ಲಿ ವಿದರ್ಭ ತಂಡವು ಆರಂಭಿಕ ಬ್ಯಾಟರ್‌ಗಳಾದ ಧ್ರುವ್‌ ಶೋರೆ ಮತ್ತು ಯಶ್‌ ರಾಥೋಡ್‌ ಅಮೋಘ ಶತಕಗಳ ನೆರವಿನಿಂದ ಮಹಾರಾಷ್ಟ್ರವನ್ನು 69 ರನ್‌ಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದೆ. ಜನವರಿ 18ರಂದು ನಡೆಯಲಿರುವ ಫೈನಲ್‌ನಲ್ ಕರ್ನಾಟಕ- ವಿದರ್ಭ ತಂಡಗಳು ಮುಖಾಮುಖಿಯಾಗಲಿವೆ.

ಹೋರಾಟ ನೀಡಿ ಮಣಿದ ಮಹಾರಾಷ್ಟ್ರ

ವಿದರ್ಭ ನೀಡಿದ 381 ರನ್‌ ಗುರಿಯನ್ನು ಬೆನ್ನತ್ತಿ ಹೊರಟ ಮಹಾರಾಷ್ಟ್ರ ತಂಡ ಉತ್ತಮ ಹೋರಾಟ ನೀಡಿದರೂ ನಿಗದಿತ ಐವತ್ತು ಓವರ್ ಗಳಲ್ಲಿ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 311 ರನ್ ಗಳನ್ನು ಪೇರಿಸಲು ಶಕ್ತವಾಯಿತು. ಪ್ರತಿಭಾವಂತ ಬ್ಯಾಟರ್ ಆಗಿರುವ ನಾಯಕ ರುತುರಾಜ್ ಗಾಯಕ್ವಾಡ್ (7) ಅವರನ್ನು ತಂಡದ ಮೊತ್ತ 8 ಇರುವಾಗಲೇ ವಿದರ್ಭದ ಮಧ್ಯಮ ವೇಗದ ಬೌಲರ್ ದರ್ಶನ್ ನಾಲ್ಕಂಡೆ ಅವರು ಕೀಪರ್ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಇದೇ ತಂಡಕ್ಕೆ ಭಾರೀ ಹೊಡೆತ ನೀಡಿದ್ದಲ್ಲದೆ ರನ್ ಧಾರಣೆಯೂ ಕುಸಿಯಿತು.

ಮತ್ತೊಬ್ಬ ಆರಂಭಿಕ ಆರ್ಶಿನ್ ಕುಲಕಣಿ(90), ಮಧ್ಯಮ ಕ್ರಮಾಂಕದ ಬ್ಯಾಟರ್ ಅಂಕಿತ್ ಬಾವ್ನ(50) ತಂಡವನ್ನು ಆಧರಿಸಿದರು. ಅಂತಿಮ ಹಂತದಲ್ಲಿ ನಿಖಿಲ್ ನಾಯಕ್ ಕೇವಲ 26 ಎಸೆತಗಳಲ್ಲಿ 49 ರನ್ ಚಚ್ಚಿದರೂ ಅದು ತಂಡದ ಗೆಲುವಿಗೆ ಸಾಕಾಗಲಿಲ್ಲ. ಅಂತಿಮವಾಗಿ ತಂಡ 69 ರನ್ ಗಲಿಂದ ಸೋಲೊಪ್ಪಿಕೊಂಡಿತು.

ವಿದರ್ಭ ಸ್ಫೋಟಕ ಬ್ಯಾಟಿಂಗ್

ಇದಕ್ಕೂ ಮೊದಲು ಟಾಸ್‌ ಗೆದ್ದ ಮಹಾರಾಷ್ಟ್ರ ವಿದರ್ಭ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮಹಾರಾಷ್ಟ್ರದ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಲೆಕ್ಕಾಚಾರವನ್ನೆಲ್ಲಾ ಆರಂಭಿಕ ಬ್ಯಾಟರ್ ಗಳಾದ ಧ್ರುವ್ ಶೋರೆ ಮತ್ತು ಯಶ್ ರಾಠೋಡ್ ಬುಡಮೇಲು ಮಾಡಿದರು.

ಧ್ರುವ್‌ ಶೋರೆ 114 ರನ್ ಗಳಿಸದರೆ, ಯಶ್‌ ರಾಥೋಡ್‌ 116 ಹೊಡೆದರು. ಇವರಿಬ್ಬರು ಮೊದಲ ವಿಕೆಟ್ ಗೆ ಕೇವಲ 34.4 ಓವರ್ ಗಳಲ್ಲಿ 224 ರನ್ ಗಳನ್ನು ಬಾಚಿದ್ದು ಮಹಾರಾಷ್ಟ್ರದ ಪಾಲಿಗೆ ನುಂಗಲಾರದ ತುತ್ತಾಯಿತು. ಆ ಮೇಲೆ ಕ್ರೀಸಿಗೆ ಬಂದ ನಾಯಕ ಕರುಣ್ ನಾಯರ್ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮೈದಾನದ ಮೂಲೆಮೂಲೆಗೂ ಚೆಂಡನ್ನಟ್ಟಿದ ಅವರು ಕೇವಲ 44 ಎಸೆತಗಳಿಂದ ಅಜೇಯ 88 ರನ್ ಬಾಚಿಗರು. ಅವರ ತ್ವರಿತ ಆಟದಲ್ಲಿ 9 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಗಳಿದ್ದವು. ಕೀಪರ್ ಜಿತೇಶ್ ಶರ್ಮಾ ಸಹ 33 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು ಸಿಕ್ಸರ್ ಗಳಿದ್ದ 51 ರನ್ ಗಳಿಸಿದರು. ಇದರಿಂದಾಗಿ ತಂಡ 380 ರನ್ ಗಳ ಬೃಹತ್ ಮೊತ್ತ ಗಳಿಸುವಂತಾಯಿತು.

ಕೇವಲ 101 ಎಸೆತಗಳಲ್ಲಿ 116 ರನ್ ಗಳಿಸಿದ ಯಶ್ ರಾಠೋಡ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌

  • ವಿದರ್ಭ: 50 ಓವರ್‌ಗಳಲ್ಲಿ 3 ವಿಕೆಟ್‌ಗೆ 380
  • ಮಹಾರಾಷ್ಟ್ರ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 311

Source : https://vijaykarnataka.com/sports/cricket/news/vidarbha-beats-maharashtra-and-enters-final-of-the-vijay-hazare-trophy/articleshow/117309298.cms

Leave a Reply

Your email address will not be published. Required fields are marked *