Viral Video: ಹೀಗೂ ರನೌಟ್ ಮಾಡ್ತರಾ? ಮೈದಾನದಲ್ಲೇ ರೊಚ್ಚಿಗೆದ್ದ ಬ್ಯಾಟರ್..!

Viral Video: Batter Throws Bat Away After Being Run-out

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮತ್ತು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಮಂಕಡ್ ರನೌಟ್ ಅನ್ನು ಕಾನೂನು ಬದ್ಧಗೊಳಿಸಿದರೂ, ಇನ್ನೂ ಕೆಲ ಆಟಗಾರರು ಅದರ ವಿರುದ್ಧವಾಗಿ ಉಳಿದಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಆಸ್ಟ್ರೇಲಿಯಾದಲ್ಲಿ ನಡೆದ ಕ್ಲೇರ್ಮಾಂಟ್ ಮತ್ತು ನ್ಯೂ ನಾರ್ಫೋಕ್ ಪಂದ್ಯದಲ್ಲಿ ಕಂಡು ಬಂದ ಮಂಕಡ್ ರನೌಟ್. ಈ ಪಂದ್ಯದಲ್ಲಿ ನಾನ್​ ಸ್ಟ್ರೈಕ್​ನಲ್ಲಿದ್ದ ಬ್ಯಾಟರ್​ ಜರೋಡ್ ಕೇಯ್  ರನೌಟ್ ಆಗಿದ್ದರು. ಚೆಂಡೆಸೆಯುವ ಮುನ್ನ ಕ್ರೀಸ್ ತೊರೆದಿದ್ದ ಜರೋಡ್ ಅವರನ್ನು ಬೌಲರ್ ಮಂಕಡ್ ರನೌಟ್ ಮಾಡಿದ್ದರು. ಅಲ್ಲದೆ ಅಂಪೈರ್​ಗೆ ಬಲವಾದ ಮನವಿ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ಅಂಪೈರ್ ನಾನ್​ ಸ್ಟ್ರೈಕರ್ ಔಟ್ ಎಂದು ತೀರ್ಪಿತ್ತರು. ಇತ್ತ ಅಂಪೈರ್​ ತೀರ್ಪಿನಿಂದ ರೊಚ್ಚಿಗೆದ್ದ ಜರೋಡ್ ಕೇಯ್ ಪೆವಿಲಿಯನ್‌ಗೆ ಹಿಂತಿರುಗುವಾಗ ತನ್ನ ಬ್ಯಾಟ್ ಮತ್ತು ಕೈಗವಸುಗಳನ್ನು ಮೈದಾನದಲ್ಲಿ ಎಸೆಯುತ್ತಾ ತನ್ನ ಆಕ್ರೋಶವನ್ನು ಹೊರಹಾಕಿದರು.

ಇದೀಗ ಜರೋಡ್ ಕೇಯ್ ಅವರ ಅವರ ಆಕ್ರಮಣಕಾರಿ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಅನೇಕರು ಪ್ರತಿಕ್ರಿಯಿಸಿದ್ದು, ಹೆಚ್ಚಿನವರು ಕೇಯ್ ಅವರ ವರ್ತನೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಕ್ರಿಕೆಟ್ ನಿಯಮವನ್ನು ತಿಳಿದು ಬ್ಯಾಟಿಂಗ್ ಬರುವಂತೆ ಕೆಲವರು ಸಲಹೆ ನೀಡಿದ್ದಾರೆ.

ಮಂಕಡ್ ರನೌಟ್ ಎಂದರೇನು?

ಐಸಿಸಿಯ ನೂತನ ನಿಯಮದ ಪ್ರಕಾರ, ಮಂಕಡ್ ರನೌಟ್ ಮಾಡಬಹುದು. ಅಂದರೆ ಬೌಲರ್​ ಚೆಂಡೆಸೆಯುವ ಮುನ್ನ ಬ್ಯಾಟ್ಸ್​ಮನ್ ಕ್ರೀಸ್​ ಬಿಟ್ಟರೆ ರನೌಟ್ ಮಾಡುವ ಅವಕಾಶ ಇದೆ. ಇಲ್ಲಿ ಬ್ಯಾಟ್ಸ್​ಮನ್​ಗಳಿಗೆ ಯಾವುದೇ ವಾರ್ನಿಂಗ್ ನೀಡಬೇಕಾದ ಅವಶ್ಯಕತೆಯಿಲ್ಲ. ಈ ನಿಯಮವು ಕಳೆದ ಟಿ20 ವಿಶ್ವಕಪ್​ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಜಾರಿಗೊಳಿಸಲಾಯಿತು.

ಮಂಕಡ್​ಗೂ ಭಾರತಕ್ಕೂ ಇದೆ ನಂಟು:

ಕ್ರಿಕೆಟ್​ನಲ್ಲಿ ಮಂಕಡ್ ರನೌಟ್ ಅಥವಾ ಮಂ​ಕಡಿಂಗ್ ರನೌಟ್​ ಎಂಬ ಹೆಸರು ಬರಲು ಮುಖ್ಯ ಕಾರಣ ಭಾರತದ ಮಾಜಿ ಆಟಗಾರ ವಿನೂ ಮಂಕಡ್. 1947 ರಲ್ಲಿ ಆಸ್ಟ್ರೇಲಿಯನ್ ಬ್ಯಾಟ್ಸ್​ಮನ್ ಬಿಲ್​ ಬ್ರೌನ್ ಅನ್ನು ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ಬಿಟ್ಟ ಕಾರಣ ವಿನೂ ಮಂ​ಕಡ್ ನಾನ್​ ಸ್ಟ್ರೈಕ್​ನಲ್ಲಿ ರನೌಟ್ ಮಾಡಿದ್ದರು.

ಭಾರತೀಯ ಆಟಗಾರ​ ಮಾಡಿದ ಹೊಸ ರೀತಿಯ ರನೌಟ್ ಹೊಸ ಚರ್ಚೆಯನ್ನು ಹುಟ್ಟು ಹಾಕಿತು. ಅಂದು ವಿನೂ ಮಂ​ಕಡ್ ಮಾಡಿದ ರನೌಟ್ ನಂತರ ಮಂ​ಕಡ್ ರನೌಟ್ ಅಥವಾ ಮಂ​ಕಡಿಂಗ್ ಎಂದೇ ಪ್ರಸಿದ್ಧಿ ಪಡೆಯಿತು. ಇದನ್ನೇ ಮುಂದೆ ಕ್ರಿಕೆಟ್ ನಿಯಮದಲ್ಲಿ ಮಂ​ಕಡಿಂಗ್ ರನೌಟ್​ ಎಂದು ಕರೆಯಲಾಯಿತು.

ಇದನ್ನೂ ಓದಿ: SA vs WI: ಬರೋಬ್ಬರಿ 517 ರನ್​: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಸೌತ್ ಆಫ್ರಿಕಾ

ಈ ಹಿಂದೆ ಮಂಕಡ್ ರನೌಟ್ ಮಾಡುವ ಮೊದಲು ಬ್ಯಾಟರ್​ಗೆ 1 ಬಾರಿ ಎಚ್ಚರಿಕೆ ನೀಡಬೇಕೆಂಬ ನಿಯಮವಿತ್ತು. ಆದರೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಮಂ​ಕಡಿಂಗ್ ರನೌಟ್ ಅನ್ನು ಸಾಮಾನ್ಯ ರನೌಟ್​ನಂತೆ ಪರಿಗಣಿಸಲಾಗಿದೆ. ಅದರಂತೆ ಚೆಂಡೆಸೆಯುವ ಮುನ್ನ ನಾನ್​ ಸ್ಟ್ರೈಕರ್ ಬ್ಯಾಟರ್​ ಕ್ರೀಸ್​ ಬಿಟ್ಟರೆ ನೇರವಾಗಿ ರನೌಟ್ ಮಾಡುವ ಅವಕಾಶ ಬೌಲರ್​ಗಿದೆ. ಇತ್ತ ನಿಯಮನುಸಾರ ಬೌಲರ್ ಮಾಡಿದ ಮಂಕಡ್ ರನೌಟ್​ಗೆ ಜರೋಡ್ ಕೇಯ್ ಆಕ್ರೋಶಭರಿತರಾಗಿರುವುದೇ ಅಚ್ಚರಿ.

 

source https://tv9kannada.com/sports/cricket-news/viral-video-batter-throws-bat-away-after-being-run-out-kannada-news-zp-au50-544541.html

Leave a Reply

Your email address will not be published. Required fields are marked *