ಮೊಳಕಾಲ್ಮುರಿನಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಮೇಕೆ ಬಲಿ ನೀಡಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಾರಮ್ಮನಹಳ್ಳಿಯ ಯುವಕರು ಮೇಕೆ ತಲೆ ಕತ್ತರಿಸಿ ವಿರಾಟ್ ಕೊಹ್ಲಿ ಪೋಸ್ಟರ್‌ಗೆ ರಕ್ತಾಭಿಷೇಕ ಮಾಡಿದ್ದರು. ರಕ್ತಾಭಿಷೇಕ ಮಾಡಿದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದರು. ಇದರಿಂದ ಇದೀಗ ಮೂವರ ವಿರುದ್ಧ ಪ್ರಾಣಿ ಹಿಂಸೆ ಪ್ರಕರಣ ದಾಖಲಿಸಲಾಗಿದೆ.
ಹೈಲೈಟ್ಸ್:
- ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ಗೆಲುವಿಗೆ ಸಂಭ್ರಮಾಚರಣೆ, ಮೂವರಿಗೆ ಸಂಕಷ್ಟ
- ವಿರಾಟ್ ಕೊಹ್ಲಿಯ ಪೋಸ್ಟರ್ ಮುಂದೆ ಮೇಕೆ ಬಲಿಕೊಟ್ಟು ರಕ್ತಾಭಿಷೇಕದ ವಿಡಿಯೋ ಮಾಡಿ ವೈರಲ್
- ಮೊಳಕಾಲ್ಮುರು ತಾಲೂಕಿನ ಮಾರಮ್ಮನಹಳ್ಳಿಯ ಯುವಕರ ಮೇಲೆ ಪ್ರಾಣಿ ಹಿಂಸೆ ಪ್ರಕರಣ

ಮೊಳಕಾಲ್ಮುರು( ಚಿತ್ರದುರ್ಗ): ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿಆರ್‌ಸಿಬಿ ತಂಡ ಗೆದ್ದ ಸಂಭ್ರಮದಲ್ಲಿ ಸಾರ್ವಜನಿಕವಾಗಿ ಮೇಕೆ ಬಲಿ ಕೊಟ್ಟವರ ವಿರುದ್ಧ ಮೊಳಕಾಲ್ಮುರು ಪೊಲೀಸರು ಪ್ರಾಣಿ ಹಿಂಸೆಯಡಿ ಕೇಸ್ ದಾಖಲಿಸಿದ್ದಾರೆ.
ಕಳೆದ ಮೇ 5ರಂದು ಶನಿವಾರ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ತಂಡದ ಗೆಲುವನ್ನು ಹುಡುಗರ ತಂಡವೊಂದು ಭಾನುವಾರ ಪ್ರಾಣಿಬಲಿ ಮೂಲಕ ಸಂಭ್ರಮಿಸಿತು.
ತಾಲೂಕಿನ ಮಾರಮ್ಮನಹಳ್ಳಿಯ ಯುವಕರ ತಂಡವು ವಿರಾಟ್ ಕೊಹ್ಲಿ ಪೋಸ್ಟರ್ ಮುಂಭಾಗದಲ್ಲಿ ಮೇಕೆ ಬಲಿಕೊಟ್ಟಿತ್ತು. ಮೇಕೆಯೊಂದನ್ನು ಕರೆತಂದು ಮಚ್ಚಿನಿಂದ ತಲೆ ಕಡಿದು ವಿರಾಟ್ ಕೊಹ್ಲಿ ಪೋಸ್ಟರ್‌ಗೆ ರಕ್ತಾಭಿಷೇಕ ಮಾಡಿದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದರು.
ಈ ವಿಡಿಯೋ ವೈರಲ್ ಆದ ಕಾರಣ ಸ್ಥಳಕ್ಕೆ ಸೋಮವಾರ ಪಿಎಸ್‌ಐ ಜಿ. ಪಾಂಡುರಂಗ ತನ್ನ ಸಿಬ್ಬಂದಿ ಜತೆ ಭೇಟಿ ನೀಡಿ ವಿಡಿಯೋ ಹಾಗೂ ವಿಷಯವನ್ನು ಖಚಿತ ಪಡಿಸಿಕೊಂಡು ಸ್ಥಳೀಯ ಕ್ರಿಕೆಟ್ ಅಭಿಮಾನಿಗಳಾದ ಸಣ್ಣ ಪಾಲಯ್ಯ, ಜಯಣ್ಣ, ತಿಪ್ಪೇಸ್ವಾಮಿ ವಿರುದ್ಧ ಪ್ರಾಣಿ ಹಿಂಸೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈಚೆಗೆ ವೈರಲ್ ಆದ ವಿಡಿಯೋ ಸಂಬಂಧ ತನಿಖೆಗೆ ಜಿಲ್ಲಾ ಪೊಲೀಸ್ ಇಲಾಖೆ ಒಂದು ಗ್ರೂಪ್ ಮಾಡಿತ್ತು. ಇದು ಮೊಳಕಾಲ್ಮೂರು ವ್ಯಾಪ್ತಿಯ ವಿಡಿಯೋ ಎಂದು ತಿಳಿದಾಗ ಸ್ಥಳೀಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರಿ. ಈಚೆಗೆ ತಳಕು ಠಾಣೆಯ ವ್ಯಾಪ್ತಿಯಲ್ಲಿಯೂ ಇಂಥದ್ದೊಂದು ವಿಡಿಯೋ ತನಿಖೆಗೊಳಗಾಗಿತ್ತು ಎಂದು ಮೂಲಗಳು ತಿಳಿಸಿವೆ.
Source : Vijayakarnataka