Virat Kohli: ವಿರಾಟ್ ಕೊಹ್ಲಿ ಔಟಾ-ನಾಟೌಟಾ? ಅಂಪೈರ್​ ವಿರುದ್ಧ ತೀವ್ರ ಆಕ್ರೋಶ

IND vs AUS 2nd Test: Unlucky Virat Kohli was not out': India Fans Slam Poor Umpiring

India vs Australia 2nd Test: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ (IND vs AUS 2nd Test) ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಮೊಹಮ್ಮದ್ ಶಮಿ (4 ವಿಕೆಟ್), ಜಡೇಜಾ (3 ವಿಕೆಟ್) ಹಾಗೂ ಅಶ್ವಿನ್ (3 ವಿಕೆಟ್) ಅವರ ದಾಳಿಗೆ ತತ್ತರಿಸಿತು. ಪರಿಣಾಮ ಮೊದಲ ದಿನದಾಟದಲ್ಲೇ 263 ರನ್​ಗಳಿಸಿ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ.

ಆಸೀಸ್ ತಂಡದ ಹಿರಿಯ ಸ್ಪಿನ್ನರ್​ ದಾಳಿಗೆ ಆರಂಭಿಕರಾದ ರೋಹಿತ್ ಶರ್ಮಾ (32) ಹಾಗೂ ಕೆಎಲ್ ರಾಹುಲ್ (17) ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೇ 100ನೇ ಟೆಸ್ಟ್ ಪಂದ್ಯವಾಡಿದ ಚೇತೇಶ್ವರ ಪೂಜಾರ ಶೂನ್ಯಕ್ಕೆ ಔಟಾಗಿದ್ದರು. ಇನ್ನು ಶ್ರೇಯಸ್ ಅಯ್ಯರ್ (4) ಕೂಡ ಲಿಯಾನ್​ಗೆ ವಿಕೆಟ್ ಒಪ್ಪಿಸಿದರು. ಇದರಿಂದ ಕೇವಲ 66 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 59 ರನ್​ಗಳ ಜೊತೆಗಾರಿಕೆಯ ಬಳಿಕ ಜಡೇಜಾ (26) ಮರ್ಫಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿ ನಿಂತಿದ್ದರು. ಹೀಗಾಗಿ ಟೀಮ್ ಇಂಡಿಯಾ ಬೃಹತ್ ಮೊತ್ತದ ನಿರೀಕ್ಷೆಯಲ್ಲಿತ್ತು.

ಈ ವೇಳೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಚೆಂಡನ್ನು ಯುವ ಸ್ಪಿನ್ನರ್ ಕೈಗೆ ನೀಡಿದ್ದರು. 50ನೇ ಓವರ್ ಎಸೆದ ಕುಹ್ನೆಮನ್ ಅವರ ಮೂರನೇ ಎಸೆತವನ್ನು ವಿರಾಟ್ ಕೊಹ್ಲಿ ಫ್ರಂಟ್ ಫೂಟ್​ನಲ್ಲಿ ಆಡಿದ್ದರು. ಈ ವೇಳೆ ಚೆಂಡು ಬ್ಯಾಟ್​ ಬದಿ ತಗುಲಿ ಪ್ಯಾಡ್​ಗೆ ಬಡಿಯಿತು. ಇತ್ತ ಆಸೀಸ್ ಸ್ಪಿನ್ನರ್​ ಬಲವಾದ ಮನವಿ ಸಲ್ಲಿಸಿದರು. ಫೀಲ್ಡ್ ಅಂಪೈರ್ ಔಟ್ ನೀಡಿದ್ದರು. ತಕ್ಷಣವೇ ವಿರಾಟ್ ಕೊಹ್ಲಿ ಡಿಆರ್​ಎಸ್ ಮೊರೆ ಹೋಗಿದ್ದಾರೆ.

ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ಕೂಡ ಔಟ್ ಎಂದು ತೀರ್ಪಿತ್ತರು. ಆದರೆ ರಿಪ್ಲೇ ಪರಿಶೀಲನೆಯ ವೇಳೆಯಲ್ಲೇ ಚೆಂಡು ಮೊದಲ ಬ್ಯಾಟ್​ಗೆ ತಗುಲಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದಾಗ್ಯೂ ಮೂರನೇ ಅಂಪೈರ್ ಔಟ್ ಎಂದಿರುವುದು ಅಚ್ಚರಿ ಮೂಡಿಸಿದೆ. ಇತ್ತ ನಾಟೌಟ್ ನಿರೀಕ್ಷೆಯಲ್ಲಿದ್ದ ವಿರಾಟ್ ಕೊಹ್ಲಿ (44) ಆಕ್ರೋಶ ಹೊರಹಾಕುತ್ತಾ ಮೈದಾನವನ್ನು ತೊರೆದರು.

ಅಲ್ಲದೆ ಡಗೌಟ್​ನಲ್ಲಿ ರಿಪ್ಲೇ ಪರಿಶೀಲಿಸುತ್ತಾ ಕೊಹ್ಲಿ ಮತ್ತೊಮ್ಮೆ ಅಂಪೈರ್ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ವಿರಾಟ್ ಕೊಹ್ಲಿ ಅವರ ವಿವಾದಾತ್ಮಕ ಔಟ್ ತೀರ್ಪಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೂರನೇ ಅಂಪೈರ್ ತೀರ್ಪಿನ ಬಗ್ಗೆ ಕಿಂಗ್ ಕೊಹ್ಲಿ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

 

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಕೆಎಲ್ ರಾಹುಲ್ , ಚೇತೇಶ್ವರ ಪೂಜಾರ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ರವೀಂದ್ರ ಜಡೇಜಾ , ಶ್ರೀಕರ್ ಭರತ್ ( ವಿಕೆಟ್ ಕೀಪರ್ ) , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಮೊಹಮ್ಮದ್ ಶಮಿ , ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ, ಮ್ಯಾಟ್ ರೇನ್​ಶಾ, ಮಾರ್ನಸ್ ಲಾಬುಶೇನ್ , ಸ್ಟೀವನ್ ಸ್ಮಿತ್ , ಟ್ರಾವಿಸ್ ಹೆಡ್ , ಪೀಟರ್ ಹ್ಯಾಂಡ್ಸ್​ಕಾಂಬ್ , ಅಲೆಕ್ಸ್ ಕ್ಯಾರಿ ( ವಿಕೆಟ್ ಕೀಪರ್ ) , ಪ್ಯಾಟ್ ಕಮ್ಮಿನ್ಸ್ (ನಾಯಕ) , ನಾಥನ್ ಲಿಯಾನ್ , ಟಾಡ್ ಮರ್ಫಿ , ಮ್ಯಾಥ್ಯೂ ಕುಹ್ನೆಮನ್.

 

 

source https://tv9kannada.com/sports/cricket-news/ind-vs-aus-2nd-test-unlucky-virat-kohli-was-not-out-india-fans-slam-poor-umpiring-kannada-news-zp-au50-522528.html

Leave a Reply

Your email address will not be published. Required fields are marked *