ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಗೃಹಲಕ್ಷ್ಮೀ ಯೋಜನೆ ಜಾರಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಇದು ಒಂದು. ಅಧಿಕಾರಕ್ಕೆ ಬಂದ ಕೂಡಲೇ ಯೋಜನೆ ಜಾರಿಗೆ ತಂದಿದ್ದು, ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ವಿತರಿಸುವ ಯೋಜನೆ ಇದಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಗ್ಯಾರಂಟಿ ಯೋಜನೆಗಳೇ ಕಾರಣ ಎಂಬ ವಿಶ್ಲೇಷಣೆಯೂ ಇದೆ.
ಇದೀಗ ಲೋಕಸಭೆಯಲ್ಲಿ ಮತ್ತೆ ಅಧಿಕಾರಕ್ಕೇರಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಇಂಡಿಯಾ ಒಕ್ಕೂಟ ಇಲ್ಲಿಯೂ ಗ್ಯಾರಂಟಿ ಯೋಜನೆಗಳನ್ನೇ ಪ್ರಮುಖವಾಗಿ ಅಸ್ತ್ರವಾಗಿ ಬಳಸುತ್ತಿದೆ. ಇತ್ತೀಚೆಗಷ್ಟೇ ಸಮಾವೇಶವೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಬಾರಿ ಇಂಡಿಯಾ ಒಕ್ಕೂಟ ಏನಾದರೂ ಅಧಿಕಾರಕ್ಕೆ ಬಂದರೆ, ಆ ದಿನವೇ ನಾನು ಮಹಿಳೆಯರ ಖಾತೆಗೆ ಟಕಾಟಕ್ ಅಂತ ಹಣ ಜಮಾವಣೆ ಮಾಡುತ್ತೇನೆ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಅವರು ಈ ಘೋಷಣೆ ಮಾಡಿದ ಬೆನ್ನಲ್ಲೇ ಗಂಭೀರವಾಗಿ ಪರಿಗಣಿಸಿರುವ ಮಹಿಳೆಯರು ಅದರಲ್ಲೂ ಮುಸ್ಲಿಂ ಮಹಿಳೆಯರು ಖಾತೆ ಮಾಡಿಸಲು ಪೋಸ್ಟ್ ಆಫೀಸ್ನಲ್ಲಿ ಕ್ಯೂ ನಿಂತಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಹೋಗಿ ಪೋಸ್ಟ್ ಆಫೀಸ್ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಈಗಲೇ ಖಾತೆ ಮಾಡಿಸಿಕೊಂಡರೆ ತಿಂಗಳಿಗೆ ನಮ್ಮ ಖಾತೆ 8500 ರೂ. ಜಮಾ ಮಾಡುತ್ತಾರೆ ಎಂಬ ಆಸೆಯಿಂದಲೇ ಊಟ, ತಿಂಡಿ ಬಿಟ್ಟು ಕ್ಯೂನಲ್ಲಿ ನಿಂತು ಡಿಜಿಟಲ್ ಖಾತೆ ಓಪನ್ ಮಾಡಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಪೋಸ್ಟ್ ಆಫೀಸ್ಗಳಲ್ಲಿ ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ. IPPB ಖಾತೆ ತೆರೆಯಲು ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಕಳೆದ 15 ದಿನಗಳಿಂದ ನಗರದಲ್ಲಿ ಇದೇ ಸ್ಥಿತಿ ಇದೆ ಎಂದು ಹೇಳಲಾಗಿದೆ. ಇನ್ನು ಸಾಕಷ್ಟು ಮಹಿಳೆಯರು ಬರುತ್ತಿರುವ ಕಾರಣ, ಜನಜಂಗುಳಿಯನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೋಸ್ಟ್ ಆಫೀಸ್ಗಳಲ್ಲಿ ಟೋಕನ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಟೋಕನ್ಗಳು ಸಹ ಖಾಲಿಯಾದ ಹಿನ್ನೆಲೆಯಲ್ಲಿ ಇದೀಗ ಕೌಂಟರ್ಗಳನ್ನು ತೆರೆದು, ಬರುವಂತಹ ಮಹಿಳೆಯರ ಆಧಾರ್ ಕಾರ್ಡ್ ಪರಿಶೀಲನೆ ಮಾಡಿ ರಿಜಿಸ್ಟ್ರೇಷನ್ ಮಾಡಲಾಗುತ್ತಿದೆ.
ಇನ್ನು ಮಹಿಳೆಯರ ಸಂಖ್ಯೆಯನ್ನು ದಂಗಾದ ಪೋಸ್ಟ್ ಆಫೀಸ್ ಕಚೇರಿ ಸಿಬ್ಬಂದಿ ನಿಮ್ಮ ಖಾತೆಗೆ ಈಗಲೇ ಹಣ ಬರುವುದಿಲ್ಲ ಎಂಬ ಬೋರ್ಡ್ ಹಾಕಿದ್ದಾರೆ. ನೀವು ಬಂದು IPPB ಖಾತೆಯನ್ನು ತೆರೆಯಬಹುದು ಆದರೆ, ನಮ್ಮಿಂದ ಯಾವುದೇ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಮುಂದೆ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದು ಹಣ ಜಮೆ ಮಾಡುವ ಯೋಜನೆ ಜಾರಿ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ಬೋರ್ಡ್ ಅಳವಡಿಸುವ ಮೂಲಕ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
ಬಿಹಾರದಲ್ಲಿ ಇಂಡಿ ಒಕ್ಕೂಟದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಇಂಡಿ ಒಕ್ಕೂಟದ ರಚನೆಯಾದ ಬೆನ್ನಲ್ಲೇ ಜುಲೈನಿಂದ, ಪ್ರತಿ ತಿಂಗಳು 8,500 ರೂ. ಮಹಿಳಾ ಖಾತೆಗಳಿಗೆ ಜಮಾ ಮಾಡಲಾಗುವುದು. ಇದು ಪ್ರತಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ರಾಹುಲ್ ಹೇಳಿದ್ದರು.