Virat Kohli: ಮೈದಾನದಲ್ಲಿ ಕಣ್ಣೀರಿಟ್ಟ ಸಿರಾಜ್, ಕೋಪದಲ್ಲಿ ಬಾಟಲ್ ಎಸೆದ ಕೊಹ್ಲಿ: ಇದು ಪಂದ್ಯದ ಬಳಿಕ ನಡೆದ ಘಟನೆ

mohammed siraj and Virat Kohli

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಆರ್​ಸಿಬಿ ಪ್ಲೇ ಆಫ್ ಪ್ರವೇಶಿಸದೆ ಟೂರ್ನಿಯಿಂದ ಹೊರಬಿದ್ದಿದೆ. ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡುಪ್ಲೆಸಿಸ್ (RCB vs GT) ಪಡೆ ಪುನಃ ಬೌಲಿಂಗ್​ನಲ್ಲಿ ಕಳಪೆ ಪ್ರದರ್ಶನ ತೋರಿ, ಸೋತು ಐಪಿಎಲ್ 2023 ರಿಂದ ನಿರ್ಗಮಿಸಿತು. ಆರ್​ಸಿಬಿ ಸೋಲುತ್ತಿದ್ದಂತೆ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಆಟಗಾರರು ಕೂಡ ಬೇಸರಗೊಂಡರು. ಆರ್​ಸಿಬಿ ಪ್ಲೇಯರ್ಸ್ ಮೈದಾನದಲ್ಲೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಅದರಲ್ಲೂ ಮೊಹಮ್ಮದ್ ಸಿರಾಜ್ (Mohammed Siraj) ಹಾಗೂ ವಿರಾಟ್ ಕೊಹ್ಲಿಯ (Virat Kohli) ಅವರ ವಿಡಿಯೋ ವೈರಲ್ ಆಗುತ್ತಿದೆ.

20ನೇ ಓವರ್​ನ ಮೊದಲ ಎಸೆತದಲ್ಲಿ ಶುಭ್​ಮನ್ ಗಿಲ್ ಸಿಕ್ಸ್ ಸಿಡಿಸುತ್ತಿದ್ದಂತೆ ಆರ್​ಸಿಬಿ ಸೋಲು ಕಂಡಿತು. ಈ ಸಂದರ್ಭ ಕೋಪಗೊಂಡ ವಿರಾಟ್ ಕೊಹ್ಲಿ ತಮ್ಮ ಕೈಯಲ್ಲಿದ್ದ ನೀರಿನ ಬಾಟಲ್ ಅನ್ನು ಮೈದಾನದಕ್ಕೆ ಎಸೆದಿದ್ದಾರೆ. ಅತ್ತ ಮೊಹಮ್ಮದ್ ಸಿರಾಜ್ ಬೇಸರದಿಂದ ಮೈದಾನದಲ್ಲಿ ಮಲಗಿದರು. ಬಳಿಕ ಕಣ್ಣೀರಿಡುತ್ತಿರುವುದು ಕಂಡುಬಂತು. ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಮುಗಿದ ಬಳಿಕ ಆರ್​ಸಿಬಿಯ ಎಲ್ಲ ಪ್ಲೇಯರ್ಸ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಇಲ್ಲಿದೆ ನೋಡಿ ವಿಡಿಯೋ.

IPL 2023: ಸೋತರೂ ಐಪಿಎಲ್​ನಲ್ಲಿ ಹೊಸ ದಾಖಲೆ ನಿರ್ಮಿಸಿದ ಫಾಫ್-ಕಿಂಗ್ ಕೊಹ್ಲಿ

ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೇಸರ ಹೊರಹಾಕಿದ್ದಾರೆ. ಈ ಸೋಲಿನಿಂದ ತುಂಬಾ ನಿರಾಸೆ ಆಗಿದೆ ಎಂದು ನೋವು ತೋಡಿಕೊಂಡಿದ್ದಾರೆ. ”ನಿಜ ಹೇಳಬೇಕೆಂದರೆ ಈ ಸೋಲು ತುಂಬಾ ನಿರಾಸೆ ತಂದಿದೆ. ಇಂದು ನಾವು ನಮ್ಮ ಬಲಿಷ್ಠ ತಂಡವನ್ನು ಕಣಕ್ಕಿಳಿಸಿದ್ದೆವು. ಆದರೆ, ಶುಭ್​ಮನ್ ಗಿಲ್ ಕಡೆಯಿಂದ ಅದ್ಭುತವಾದ ಶತಕ ಮೂಡಿಬಂತು. ಎರಡನೇ ಇನ್ನಿಂಗ್ಸ್ ವೇಳೆ ತುಂಬಾ ಒದ್ದೆ ಇತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಕೂಡ ಇತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ಹಿಡಿತ ಇರಲಿಲ್ಲ ಮತ್ತು ನಾವು ಕೆಲವು ಬಾರಿ ಚೆಂಡನ್ನು ಬದಲಾಯಿಸಬೇಕಾಗಿತ್ತು,” ಎಂದು ಹೇಳಿದ್ದಾರೆ.

”ವಿರಾಟ್ ಕೊಹ್ಲಿ ಕಡೆಯಿಂದ ಊಹಿಸಲಾಗದ ಶತಕ ಬಂತು. ಅವರು ಸೆಂಚುರಿ ಬಾರಿಸಿ ಕಠಿಣ ಟಾರ್ಗೆಟ್ ನೀಡಿದರು. ಆದರೆ, ಗಿಲ್ ಅದ್ಭುತ ಆಟ ಪ್ರದರ್ಶಿಸಿ ಗೆಲುವನ್ನು ನಮ್ಮಿಂದ ಕಸಿದುಕೊಂಡರು. ಈ ಸೀಸನ್​ನಲ್ಲಿ ನಮ್ಮ ಮಧ್ಯಮ ಕ್ರಮಾಂಕದಿಂದ ರನ್ ಬರಲಿಲ್ಲ. ಮುಖ್ಯವಾಗಿ ಇನ್ನಿಂಗ್ಸ್ ಅಂತಿಮ ಹಂತದಲ್ಲಿ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಇನ್ನಿಂಗ್ಸ್​ನ ಕೊನೆಯ ಹಂತದಲ್ಲಿ ಪಂದ್ಯವನ್ನು ಫಿನಿಶ್ ಮಾಡುವ ವಿಚಾರದಲ್ಲಿ ನಾವಿನ್ನೂ ಬಲಿಷ್ಠವಾಗಬೇಕು. ಕಳೆದ ವರ್ಷ ದಿನೇಶ್ ಕಾರ್ತಿಕ್ ಪಂದ್ಯವನ್ನು ಫಿನಿಶ್ ಮಾಡುತ್ತಿದ್ದರು. ಆದರೆ ಈ ಋತುವಿನಲ್ಲಿ ಅದು ಸಾಧ್ಯವಾಗಿಲ್ಲ. ನೀವು ಯಶಸ್ವಿಯಾದ ತಂಡಗಳನ್ನು ನೋಡಿದರೆ ಅವರು ಐದು, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಉತ್ತಮ ಹಿಟ್ಟರ್​ಗಳನ್ನು ಹೊಂದಿದ್ದಾರೆ. ನಮ್ಮಲ್ಲಿ ಆರೀತಿಯ ಬ್ಯಾಟರ್ ಬೇಕು,” ಎಂಬುದು ಫಾಫ್ ಮಾತಾಗಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/mohammed-siraj-fainted-on-ground-and-virat-kohli-throws-bottle-after-rcb-knocked-out-of-ipl-2023-vb-584314.html

Leave a Reply

Your email address will not be published. Required fields are marked *