ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಿಂಹವು ಮರದ ಎಲೆಗಳನ್ನು ತಿನ್ನುತ್ತಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನವದೆಹಲಿ: ಇತ್ತೀಚೆಗೆ ಜಿಂಕೆಯೊಂದು ಹುಲ್ಲು ತಿನ್ನುವ ಬದಲು ಜೀವಂತ ಹಾವನ್ನು ತಿಂದು ಅಚ್ಚರಿ ಮೂಡಿಸಿತ್ತು. ಪಕ್ಕಾ ಸಸ್ಯಾಹಾರಿ ಜಿಂಕೆ ಹಾವು ತಿನ್ನುತ್ತಿರುವ ದೃಶ್ಯವನ್ನು ಕಂಡು ನೆಟಿಜನ್‍ಗಳು ಹೌಹಾರಿಹೋಗಿದ್ದರು. ಇದೀಗ ಇದಕ್ಕೆ ತದ್ವಿರುದ್ಧವೆಂಬತೆ ಕಾಡಿನ ರಾಜ ಸಿಂಹ ಮಾಂಸದ ಬದಲು ಎಲೆಗಳನ್ನು ತಿಂದು ಅಚ್ಚರಿ ಮೂಡಿಸಿದೆ.
ಹೌದು, ಕಾಡಿನ ಅತ್ಯಂತ ಬಲಿಶಾಲಿ ಪ್ರಾಣಿ, ಗತ್ತು-ಗಾಂಭೀರ್ಯಕ್ಕೆ ಹೆಸರಾದ ಕಾಡಿನ ರಾಜ ಸಿಂಹ ಪಕ್ಕಾ ಮಾಂಸಹಾರಿ. ಕಾಡಿನಲ್ಲಿ ಭರ್ಜರಿ ಬೇಟೆಯಾಡುವ ಮೂಲಕ ಹಸಿವು ನಿಗಿಸಿಕೊಳ್ಳುತ್ತದೆ. ಕಾಡಿನ ಅಧಿಪತಿಯಾಗಿ ಆಳ್ವಿಕೆ ನಡೆಸುವ ಸಿಂಹ ಮಾಂಸಾಹಾರಿ ಮತ್ತು ಭೇಟೆಯ ಕೌಶಲ್ಯಗಳಿಗೆ ಹೆಸರುವಾಸಿ. ಆದರೆ ಮಾಂಸಹಾರಿ ಸಿಂಹ ಸಸ್ಯಹಾರಿ ಆಗಿ ಗಿಡದಲ್ಲಿರುವ ಎಲೆಗಳನ್ನು ತಿನ್ನುತ್ತದೆ ಎಂದರೆ ನೀವು ನಂಬುತ್ತೀರಾ?
ನೀವು ನಂಬಲೇಬೇಕು… ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಿಂಹವು ಮರದ ಎಲೆಗಳನ್ನು ತಿನ್ನುತ್ತಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅವರು ಸುದೀರ್ಘ ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ಹೌದು, ಸಿಂಹಗಳು ಕೆಲವೊಮ್ಮೆ ಹುಲ್ಲು ಮತ್ತು ಎಲೆಗಳನ್ನು ತಿನ್ನುತ್ತವೆ. ಇದು ಆಶ್ಚರ್ಯವಾಗಬಹುದು, ಆದರೆ ಅವು ಹುಲ್ಲು ಮತ್ತು ಎಲೆಗಳನ್ನು ಏಕೆ ತಿನ್ನುತ್ತವೆ ಎಂಬುದಕ್ಕೆ ಹಲವು ಕಾರಣಗಳಿವೆ. ಎಲೆ ತಿಂದರೆ ಸಿಂಹಗಳಿಗೆ ಹೊಟ್ಟೆ ನೋವನ್ನು ಪರಿಹರಿಸಲು ಸಹಾಯ ಮಾಡುತ್ತದೆ ಮತ್ತು ವಿಪರೀತ ಸಂದರ್ಭಗಳಲ್ಲಿ ನೀರನ್ನು ಒದಗಿಸುತ್ತದೆ’ ಎಂದು ವಿವರಿಸಿದ್ದಾರೆ.
ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, ಹೌದು, ನಮ್ಮ ಬೆಕ್ಕು ಮತ್ತು ನಾಯಿಗಳು ಕೂಡ ಹುಲ್ಲು ತಿನ್ನುತ್ತವೆ. ಆದರೆ ಕೆಲವೊಮ್ಮೆ ಹೆಚ್ಚು ತಿನ್ನುವುದು ಅವುಗಳ ಹೊಟ್ಟೆಗೆ ತೊಂದರೆಯನ್ನುಂಟು ಮಾಡುತ್ತದೆ’ ಎಂದು ಹೇಳಿದ್ದಾರೆ.
‘ಹುಲ್ಲು ಮತ್ತು ಎಲೆಗಳು ಮಾಂಸವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ. ನಮ್ಮ ನಾಯಿಯು ಸಹ ಊಟ ಮಾಡಿದ ನಂತರವೂ ಬಹಳಷ್ಟು ತಿನ್ನುತ್ತದೆ. ಹೀಗಾಗಿ ಅದು ಕೆಲವೊಮ್ಮೆ ಹುಲ್ಲು ತಿನ್ನುತ್ತದೆ’ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ‘ಬೆಕ್ಕುಗಳು, ಸಿಂಹಗಳು ಮತ್ತು ಹುಲಿಗಳು ತಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಹುಲ್ಲು ತಿನ್ನುತ್ತವೆ’ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.