Virat Kohli: ರೈಲು ಅಪಘಾತ ಸಂತ್ರಸ್ತರಿಗೆ ವಿರಾಟ್ ಕೊಹ್ಲಿ 30 ಕೋಟಿ ರೂ. ನೀಡಿದ್ರಾ? ಇಲ್ಲಿದೆ ಸತ್ಯಾಂಶ

ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 275 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ, 1,175 ಮಂದಿ ಗಾಯಗೊಂಡಿದ್ದರು. ಈ ಘನ ಘೋರ ದುರಂತಕ್ಕೆ ದೇಶಾದ್ಯಂತ ಜನರು ಮಮ್ಮಲ ಮರುಗಿದ್ದಾರೆ.ಈ ಭೀಕರ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಕೂಡ ಸಂತಾಸ ಸೂಚಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಕೊಹ್ಲಿ, ಒಡಿಶಾದಲ್ಲಿ ಜರುಗಿದ ಭೀಕರ ರೈಲು ಅಪಘಾತದ ಸುದ್ದಿ ಕೇಳಿ ವಿಚಲಿತನಾಗಿದ್ದೇನೆ. ತುಂಬಾ ದುಃಖವಾಯಿತು. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನನ್ನ ಸಂತಾಪಗಳು.ಆ ಕುಟುಂಬ ಸದಸ್ಯರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಹಾಗೆಯೇ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ವಿರಾಟ್ ಕೊಹ್ಲಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು.ಇದೀಗ ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ರೈಲು ಅಪಘಾತದ ಸಂತ್ರಸ್ತರಿಗೆ ವಿರಾಟ್ ಕೊಹ್ಲಿ 30 ಕೋಟಿ ರೂ. ದೇಣಿಗೆ ನೀಡಿದ್ದಾರೆ/ ಸಹಾಯಹಸ್ತ ಚಾಚುವುದಾಗಿ ಭರವಸೆ ನೀಡಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿದೆ.ಆದರೆ ಅಸಲಿಯತ್ತೇನೆಂದರೆ...ವಿರಾಟ್ ಕೊಹ್ಲಿ ಇದುವರೆಗೆ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ವಿರಾಟ್ ಕೊಹ್ಲಿಯಾಗಲಿ ಅಥವಾ ಅವರ ಪತ್ನಿ ಅನುಷ್ಕಾ ಶರ್ಮಾ ಆಗಲಿ ಈ ಬಗ್ಗೆ ಯಾವುದೇ ಹೇಳಿಕೆಯನ್ನಾಗಲಿ ಅಥವಾ ಪ್ರಕಟಣೆಯನ್ನಾಗಲಿ ಹೊರಡಿಸಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ 30 ಕೋಟಿ ರೂ. ನೀಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ. ಸದ್ಯ ಇಂಗ್ಲೆಂಡ್​ನಲ್ಲಿರುವ ಕೊಹ್ಲಿ ದಂಪತಿ ಭಾರತಕ್ಕೆ ಮರಳಿದ ಬಳಿಕ ನೆರವಿನ ಹಸ್ತ ಚಾಚಿದರೂ ಅಚ್ಚರಿಪಡಬೇಕಿಲ್ಲ.
ಏಕೆಂದರೆ ಈ ಹಿಂದೆ ಕೋವಿಡ್ ಸಮಯದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೊತೆಗೂಡಿ ಪಿಎಂ-ಕೇರ್ಸ್ ಪರಿಹಾರ ನಿಧಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು. ಇದಾಗ್ಯೂ ಅವರು ನೀಡಿದ ಮೊತ್ತವನ್ನು ಬಹಿರಂಗಪಡಿಸಿರಲಿಲ್ಲ.ಹಾಗೆಯೇ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ "SeVVA" ಹೆಸರಿನ ಲಾಭರಹಿತ ಎನ್​ಜಿಒ ನಡೆಸುತ್ತಿದ್ದು, ಈ ಮೂಲಕ ಸಾಮಾಜಿಕ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೆ ಇದೇ ಸೇವಾ ಮೂಲಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದಾರೆ. ಹೀಗಾಗಿ ಕೊಹ್ಲಿ ದಂಪತಿ ಮುಂದಿನ ದಿನಗಳಲ್ಲಿ ರೈಲು ದುರಂತದ ಸಂತ್ರಸ್ತರ ನೆರವಿಗೆ ನಿಂತರೂ ಅಚ್ಚರಿಪಡಬೇಕಿಲ್ಲ.ಇನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ರೈಲು ದುರಂತರದಲ್ಲಿ ಮೃತಪಟ್ಟವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, ಈ ಚಿತ್ರವು ದೀರ್ಘಕಾಲದವರೆಗೆ ನಮ್ಮನ್ನು ಕಾಡಲಿದೆ. ಈ ದುಃಖದ ಸಮಯದಲ್ಲಿ, ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳಬಲ್ಲೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳಿಗೆ ಸೆಹ್ವಾಗ್ ಇಂಟರ್‌ನ್ಯಾಶನಲ್ ಬೋರ್ಡಿಂಗ್​ ಸ್ಕೂಲ್‌​ನಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

source https://tv9kannada.com/photo-gallery/cricket-photos/did-virat-kohli-donate-rs-30-cr-for-odisha-train-accident-victims-kannada-news-zp-595320.html

Leave a Reply

Your email address will not be published. Required fields are marked *