ಐಪಿಎಲ್ ಬಳಿಕ ಕ್ರಿಕೆಟ್ನಿಂದ ವಿರಾಮ ತೆಗೆದುಕೊಂಡಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಲಂಡನ್ನಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕೊಹ್ಲಿ ತಮ್ಮ ಮಡದಿ ಅನುಷ್ಕಾ ಅವರೊಂದಿಗೆ ಲಂಡನ್ ಬೀದಿಯಲ್ಲಿ ಸಾಮಾನ್ಯರಂತೆ ನಡೆದಾಡುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು.

ಅಲ್ಲದೆ ಕೆಲವೇ ದಿನಗಳ ಹಿಂದೆ ವಿರಾಟ್ ಕೊಹ್ಲಿಯ ಬಿಳಿ ಗಡ್ಡದ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಇದನ್ನು ನೋಡಿದ ಅಭಿಮಾನಿಗಳು ಏಕದಿನ ಮಾದರಿಗೂ ಕೊಹ್ಲಿ ವಿದಾಯ ಹೇಳಬಹುದು ಎಂದು ಊಹಿಸಿದ್ದರು. ಆದರೆ ಅಂತಹ ಊಹಾಪೋಹಗಳಿಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತೆರೆ ಎಳಿದಿದ್ದರು.

ಇದೀಗ ಅಭಿಮಾನಿಗಳು ಸಂತಸ ಪಡುವ ಮಾಹಿತಿಯೊಂದು ಲಂಡನ್ನಿಂದ ಹೊರಬಿದ್ದಿದ್ದು, ಮುಂಬರುವ ಏಕದಿನ ಸರಣಿಗಾಗಿ ವಿರಾಟ್ ಕೊಹ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಹೀಗಾಗಿ ಈ ಸರಣಿಗಾಗಿ ವಿರಾಟ್ ಕೊಹ್ಲಿ ಐತಿಹಾಸಿಕ ಲಾರ್ಡ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಆಟದಿಂದ ದೂರವಿದ್ದರೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧರಾಗುತ್ತಿದ್ದಾರೆ ಮತ್ತು ಅಭ್ಯಾಸದತ್ತ ಗಮನ ಹರಿಸುತ್ತಿದ್ದಾರೆ. ಲಾರ್ಡ್ಸ್‌ನಲ್ಲಿ ಅಭ್ಯಾಸ ಮಾಡಿದ ನಂತರ, ಅವರು ಅಭಿಮಾನಿಗಳನ್ನು ಭೇಟಿ ಮಾಡಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

ಆಗಸ್ಟ್‌ನಲ್ಲಿ ಪ್ರಸ್ತಾವಿತ ಬಾಂಗ್ಲಾದೇಶ ಪ್ರವಾಸ ರದ್ದಾದ ನಂತರ, ಭಾರತದ ಮುಂದಿನ ಏಕದಿನ ಪಂದ್ಯ ಅಕ್ಟೋಬರ್ 19 ರಿಂದ 25 ರವರೆಗೆ ನಡೆಯಲಿರುವ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಆದಾಗ್ಯೂ, ರೋಹಿತ್ ಮತ್ತು ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ. ಭಾರತದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆ ಊಹಾಪೋಹಗಳ ನಡುವೆ, ಬಿಸಿಸಿಐ ಈ ಇಬ್ಬರ ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆತುರಪಡುತ್ತಿಲ್ಲ ಎಂದು ಹೇಳಿದೆ. ಹೀಗಾಗಿ ಇವರಿಬ್ಬರು 2027 ರ ಏಕದಿನ ವಿಶ್ವಕಪ್ ಆಡಬಹುದು ಎಂದು ಊಹಿಸಲಾಗಿದೆ.
Views: 13