ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 26 : ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಕೊಲೆಯಾಗಿರುವ ಮೃತ ರೇಣುಕಾ ಸ್ವಾಮಿ ಮನೆಗೆ ಹಿರಿಯ ನಟ ವಿನೋದ್ ರಾಜ್ ಭೇಟಿ ನೀಡಿದರು. ಮೃತರ ಪೋಷಕರು ಹಾಗೂ ಪತ್ನಿಯನ್ನ ಭೇಟಿ ಮಾಡಿ ಸಾಂತ್ವನ ಹೇಳಿದರು, ಅಲ್ಲದೆ ಒಂದು ಲಕ್ಷ ವೈಯಕ್ತಿಕ ಧನಸಹಾಯ ಮಾಡಿ, ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಕಾಲಿಗೆ ನಮಸ್ಕರಿಸಿದರು.
ಇನ್ನು ಇತ್ತೀಚಿಗಷ್ಟೇ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ ಅವರನ್ನು ವಿನೋದ್ ರಾಜ್ ಭೇಟಿ ಮಾಡಿದ್ದರು. ಮೊದಲು ರೇಣುಕಾ ಸ್ವಾಮಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಎಂದು ನೆಟ್ಟಿಗರು ಆಗ್ರಹಿಸಿದ್ದರು. ಅದರಂತೆ ಇಂದು ನಟ ವಿನೋದ್ ರಾಜ್ ಭೇಟಿ ನೀಡಿದ್ದಾರೆ.

ಭೇಟಿ ಬಳಿಕ ನಟ ವಿನೋದರಾಜ್ ಮಾಧ್ಯಮಗಳ ಜೊತೆ ಪ್ರತಿಕ್ರಿಯೆ ನೀಡಿರುವ ಅವರು ಮೃತ ರೇಣುಕಾಸ್ವಾಮಿ ಅವರು ಮನೆಗೆ ಆಧಾರವಾಗಿದ್ದರು. ಆದ್ರೆ ಇಂದು ಅವರೇ ಕುಟುಂಬದಲ್ಲಿ ಇಲ್ಲ ವಯಸ್ಸಾದ ಅಜ್ಜಿ ಇದಾರೆ. ಈಗ ಅವರನ್ನು ನೋಡಿಕೊಳ್ಳೋರು ಯಾರೂ ಇಲ್ಲ, ಜೀವನ ಇಡೀ ಸಂಪಾದನೆ, ಹೆಸರು ಮಾಡೋದು ಅಲ್ಲ, ಜೀವನವಿಡೀ ನಾವು ಒಳ್ಳೆಯದನ್ನೇ ಮಾಡಬೇಕು. ತಂದೆ, ತಾಯಿ ರೂಪದಲ್ಲಿ ದೇವರು ಮನುಷ್ಯ ಜೀವಿಯನ್ನು ಸೃಷ್ಟಿಸಿದ್ದಾನೆ. ಕಲಾವಿದರಾದ ನಾವು ಸರಿಯಾಗಿ ನಡೆದುಕೊಳ್ಳಬೇಕು, ನಾವು ತಪ್ಪು ಮಾಡಿದ್ರೂ ಅದು ಸರಿ ನಾ ಅನ್ನೋ ಭಾವನೆ ಜನರಿಗೆ ಬರುತ್ತೆ ಎಂದರು.
ಕಲಾವಿದರಾದ ನಾವು ಮಾತನಾಡಿದ್ರೆ ಅದು ದೊಡ್ಡದಾಗಿ ಕಾಣುತ್ತೆ ಕಲಾವಿದರಾದ ನಾವು ಜನಸಮಾನ್ಯರಂತೆಯೇ ಇರ್ತೀವಿ. ಆದ್ರೆ ನಮಗೆ ಗೌರವದ ಜೊತೆ ಜವಾಬ್ದಾರಿ ಕೊಟ್ಟು ಬಿಟ್ಟಿರ್ತಾರೆ. ನಾವು ಸಮಾಜದಲ್ಲಿ ಬಹಳ ಎಚ್ಚರಿಕೆಯಿಂದ ಬಾಳಬೇಕು ಮಾಧ್ಯಮದವರು ಮಿತ್ರರೇ ಹೊರತು ಶತ್ರುಗಳಲ್ಲ, ಅವ್ರು ಕೆಲವೇಳೆ ನಮಗೆ ತಿದ್ದಿ ಬುದ್ದಿ ಹೇಳ್ತಾರೆ. ನಾವು ಅವರೊಂದಿಗೆ ತುಂಬಾ ಒಳ್ಳೆಯ ರೀತಿ ನಡೆದುಕೊಳ್ಳಬೇಕು. ಇಲ್ಲದಿದ್ರೆ ಇಂಥ ಅಚಾತುರ್ಯ ನಡೆಯುತ್ತೆ, ಒಂದು ಜೀವ ತೆಗೆಯಲು ಯಾರಿಗೂ ಹಕ್ಕು ಇಲ್ಲ. ಮಾನವೀಯತೆ ಎಲ್ಲಿ ಹೋಗಿದೆ ಅನ್ನೋದು ನನ್ನ ಪ್ರಶ್ನೆ’ ಎಂದರು.
ಇನ್ನು ಜೈಲಲ್ಲಿ ದರ್ಶನ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು ಜೈಲಲ್ಲಿ ನನ್ನ ಜೊತೆ 5 ಜನ ದರ್ಶನ್ರನ್ನು ಭೇಟಿ ಮಾಡಿದ್ರು, ಈ ವೇಳೆ ನಮ್ಮನ್ನು ನೋಡಿ ದರ್ಶನ್ ಭಾವುಕರಾದ್ರು ಈ ವೇಳೆ ಅವ್ರು ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲಿ ಅಂತಿದಾರೆ. ಅವರು ಹೇಳಿದ್ದನ್ನು ಬಿಟ್ಟು ನಾನು ಬೇರೇನು ಹೇಳಲು ಸಾಧ್ಯ ಎಂದರು.
ಇನ್ನು ದರ್ಶನ್ ಭೇಟಿ ಬಳಿಕ ರೇಣುಕಾಸ್ವಾಮಿ ಮನೆ ಭೇಟಿ ಕುರಿತು ಮಾತನಾಡಿದ ಅವರು ದರ್ಶನ್ ಭೇಟಿಗೆ ಮೊದಲೇ ಬರಬೇಕು ಅಂತಿದ್ದೆ.ಆದ್ರೆ ನನಗೆ 7ನೇತಾರೀಕು ಮೇಜರ್ ಸರ್ಜರಿ ಆಯ್ತು. ಈಗ ನಾನು ಸುಧಾರಿಸಿಕೊಂಡ ಬಳಿಕ ಭೇಟಿ ಮಾಡಿದೆ ‘ಜೈಲಿನಲ್ಲಿ ದರ್ಶನ್ ಅವರ ಜತೆ ಹೆಚ್ಚಾಗಿ ಮಾತಾಡಲು ಅವಕಾಶ ಕೊಡಲಿಲ್ಲ. ಸಂಕಟ ವ್ಯಕ್ತಪಡಿಸಿದರು ಅಷ್ಟೇ ಇನ್ನೇನು ಮಾತಾಡಿಲ್ಲ. ತಬ್ಬಿಕೊಂಡು ತಮ್ಮ ಪಶ್ಚಾತ್ತಾಪ ವ್ಯಕ್ತಪಡಿಸಿದರು. ನನ್ನ ನೋಡಿ ಭಾವುಕರಾಗಿ ಕಣ್ಣೀರು ಹಾಕಿದರು. ದರ್ಶನ್ ಒಂದು ರೀತಿಯ ನೋವು, ಆದ್ರೆ ಇವ್ರ ಕುಟುಂಬದವರದ್ದು ಭಯಂಕರ ನೋವು. ಮನೆಯಲ್ಲಿನ ಕಷ್ಟಗಳನ್ನು ನೋಡಿ ಕಣ್ಣೀರು ಬಂತು ನನಗೆ’ ಎಂದು ಭಾವುಕರಾದರು.
ಸಂಧಾನಕ್ಕೆ ಮುಂದಾಗಿಲ್ಲ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಾವು ಯಾರ ಹಾಗೂ ಯಾವ ಸಂಧಾನಕ್ಕೆ ಮುಂದಾಗಿಲ್ಲ, ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಕಣ್ಣೀರು ಹಾಕಿದರು.ವಿನೋದ್ ರಾಜ್ ಮುಂದೆ ರೇಣುಕಾಸ್ವಾಮಿ ತಂದೆ ಕಣ್ಣೀರು ಇಟ್ಟರು. ಅವನು ನರಳಿದ್ದ ರೀತಿ ಕೇಳಿದ್ರೆ ನಮ್ಮ ಕರುಳು ಕಿತ್ತು ಬರುತ್ತಿದೆ. ನಾವು ಬಹಳ ನೊಂದಿದ್ದೇವೆ ನನ್ನ ಮನೆತನ ನಾಶವಾಗಿದೆ. ನನ್ನ ಮಗ ಹೋದಾಗಿಂದ ತುಂಬಾ ನೋವಿನಲ್ಲಿದೆ. ಸರ್ಕಾರಕ್ಕೆ ವಿನಂತಿ ಮಾಡುತ್ತೇವೆ ಸೊಸೆಗೆ ಸರ್ಕಾರಿ ಕೆಲಸ ಕೊಡಿ, ನನ್ನ ಮಗನಿಗೆ ನ್ಯಾಯಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಅಳಲು ತೋಡಿಕೊಂಡಿದ್ದಾರೆ.