ಲಖನೌ: ಯೂಟ್ಯೂಬ್(YouTube) ವಿಡಿಯೋ(Viral Video) ನೋಡಿ ಅಡುಗೆ ಮಾಡುವುದು, ರಂಗೋಲಿ ಬಿಡಿಸುವುದು ಅಥವಾ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಂಡು ಅಲ್ಲಿ ಹೋಗುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ ಉದಾಹರಣೆಗಳೂ ಇವೆ. ಹೀಗೆ, ಯೂಟ್ಯೂಬ್‌ನಲ್ಲಿನ ವಿಡಿಯೋಗಳನ್ನು ನೋಡಿ ತಮಗೆ ಬೇಕಾದ್ದನ್ನು ಮನೆಯಲ್ಲೇ ಮಾಡಬಹುದು ಎಂದು ಹೊರಟ ಉತ್ತರ ಪ್ರದೇಶದ (Uttar Pradesh) ಒಬ್ಬ ವ್ಯಕ್ತಿ ದೊಡ್ಡ ಸಮಸ್ಯೆಯನ್ನೇ ಮೈಮೇಲೆ ಎಳೆದುಕೊಂಡಿದ್ದಾನೆ.

ವಿಚಿತ್ರವೆಂದು ಅನ್ನಿಸುವ ಒಂದು ಘಟನೆ ಉತ್ತರ ಪ್ರದೇಶದ ಸುನ್ರಾಖ್ ಎಂಬ ಗ್ರಾಮದಲ್ಲಿ ನಡೆದಿದೆ. ಇಲ್ಲಿ 32 ವರ್ಷದ ರಾಜಾ ಬಾಬು(Rajababu Kumar) ಎಂಬ ಯುವಕ ತನ್ನ ಶಸ್ತ್ರಚಿಕಿತ್ಸೆ (surgery) ಯನ್ನು ತಾನೇ ಮಾಡಿಕೊಂಡಿದ್ದಾನೆ. ಆತನೇನು ವೈದ್ಯಕೀಯ ಶಿಕ್ಷಣ ಓದಿದ ವ್ಯಕ್ತಿಯಲ್ಲ. ಬದಲಾಗಿ, ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಸರ್ಜರಿ ಮಾಡುವುದು ಹೇಗೆ ಎಂದು ಕಲಿತಿದ್ದ. ಆದರೆ, ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಎಷ್ಟು ಅಂತ ಕಲಿಯಬಹುದು ಹೇಳಿ.
ಅಸಲಿಗೆ ನಡೆದದ್ದೇನು?
ರಾಜಾ ಬಾಬು ಕಳೆದ ಹಲವು ದಿನಗಳಿಂದ ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಆಯುರ್ವೇದ ಸೇರಿ ಹಲವು ರೀತಿ ಚಿಕಿತ್ಸೆ ಮಾಡಿದರೂ ಅದು ಗುಣವಾಗಿರಲಿಲ್ಲ. ನೋವಿನಿಂದ ಬಳಲಿ ಸಾಕಾಗಿ ಹೋಯ್ತು ಅಂತ ಹೇಳಿ, ಅವನು ತನ್ನ ಹೊಟ್ಟೆಯನ್ನು ಕೊಯ್ದು ಸಮಸ್ಯೆ ಏನು ಎಂಬುದನ್ನು ನೋಡಲು ಹೊರಟಿದ್ದ. ಇದಕ್ಕಾಗಿ, ಆತನೇ ಮಾರುಕಟ್ಟೆಗೆ ಹೋಗಿ ಸರ್ಜರಿಗೆ ಬೇಕಾದ ಬ್ಲೇಡ್, ಗಾಯ ಹೊಲಿಯಲು ಸೂಜಿ ಮತ್ತು ದಾರ, ಅನಸ್ತೇಶಿಯಾ ಸೇರಿದಂತೆ ಎಲ್ಲಾ ರೀತಿಯ ವಸ್ತುಗಳನ್ನು ಖರೀದಿಸಿ ತಂದಿದ್ದ. ಯಾವ ವೈದ್ಯರ ಚೀಟಿ ಇಲ್ಲದೆ, ಈ ವಸ್ತುಗಳನ್ನು ಆತ ಖರೀದಿಸಿದ್ದು ಹೇಗೆ ಎಂಬ ಕುರಿತು ಯಾವುದೇ ವರದಿಯಾಗಿಲ್ಲ.
ಎಲ್ಲ ವಸ್ತುಗಳನ್ನು ಖರೀದಿಸಿದ ನಂತರ ಮನೆಗೆ ಬಂದು, ತನ್ನ ಕೋಣೆಯ ಬಾಗಿಲು ಮುಚ್ಚಿ ಯೂಟ್ಯೂಬ್ ನೋಡುತ್ತಾ ತನ್ನ ಹೊಟ್ಟೆಯನ್ನು ತಾನೇ ಕೊಯ್ಯಲು ಆರಂಭಿಸಿದ್ದಾನೆ. ಮೊದಲೇನೋ ಅರಿವಳಿಕೆ ನೀಡಿದ್ದರಿಂದ ಆತನಿಗೆ ನೋವು ಗೊತ್ತಾಗಿಲ್ಲ. ಯಾವಾಗ ಅರಿವಳಿಕೆ ಔಷಧಿಯ ಪ್ರಭಾವ ಕಡಿಮೆಯಾಗಲು ಪ್ರಾರಂಭಿಸಿತೋ, ಆಗ ನೋವಿನಿಂದ ಕಿರುಚಲು ಪ್ರಾರಂಭಿಸಿದ್ದಾನೆ.
ಆತನ ಪುಣ್ಯಕ್ಕೆ ಮನೆಯಲ್ಲಿಯೇ ಇದ್ದ ಕುಟುಂಬಸ್ಥರು ಬಾಗಿಲು ಒಡೆದು ಅವನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೊದಲು ಅವನನ್ನು ಜಿಲ್ಲಾ ಜಂಟಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಅವನ ಸ್ಥಿತಿ ಗಂಭೀರವಾಗಿರುವುದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಅವನನ್ನು ಆಗ್ರಾ ಎಸ್‌ಎನ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಏನೋ ಮಾಡಲು ಹೋಗಿ ಇನ್ನೇನೋ ಆದಂತೆ, ರಾಜಾ ಬಾಬು ತನ್ನ ಪ್ರಾಣವನ್ನು ಕಳೆದುಕೊಳ್ಳುವುದರಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ಎಲ್ಲವನ್ನೂ ಯೂಟ್ಯೂಬ್, ಗೂಗಲ್ ನೋಡಿ ಕಲಿಯುತ್ತೇವೆ ಎಂಬ ಅತಿ ಬುದ್ಧಿವಂತಿಕೆ ಈತನ ಪ್ರಾಣಕ್ಕೆ ಮುಳುವಾಗಿದ್ದಂತೂ ನಿಜ.
Source: Vishwavani