Vijayapura Borewell Tragedy : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಪುಟ್ಟ ಕಂದಮ್ಮ ಬದುಕಿಬಂದಿದೆ. ಪೊಲೀಸ್, ಅಗ್ನಿ ಶಾಮಕ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಸತತ 20 ಗಂಟೆಗಳ ಕಾರ್ಯಚರಣೆ ನಡೆಸಿ ಸಾತ್ವಿಕ್‌ನನ್ನು ಜೀವಂತವಾಗಿ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ, 20 ಅಡಿ ಆಳದ ಕೊಳವೆಬಾವಿಗೆ ಬಿದ್ದ ಸಾತ್ವಿಕ್‌ನನ್ನು ರಕ್ಷಿಸಿದ್ದು ಹೇಗೆ? ಕಾರ್ಯಾಚರಣೆಯ ರೀತಿ ಹೇಗಿತ್ತು ಎಂಬುದರ ರೋಚಕ ಮಾಹಿತಿ ಇಲ್ಲಿದೆ.

ವಿಜಯಪುರ, (ಏಪ್ರಿಲ್ 04): ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ (Lachyan) ಗ್ರಾಮದಲ್ಲಿ ಅಜ್ಜ ಕೊರೆಸಿದ ಕೊಳವೆಬಾವಿಗೆ (Vijayapura Borewell Tragedy) ಬಿದ್ದ 2 ವರ್ಷದ ಕಂದಮ್ಮ ಸಾತ್ವಿಕ್‌ನನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಬುಧವಾರ ಸಂಜೆ (ಏಪ್ರಿಲ್ 3) 5.30ರ ಸುಮಾರಿಗೆ ಆಟವಾಡುತ್ತ ಹೋದ ಸಾತ್ವಿಕ್(sathwik) ಕೊಳವೆಬಾವಿಗೆ ಬಿದ್ದಿದ್ದ. ಈ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲೂಕು, ಜಿಲ್ಲಾಡಳಿತಾಧಿಕಾರಿಗಳು ಅಗ್ನಿ ಶಾಮಕ ದಳ, ಎನ್‌ಡಿಆರ್‌ಎಫ್ (NDRF) ಹಾಗೂ ಎಸ್‌ಡಿಆರ್‌ಎಫ್ ತಂಡದ ಸಮೇತ ಘಟನಾ ಸ್ಥಳಕ್ಕಾಗಮಿಸಿ ಸತತ ರಕ್ಷಣಾ ಕಾರ್ಯಚರಣೆಗಿಳಿದಿದ್ದವು. ಅಂತಿಮವಾಗಿ ಬೃಹತ್ ಬಂಡೆ, ಕಲ್ಲುಗಳನ್ನು ಸೀಳಿ ಸುರಂಗ ಮಾರ್ಗದಿಂದ ಒಳಗೆ ಹೊಕ್ಕು ಚಿಕ್ಕ ಪೈಪ್ನಲ್ಲಿ ಸಿಲುಕಿಕೊಂಡು ರೋಧಿಸುತ್ತಿದ್ದ ಕಂದ ಸಾತ್ವಿಕ್‌ನನ್ನು ಜೀವಂತವಾಗಿ ಹೊರಗೆ ಕರೆದುಕೊಂಡು ಬಂದಿದ್ದಾರೆ. ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಇದರಿಂದ ಗ್ರಾಮಸ್ಥರ ಹರ್ಷೋಧ್ಘಾರ ಮುಗಿಲು ಮುಟ್ಟಿದ್ದು, ಪೋಷಕರು ನಿಟ್ಟುಸಿರುಬಿಟ್ಟಿದ್ದಾರೆ. ಇದರೊಂದಿಗೆ ಕೋಟ್ಯಾಂತರ ಜನರ ಪ್ರಾರ್ಥನೆ ಫಲಿಸಿದೆ.
ಆಪರೇಷನ್ ಸಾತ್ವಿಕ್ ಹೇಗಿತ್ತು?
ಬುಧವಾರ (ಏಪ್ರಿಲ್ 03) ಸಂಜೆ 5.30ರ ಸುಮಾರಿಗೆ ಮಗು ಕೊಳವೆಬಾವಿಗೆ ಬಿದ್ದಿದ್ದು, ಇದಾದ ಅರ್ಧ ಗಂಟೆಯಲ್ಲಿಯೇ ಕಾರ್ಯಾಚರಣೆ ಆರಂಭಿಸಿದ್ದು ಮಗುವಿನ ರಕ್ಷಣೆಯಲ್ಲಿ ಸಿಕ್ಕ ಮೊದಲ ಮುನ್ನಡೆಯಾಗಿದೆ. ಬುಧವಾರ ಸಂಜೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿಯು ಸತತ ಪ್ರಯತ್ನ ಮಾಡಿತು. ರಾತ್ರಿಯೇ ಎರಡು ಹಿಟಾಚಿ, ಮೂರು ಜೆಸಿಬಿ ಯಂತ್ರಗಳ ಮೂಲಕ ಕೊಳವೆಬಾವಿಯ ಸುತ್ತ 20 ಅಡಿ ಅಗೆಯಲಾಯಿತು. ಬಳಿಕ ಕೊಳವೆ ಬಾವಿ ಸಿಕ್ಕಿತು. ಆದ್ರೆ, ಮಗುವಿನ ಹತ್ತಿರ ಹೋಗಲು ಇನ್ನಷ್ಟು ಬಂಡೆಗಳು ಅಡ್ಡಿಯಾಗಿದ್ದವು. ಅದನ್ನು ಸಹ ಸಿಬ್ಬಂದಿ ಹಿಟಾಚಿ ಮತ್ತು ಕೈಯಿಂದ ಡ್ರಿಲ್ಲಿಂಗ್ ಮಾಡಿ ತೆರವುಗೊಳಿಸಿದರು. ಆದ್ದರಿಂದ ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಪ್ರಗತಿ ಕಂಡಿದ್ದು, ರಂಧ್ರ ಕೊರೆದು ಮಗುವಿನ ರಕ್ಷಣೆ ಮಾಡಲು ಸಾಧ್ಯವಾಯಿತು.
ಕ್ಯಾಮರಾ ಸಹಾಯದಿಂದ ಆಮ್ಲಜನಕ ರವಾನೆ
ಗುರುವಾರ ಬೆಳಗ್ಗೆ ಕೊಳವೆಬಾವಿಯ ಬಳಿ ಅಡ್ಡಲಾಗಿ 3 ಅಡಿ ರಂಧ್ರ ಕೊರೆದ ಸಿಬ್ಬಂದಿಯು ಕೃತಕ ಆಮ್ಲಜನಕವನ್ನು ರವಾನಿಸಿತು. ಅಷ್ಟೇ ಅಲ್ಲ, ಮಗುವಿನ ಸ್ಥತಿಗತಿಯನ್ನು ತಿಳಿಯಲು ಸಾತ್ವಿಕ್ ಬಿದ್ದಿದ್ದ ಕೊಳವೆ ಬಾವಿಯೊಳಗೆ ಕ್ಯಾಮೆರಾ ಬಿಡಲಾಗಿತ್ತು. ಆ ಕ್ಯಾಮರಾ ದೃಶ್ಯದಲ್ಲಿ ಸಾತ್ವಿಕ್ ಕಾಲುಗಳನ್ನು ಅಲುಗಾಡಿಸುವುದು ಕಂಡುಬಂದಿತ್ತು. ಇದರೊಂದಿಗೆ ಅದೃಷ್ಟವಶಾತ್ ಸಾತ್ವಿಕ್ ಜೀವಂತವಾಗಿದ್ದಾನೆ ಎನ್ನುವುದು ಎಲ್ಲರಿಗೂ ಖಾತ್ರಿಯಾಗಿತ್ತು. ಎಲ್ಲರ ಮೊಗದಲ್ಲೂ ಕೊಂಚ ನಿರಾಳ ಭಾವ ಮೂಡಿತ್ತು. ಅಲ್ಲದೇ ಮಗುವನ್ನು ಜೀವಂತವಾಗಿ ತರುತ್ತೇವೆಂದು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿ ಕುಟುಂಬಸ್ಥರಿಗೆ ಧೈರ್ಯ ಹೇಳಿ ತಮ್ಮ ಕಾರ್ಯಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಬಳಿಕ ಕ್ಯಾಮೆರಾ ಮೂಲಕ ಮಾನಿಟರ್ ಮಾಡಿ, ಅಡ್ಡ ರಂಧ್ರದ ಮೂಲಕ ಆಮ್ಲಜನಕವನ್ನು ಪೂರೈಸಲಾಯ್ತು.
ಸಾತ್ವಿಕ್ ಬೋರ್‌ವೆಲ್ ಪೈಪ್ ಮಧ್ಯೆ ಸಿಲುಕಿದ್ದ. ಸಿಬ್ಬಂದಿಯು ಯಂತ್ರದ ಮೂಲಕ ರಂಧ್ರ ಕೊರೆಯಲು ಹೋದಾಗ ಅದರ ಶಬ್ದ ಕೇಳಿ ಅಳುತ್ತಿದ್ದ. ಮಗು ಅಳುತ್ತಿರುವ ಶಬ್ದ ಕೇಳಿದಾಗಲೇ ಸಿಬ್ಬಂದಿಗೆ ಧೈರ್ಯ ಬಂದಿತು. ಅಲ್ಲದೇ ನೆರೆದಿದ್ದ ಜನರಲ್ಲಿ ಕೊಂಚ ಸಂತಸ ಮನೆ ಮಾಡಿತ್ತು. ಕುಟುಂಬಸ್ಥರು ಮಗ ಬದುಕಿ ಬರುತ್ತಾನೆ ಎಂದು ಆಶಾಭಾವ ಹೊಂದಿದ್ದರು. ಇನ್ನು ಮಗುವಿನ ಹತ್ತಿರ ಹೋಗಲು ಇನ್ನಷ್ಟು ದೊಡ್ಡ-ದೊಡ್ಡ ಕಲ್ಲು-ಬಂಡೆಗಳು ಅಡ್ಡ ಬಂದಿದ್ದರಿಂದ ಕಾರ್ಯಚರಣೆಗೆ ಕೊಂಚ ವಿಳಂಬವಾಯ್ತು. ಆದರೂ ಸಿಬ್ಬಂದಿ ಮತ್ತೆ ಹಿಟಾಚಿ ಮೂಲಕ ಬಂಡೆಗಳನ್ನು ಡ್ರಿಲ್ ಮಾಡಿ ಚೂರು ಚೂರು ಮಾಡಿ ಮುಂದೆ ಸಾಗಿದರು. ಆಗ ಮಗುವಿನ ತಲೆ ಕಂಡುಬಂದಿತು. ಆದ್ರೆ, ಮಗು ದೇಹ ಪೈಪ್ಗೆ ಒರೆದುಕೊಂಡಿದ್ದರಿಂದ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಸಿಬ್ಬಂದಿ, ಅಡ್ಡ ಇದ್ದ ಬಂಡೆ-ಕಲ್ಲುಗಳನ್ನು ಡ್ರಿಲ್ ಮೂಲಕ ತೆರವುಗೊಳಿಸಿದರು. ಹಾಗೆಯೇ ರಂಧ್ರ ಕೊರೆದರೆ ಮಗುವಿನ ಮೈಮೇಲೆ ಮಣ್ಣು, ಧೂಳು ಬೀಳುವ ಸಾಧ್ಯತೆ ಇತ್ತು. ಅಲ್ಲೂ ಚಾಣಾಕ್ಷತನ ಮೆರೆದ ಅಧಿಕಾರಿಗಳು ವ್ಯಾಕ್ಯೂಮ್ ಕ್ಲೀನರ್ ಮೂಲಕ ಧೂಳನ್ನು ಎಳೆದುಕೊಂಡರು. ಆಗ ಮಗುವನ್ನು ಇನ್ನಷ್ಟು ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಾಯಿತು.
ಮಗುವಿನ ಆರೋಗ್ಯದ ಮೇಲೂ ನಿಗಾ
ಮಗು ಕೈಗೆ ತಟ್ಟುತ್ತಿದೆ ಎಂದು ತಿಳಿಯುತ್ತಿದ್ದಂತೆಯೇ ಸುರಂಗ ಮಾರ್ಗದೊಳಗೆ ಹಲವು ವೈದ್ಯಕೀಯ ಉಪಕರಣಗಳೊಂದಿಗೆ ವೈದ್ಯರನ್ನು ಕರೆಯಿಸಿಕೊಳ್ಳಲಾಯ್ತು. ಯಾಕಂದ್ರೆ ಸಾತ್ವಿಕ್ ಕಳೆದ 20 ಗಂಟೆಗಳಿಂದ ಆ ಒಂದು ಕಗ್ಗತ್ತಲ್ಲಿನಲ್ಲಿ ಇದ್ದ. ಅನ್ನ, ನೀರು ಏನು ಇಲ್ಲ. ಇದರಿಂದ ಮಗು ಅಸ್ವಸ್ಥವಾಗಿರುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಸಿಬ್ಬಂದಿ ಸಹ ಆಕ್ಸಿಜನ್ ಸೇರಿದಂತೆ ಏನೆಲ್ಲಾ ಬೇಕಿತ್ತೋ ಆ ಎಲ್ಲಾ ಉಪಕರಣಗಳ ಸಮೇತ ಮಗು ಇರುವ ಸುರಂಗದೊಳಗೆ ಹೋಗಿದ್ದರು. ಬಳಿಕ ಮಗುವನ್ನು ರಕ್ಷಣಾ ಸಿಬ್ಬಂದಿ ಹೊರ ತೆಗೆಯುತ್ತಿದ್ದಂತೆಯೇ ವೈದ್ಯಕೀಯ ಸಿಬ್ಬಂದಿ ಸಾತ್ವಿಕನ ಕಿವಿ ಮುಚ್ಚಿ ಆಮ್ಲಜನಕ ನೀಡಿದರು. ಬಳಿಕ ಫೋಲ್ಡಿಂಗ್ ಸ್ಟ್ರೆಚರ್ ಮೂಲಕ ಸುರಂಗದಿಂದ ಮೇಲಕ್ಕೆ ತರಲಾಯ್ತು. ನಂತರ ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ನೇರವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಇಂಡಿ ತಾಲೂಕು ಆಸ್ಪತ್ರೆಗೆ ರವಾನಿಸಲಾಯ್ತು.
ಒಟ್ಟಿನಲ್ಲಿ ಸತತ 20 ಗಂಟೆಗಳ ಕಾರ್ಯಚರಣೆ ಬಳಿಕ ಪುಟ್ಟ ಕಂದ ಸಾತ್ವಿಕ್ ಸಾವನ್ನು ಗೆದ್ದುಬಂದಿದ್ದು ಒಂದು ವಿಸ್ಮಯ ಎಂದು ಹೇಳಬಹುದು. ಈ ಹಿಂದೆ ಇದೇ ಜಿಲ್ಲೆಯಲ್ಲಿ ಎರಡು ಬೋರ್‌ವೆಲ್ ಪ್ರಕರಣಗಳು ಸಂಭವಿಸಿದ್ದರು. ಆದ್ರೆ, ಮಕ್ಕಳು ಮಾತ್ರ ಬದುಕಿಬಂದಿರಲಿಲ್ಲ. ಇದೀಗ ಹಲವು ಸಿಬ್ಬಂದಿಯ ಕಾರ್ಯಚರಣೆ, ಚಾಣಾಕ್ಷ್ಯತನದಿಂದ ಸಾತ್ವಿಕ್ ಜೀವಂತವಾಗಿ ಆಚೆ ಬಂದಿದ್ದಾನೆ. ನಿಜಕ್ಕೂ ಈ ಕಾರ್ಯಚರಣೆಯಲ್ಲಿ ನಿರಂತರವಾಗಿ ಶ್ರಮಿಸಿದ ಎಲ್ಲಾ ಸಿಬ್ಬಂದಿಗೆ ಒಂದು ಸೆಲ್ಯೂಟ್ ಹೇಳಲೇಬೇಕು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0