“WCL 2025”: ಯುವರಾಜ್ ಸಿಂಗ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕೆ; ಮೊದಲ ಎದುರಾಳಿ ಪಾಕಿಸ್ತಾನ.

ಭಾರತ ತಂಡದ ಲೆಜೆಂಡರಿ ಆಲ್‌ರೌಂಡರ್ ಯುವರಾಜ್ ಸಿಂಗ್ (Yuvraj Singh) ಮತ್ತೊಮ್ಮೆ ಆಟಗಾರನಾಗಿ ಕ್ರಿಕೆಟ್ ಮೈದಾನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಯುವರಾಜ್ ಸಿಂಗ್ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ (World Championship of Legends 2025) ಎರಡನೇ ಸೀಸನ್‌ನಲ್ಲಿ ಇಂಡಿಯಾ ಚಾಂಪಿಯನ್ಸ್ (India Champions) ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಇಂಡಿಯಾ ಚಾಂಪಿಯನ್ಸ್ ಈ ಟೂರ್ನಮೆಂಟ್‌ನ ಮೊದಲ ಸೀಸನ್‌ನ ಟ್ರೋಫಿಯನ್ನು ಗೆದ್ದಿತ್ತು. ಇದೀಗ ಎರಡನೇ ಸೀಸನ್‌ನಲ್ಲಿಯೂ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಇರಾದೆಯಲ್ಲಿ ತಂಡವಿದೆ. ಈ ಟೂರ್ನಮೆಂಟ್ ಜುಲೈ 18 ರಿಂದ ಪ್ರಾರಂಭವಾಗುತ್ತಿದ್ದು, ಫೈನಲ್ ಪಂದ್ಯ ಆಗಸ್ಟ್ 2 ರಂದು ನಡೆಯಲಿದೆ. ಈ ಲೀಗ್​ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಇದರಲ್ಲಿ ಇಂಡಿಯಾ ಚಾಂಪಿಯನ್ಸ್ ಜೊತೆಗೆ, ಪಾಕಿಸ್ತಾನ ಚಾಂಪಿಯನ್ಸ್, ಆಸ್ಟ್ರೇಲಿಯಾ ಚಾಂಪಿಯನ್ಸ್, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್, ಇಂಗ್ಲೆಂಡ್ ಚಾಂಪಿಯನ್ಸ್ ಮತ್ತು ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಗಳು ಸೇರಿವೆ.

ಜುಲೈ 20 ರಂದು ಪಾಕ್ ವಿರುದ್ಧ ಪಂದ್ಯ

ಟೀಂ ಇಂಡಿಯಾ ಬಗ್ಗೆ ಹೇಳುವುದಾದರೆ, ತಂಡದಲ್ಲಿ ಹಲವು ಸ್ಟಾರ್ ಆಟಗಾರರು ಸ್ಥಾನ ಪಡೆದಿದ್ದಾರೆ. ಶಿಖರ್ ಧವನ್ ಕೂಡ ಈ ಟೂರ್ನಿಯಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಈ ಇಬ್ಬರು ಆಟಗಾರರಲ್ಲದೆ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಸ್ಟುವರ್ಟ್ ಬಿನ್ನಿ, ಗುರುಕೀರತ್ ಸಿಂಗ್ ಮಾನ್, ವಿನಯ್ ಕುಮಾರ್, ಸಿದ್ಧಾರ್ಥ್ ಕೌಲ್, ಅಭಿಮನ್ಯು ಮಿಥುನ್, ವರುಣ್ ಆರೋನ್ ಮತ್ತು ಪವನ್ ನೇಗಿ ಭಾರತ ಚಾಂಪಿಯನ್ಸ್ ತಂಡದಲ್ಲಿದ್ದಾರೆ.

ಜುಲೈ 20 ರಂದು ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಟೀಂ ಇಂಡಿಯಾ ತನ್ನ ಮೊದಲ ಲೀಗ್ ಪಂದ್ಯವನ್ನು ಆಡಲಿದೆ. ಇದರ ನಂತರ, ಜುಲೈ 22 ರಂದು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಜುಲೈ 26 ರಂದು ತಂಡವು ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಸೆಣಸಲಿದೆ. ಜುಲೈ 27 ರಂದು ಇಂಗ್ಲೆಂಡ್ ಚಾಂಪಿಯನ್ಸ್ ವಿರುದ್ಧ ಟೀಂ ಇಂಡಿಯಾ ತನ್ನ ನಾಲ್ಕನೇ ಲೀಗ್ ಪಂದ್ಯವನ್ನು ಆಡಲಿದೆ. ಹಾಗೆಯೇ ಜುಲೈ 29 ರಂದು ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಈ ಟೂರ್ನಿಯ ಎರಡೂ ಸೆಮಿಫೈನಲ್ ಪಂದ್ಯಗಳು ಜುಲೈ 31 ರಂದು ನಡೆಯಲಿದ್ದು, ಫೈನಲ್ ಪಂದ್ಯ ಆಗಸ್ಟ್ 2 ರಂದು ನಡೆಯಲಿದೆ.

ಭಾರತ ಹಾಲಿ ಚಾಂಪಿಯನ್‌

ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಮೊದಲ ಸೀಸನ್‌ನಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವನ್ನು ಯುವರಾಜ್ ಸಿಂಗ್ ಮುನ್ನಡೆಸಿದ್ದರು. ಆಡಿದ್ದ ಐದು ಲೀಗ್ ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡು ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವನ್ನು 86 ರನ್‌ಗಳಿಂದ ಸೋಲಿಸಿದ್ದ ಇಂಡಿಯಾ ಚಾಂಪಿಯನ್ಸ್ ತಂಡ, ಆ ಬಳಿಕ ನಡೆದಿದ್ದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು.

ಇಂಡಿಯಾ ಚಾಂಪಿಯನ್ಸ್‌ ತಂಡ; ಯುವರಾಜ್ ಸಿಂಗ್ (ನಾಯಕ), ಶಿಖರ್ ಧವನ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಪಿಯೂಷ್ ಚಾವ್ಲಾ, ಸ್ಟುವರ್ಟ್ ಬಿನ್ನಿ, ಗುರುಕೀರತ್ ಮಾನ್, ವಿನಯ್ ಕುಮಾರ್, ಸಿದ್ಧಾರ್ಥ್ ಕೌಲ್, ವರುಣ್ ಆರೋನ್, ಅಭಿಮನ್ಯು ಮಿಥುನ್, ಪವನ್ ನೇಗಿ.

Leave a Reply

Your email address will not be published. Required fields are marked *