Viral Video: ಕುಡಿದ ಮತ್ತಿನಲ್ಲಿ ಕೆರೆಯಲ್ಲಿ ಹಾಯಾಗಿ ಮಲಗಿದ ವ್ಯಕ್ತಿ, ಸಾವನ್ನಪ್ಪಿದ್ದಾನೆ ಎಂದು  ಪೊಲೀಸರನ್ನು ಕರೆಸಿದ ಸ್ಥಳೀಯರು

ಕೆಲವೊಮ್ಮೆ ನಮ್ಮ ಕಣ್ಣಮುಂದೆಯೇ ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಹೌದು ಈ ಹಿಂದೆಯೂ ಇನ್ನೇನೂ ಮೃತದೇಹ ಶವಗಾರದಲ್ಲಿಡಬೇಕು ಎನ್ನುವಷ್ಟರಲ್ಲಿ ದಿಢೀರನೆ ಎದ್ದು ಕುಳಿತ ಸತ್ತ ವ್ಯಕ್ತಿಗಳ ಸುದ್ದಿಗಳೂ ವೈರಲ್‌ ಆಗಿದ್ದುಂಟು. ಇಂತಹ ಘಟನೆಗಳು ನಿಜಕ್ಕೂ ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತದೆ. ಇದೀಗ ಅಂತಹದ್ದೇ ಸ್ವಾರಸ್ಯಕರ ಘಟನೆಯೊಂದು ನಡೆದಿದ್ದು, ಕೆರೆಯಲ್ಲಿ ಯಾವುದೋ ಮೃತದೇಹ ತೇಲುತ್ತಿದೆಯೆಂದು ಸ್ಥಳೀಯರು ಪೊಲೀಸರನ್ನು ಕರೆಸಿದ್ದು, ನೀರಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ದಿಢೀರನೇ ಆತ ಎಚ್ಚರಗೊಂಡಿದ್ದಾನೆ. ನಂತರ ಕುಡಿದ ಮತ್ತಿನಲ್ಲಿ ಹಾಯಾಗಿ ನೀರಲ್ಲಿ ಮಲಗಿದ್ದಾನೆ ಎಂಬ ವಿಷಯ ತಿಳಿದು ಬಂದಿದೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಅಚ್ಚರಿಯ ಪ್ರಕರಣ ತೆಲಂಗಾಣದ ಹನುಮಕೊಂಡ ಎಂಬಲ್ಲಿ ನಡೆದಿದ್ದು, ಕ್ವಾರಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕೆರೆಯ ನೀರಿನಲ್ಲಿಯೇ ಹಾಯಾಗಿ ಮಲಗಿರುತ್ತಾನೆ. ಸುಮಾರು ಹೊತ್ತಿನಿಂದ ದೇಹದಲ್ಲಿ ಯಾವುದೇ ಚಲನವಲನ ಇಲ್ಲದಿರುವುದನ್ನು ಗಮನಿಸಿದ ಅಲ್ಲಿನ ಸ್ಥಳೀಯರು ಈ ವ್ಯಕ್ತಿ ಸತ್ತು ಬಿದ್ದಿದ್ದಾನೆ ಎಂದು ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಬಳಿಕ ಪೊಲೀಸರು ಸುತ್ತಮುತ್ತಲಿನ ಜನರಿಂದ ಮಾಹಿತಿ ಸಂಗ್ರಹಿಸಿ ನಂತರ ದೇಹವಿರುವ  ಸ್ಥಳಕ್ಕೆ ಬಂದಿದ್ದಾರೆ. ಕೆರೆಯಿಂದ ದೇಹವನ್ನು ಪೊಲೀಸರು ಮೇಲಕ್ಕೆತ್ತುವ ಸಂದರ್ಭದಲ್ಲಿ ಆ ವ್ಯಕ್ತಿ ಎಚ್ಚರಗೊಳ್ಳುತ್ತಾನೆ. ಆತ ಎಚ್ಚರಗೊಂಡದ್ದನ್ನು ಕಂಡು ಅಲ್ಲಿದ್ದ ಎಲ್ಲರೂ ಒಮ್ಮೆಗೆ ಶಾಕ್‌ ಆಗುತ್ತಾರೆ. ನಂತರ ಇದು ಕುಡಿದ ಮತ್ತಿನಲ್ಲಿ ನಡೆದ  ಎಡವಟ್ಟು ಎಂದು ಪೊಲೀಸರಿಗೆ ತಿಳಿಯುತ್ತದೆ.

ಈ ಘಟನೆಯ ವಿಡಿಯೋವನ್ನು ಸುಧಾಕರ್‌ (sudhakarudummula) ಎಂಬವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಪೊಲೀಸರು ಮೃತದೇಹವನ್ನು ಮೇಲಕೆತ್ತುವ ದೃಶ್ಯವನ್ನು ಕಾಣಬಹುದು. ಕೆರೆಯಲ್ಲಿ ಮಲಗಿದ್ದ ವ್ಯಕ್ತಿ ನಿಜವಾಗಿ ಸತ್ತಿದ್ದಾನೆ ಎಂದು ಭಾವಿಸಿದ ಪೊಲೀಸರು ಆತನ ಕೈಯನ್ನು ಹಿಡಿದು ಮೇಲಕ್ಕೆತ್ತುವಾಗ ಆತ ಎಚ್ಚರಗೊಂಡಿದ್ದಾನೆ. ಕುಡಿದ ಮತ್ತಿನಲ್ಲಿ ಈ ರೀತಿ  ನೀರಿನಲ್ಲಿ ಮಲಗಿದ್ದು ಎಂದು ಆತ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 43 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಯ್ಯೋ ದೇವ್ರೆ ಈ ಘಟನೆ ನಿಜಕ್ಕೂ ಹಾಸ್ಯಮಯವಾಗಿದೆ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

Source : https://tv9kannada.com/trending/telangana-drunk-man-mistaken-for-dead-found-alive-in-pond-video-goes-viral-viral-news-mda-848479.html

Leave a Reply

Your email address will not be published. Required fields are marked *