
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಕರ್ನಾಟಕ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯನ್ನು ಭರ್ಜರಿ ಗೆಲುವಿನ ಮೂಲಕ ಆರಂಭಿಸಿದೆ. ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಮುಂಬೈ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 382 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆಯುಷ್ ಮಾತ್ರೆ 78 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ 55 ಎಸೆತಗಳಲ್ಲಿ ಅಜೇಯ 114 ರನ್ ಗಳಿಸಿ ಮಿಂಚಿದರು. ಹಾರ್ದಿಕ್ ತಾಮೋರ್ 84 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 20 ರನ್ ಗಳಿಸಿದರು. ಶಿವಂ ದುಬೆ 36 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿ ಮಿಂಚಿದರು.
ಕರ್ನಾಟಕ ಭರ್ಜರಿ ಬ್ಯಾಟಿಂಗ್
383 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಸಾಧಾರಣ ಆರಂಭ ಪಡೆಯಿತು. ನಿಕಿನ್ ಜೋಸ್ 13 ಎಸೆತಗಳಲ್ಲಿ 21 ರನ್ ಗಳಿಸಿದರೆ. ನಾಯಕ ಮಯಾಂಕ್ ಅಗರ್ವಾಲ್ 48 ಎಸೆತಗಳಲ್ಲಿ 47 ರನ್ ಗಳಿಸಿದರು. ಅನೀಶ್ ಕೆವಿ 66 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ಸಹಿತ 82 ರನ್ ಗಳಿಸಿದರು, ಕೃಷ್ಣನ್ ಶ್ರೀಜಿತ್ 101 ಎಸೆತಗಳಲ್ಲಿ 20 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ ಅಜೇಯ 150 ರನ್ ಗಳಿಸುವ ಮೂಲಕ ಮಿಂಚಿದರು.
ಪ್ರವೀಣ್ ದುಬೆ 50 ಎಸೆತಗಳಲ್ಲಿ ಅಜೇಯ 65 ರನ್ ಗಳಿಸುವ ಮೂಲಕ ಕರ್ನಾಟಕ ಸುಲಭ ಗೆಲುವ ಸಾಧಿಸಲು ಸಹಾಯ ಮಾಡಿದರು. 46.2 ಓವರ್ ಗಳಲ್ಲೇ 3 ವಿಕೆಟ್ ಕಳೆದುಕೊಂಡು 383 ರನ್ ಗಳಿಸಿದ ಕರ್ನಾಟಕ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಆರಂಭಿಸಿದ ಕರ್ನಾಟಕ ಮುಂದಿನ ಪಂದ್ಯಗಳನ್ನು ಗೆಲ್ಲುವ ಭರವಸೆ ಮೂಡಿಸಿದೆ. ವಿಜಯ್ ಹಜಾರೆ ಟ್ರೋಫಿಯ ಸಿ ಗುಂಪಿನಲ್ಲಿ ಕರ್ನಾಟಕ ಆಡುತ್ತಿದ್ದು ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅರುಣಾಚಲ ಪ್ರದೇಶ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಪಂಜಾಬ್ ಉತ್ತಮ ರನ್‌ರೇಟ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ತನ್ನ ಮುಂದಿನ ಪಂದ್ಯದಲ್ಲಿ ಪುದುಚೆರ್‍ರಿಯನ್ನು ಎದುರಿಸಲಿದೆ. ಡಿಸೆಂಬರ್ 23ರಂದು ಈ ಪಂದ್ಯ ನಡೆಯಲಿದೆ.