8 ಬೌಂಡರಿ, 4 ಸಿಕ್ಸರ್‌! ಮೈದಾನದಲ್ಲಿ ಸುನಾಮಿ ಎಬ್ಬಿಸಿದ 110 ಕೆಜಿ ತೂಕದ ಬ್ಯಾಟ್ಸ್‌ಮನ್! ವಿಡಿಯೋ ನೋಡಿ

Pakistan Super League azam khan batting 41 ball 72 for Islamabad's six wicket win against Karachi Kings

ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ (Pakistan Super League) ಯುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಜಂ ಖಾನ್ (Azam Khan) ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ. ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ಪ್ರತಿನಿಧಿಸುತ್ತಿರುವ ಆಜಂ ಖಾನ್ ತಮ್ಮ ಸುನಾಮಿ ಇನ್ನಿಂಗ್ಸ್‌ ಮೂಲಕ ಬೌಲರ್‌ಗಳ ಮೇಲೆ ಸವಾರಿ ಆರಂಭಿಸಿದ್ದಾರೆ. ಶುಕ್ರವಾರ ನಡೆದ ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಈ ಯುವ ಬ್ಯಾಟ್ಸ್​ಮನ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು, ಕೇವಲ 41 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 72 ರನ್ ಚಚ್ಚಿದ್ದಾರೆ. 175ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ ಆಜಂ ಖಾನ್ ಎದುರಾಳಿ ನೀಡಿದ್ದ 202 ರನ್‌ಗಳ ಗುರಿಯನ್ನು ನೀರು ಕುಡಿದಷ್ಟೇ ಸುಲಭವಾಗಿ ಬೆನ್ನಟ್ಟಿದರು. ಇವರೊಂದಿಗೆ ಫಹೀಮ್ ಅಶ್ರಫ್ 41 ರನ್ ಗಳಿಸಿದ್ದರಿಂದ ಇಸ್ಲಾಮಾಬಾದ್ ತಂಡ 4 ವಿಕೆಟ್ ಕಳೆದುಕೊಂಡು 19.2 ಓವರ್​ಗಳಲ್ಲಿ 202 ರನ್ ಗಳ ಗುರಿ ತಲುಪಿತು.

ಈ ಟೂರ್ನಿಯಲ್ಲಿ ಇಸ್ಲಾಮಾಬಾದ್‌ಗೆ ಇದು ನಾಲ್ಕನೇ ಗೆಲುವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರಾಚಿ ತಂಡ, ನಾಯಕ ಇಮಾದ್ ವಾಸಿಂ ಅವರ (54 ಎಸೆತಗಳಲ್ಲಿ 92, 11 ಬೌಂಡರಿ, 2 ಸಿಕ್ಸರ್) ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ ನಿಗದಿತ 20 ಓವರ್‌ಗಳಲ್ಲಿ 201 ರನ್‌ಗಳ ಬೃಹತ್ ಸ್ಕೋರ್ ಮಾಡಿತು.

IND vs AUS: 1 ವರ್ಷ ನಿಷೇಧ? ಸೋತ ಭಾರತಕ್ಕೆ ಮತ್ತೊಂದು ಶಾಕ್ ನೀಡಿದ ಐಸಿಸಿ

ಆರಂಭಿಕ ಆಘಾತ

ಆದರೆ ಈ ಗುರಿ ಬೆನ್ನಟ್ಟಿದ ಇಸ್ಲಾಮಾಬಾದ್‌ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಇಸ್ಲಾಮಾಬಾದ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕಾಲಿನ್ ಮುನ್ರೊ, ಅಲೆಕ್ಸ್ ಹೇಲ್ಸ್ ಮತ್ತು ರಾಸಿ ವ್ಯಾನ್ ಡೆರ್ ಡಸ್ಸೆನ್ ರೂಪದಲ್ಲಿ 69 ರನ್‌ಗಳಿಗೆ 3 ವಿಕೆಟ್ ಉರುಳಿದವು. ಇದರಲ್ಲಿ ಮುನ್ರೊ 11, ಹೇಲ್ಸ್ 34 ಮತ್ತು ಡುಸೆನ್ 22 ರನ್ ಗಳಿಸಿದರು.

42 ಎಸೆತಗಳಲ್ಲಿ 97 ರನ್

ಆದರೆ 7ನೇ ಓವರ್​ನಲ್ಲಿ ಕ್ರೀಸ್​ಗೆ ಬಂದ ಆಜಂ ಖಾನ್ ತಮ್ಮ ಶೈಲಿಗೆ ತಕ್ಕಂತೆ ಸತತ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು. ಎಲ್ಲಿಯೂ ಎಡವದೇ ಚೆಂಡುಗಳನ್ನು ನೇರವಾಗಿ ಬೌಂಡರಿಗೆ ಸರಿಸಿದರು. ಮಿಂಚಿನ ಇನ್ನಿಂಗ್ಸ್‌ನೊಂದಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕೆಲ ದಿನಗಳ ಹಿಂದೆ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಯೂ ಆಜಂ ಖಾನ್ ಸುನಾಮಿ ಇನಿಂಗ್ಸ್ ಆಡಿದ್ದರು. ಆ ಪಂದ್ಯದಲ್ಲಿ ಕೇವಲ 42 ಎಸೆತಗಳನ್ನು ಎದುರಿಸಿದ ಆಜಂ ಖಾನ್ 97 ರನ್ ಗಳಿಸಿ ಕೇವಲ 3 ರನ್ ಅಂತರದಲ್ಲಿ ಶತಕ ವಂಚಿತರಾದರು.

110 ಕೆಜಿ ತೂಕ

ವಾಸ್ತವವಾಗಿ ಟಿ20 ಲೀಗ್​ನಲ್ಲಿ ಸುನಾಮಿ ಎಬ್ಬಿಸುತ್ತಿರುವ ಈ ಆಜಂ ಖಾನ್ ಅವರು ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಮೊಯಿನ್ ಖಾನ್ ಅವರ ಪುತ್ರ. ಪಾಕಿಸ್ತಾನ ರಾಷ್ಟ್ರೀಯ ತಂಡದ ಪರ ಕೆಲವು ಟಿ20 ಪಂದ್ಯಗಳನ್ನು ಆಡಿರುವ ಆಜಂ ಖಾನ್​ಗೆ ರಾಷ್ಟ್ರೀಯ ತಂಡದಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಆದರೆ ಪಿಎಸ್​ಎಲ್​ನಲ್ಲಿ ಮಿಂಚುತ್ತಿರುವ ಇವರು ಕ್ರಿಕೆಟ್​ ಜೊತೆಗೆ ತಮ್ಮ ದೇಹದ ತೂಕದಿಂದಲೂ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಈ ಕ್ರಿಕೆಟರ್​ ಮೊದಲು 140 ಕೆಜಿಗೂ ಅಧಿಕ ತೂಕವಿದ್ದರು. ಆದರೆ ಕ್ರಿಕೆಟ್​ಗಾಗಿ ತೂಕ ಇಳಿಸಿಕೊಂಡಿರುವ ಆಜಂ ಖಾನ್ ಪ್ರಸ್ತುತ 110 ಕೆಜಿ ತೂಕವಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/pakistan-super-league-azam-khan-batting-41-ball-72-for-islamabads-six-wicket-win-against-karachi-kings-psr-au14-530619.html

Leave a Reply

Your email address will not be published. Required fields are marked *