ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಹೀಗಾಗಿ, ರಾಜ್ಯದಲ್ಲಿ ಈ ಬಾರಿ ಚಳಿಯೂ ಅಧಿಕವಾಗಿದೆ. ಶೀತ ವಿಪರೀತವಾಗಲು ಲಾ ನಿನಾ ಕೂಡ ಕಾರಣವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಅಧಿಕ ಮಳೆ ಸುರಿದ ಹಿನ್ನೆಲೆಯಲ್ಲಿ ವಾಡಿಕೆಗಿಂತ ಅಧಿಕ ಚಳಿ ಇರಲಿದೆ. ಪ್ರಸಕ್ತ ತಿಂಗಳಿನಿಂದ ಜನವರಿಯವರೆಗೆ ಚಳಿಯು ಜಾಸ್ತಿಯಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮತ್ತು ಹಿಂಗಾರಿನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದರಿಂದ ಮಣ್ಣು ಮತ್ತು ವಾತಾವರಣದಲ್ಲಿ ಹೆಚ್ಚು ತೇವಾಂಶ ಶೇಖರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ತಣ್ಣನೆಯ ಗಾಳಿ ಕೂಡ ಬೀಸುತ್ತಿದೆ. ಉತ್ತರದಿಂದ ದಕ್ಷಿಣ ದಿಕ್ಕಿನತ್ತ ಗಾಳಿ ಬೀಸುತ್ತಿದೆ. ಇದರಿಂದ ಕನಿಷ್ಠ ಹಾಗೂ ಗರಿಷ್ಠ ತಾಪಮಾನದಲ್ಲಿ ಸರಾಸರಿ 2ರಿಂದ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕುಸಿತವಾಗುತ್ತಿದೆ.
ಉಷ್ಣಾಂಶದಲ್ಲಿ ಏರಿಳಿತ: ರಾಜ್ಯದಲ್ಲಿ ಈ ಬಾರಿ ಚಳಿ ಹೆಚ್ಚಾಗಿರಲು ಲಾ ನಿನಾ ಸಹ ಕಾರಣವಾಗಿದೆ. ಪೂರ್ವ ಹಾಗೂ ಮಧ್ಯ ಪೆಸಿಫಿಕ್ ಸಾಗರದಲ್ಲಿ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿ ಲಾ ನಿನಾ ಉಂಟಾಗಿದೆ. ಇದರ ಪರಿಣಾಮ ಈಶಾನ್ಯ ಮಾರುತಗಳು ದುರ್ಬಲಗೊಂಡು ಚಳಿ ಹೆಚ್ಚಳಕ್ಕೆ ಕಾರಣವಾಗಿದೆ. ಉತ್ತರದಿಂದ ದಕ್ಷಿಣಕ್ಕೆ ಗಾಳಿ ಬೀಸುವ ಮೂಲಕ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೆ, ಬಂಗಾಳದ ಉಪಸಾಗರದಿಂದ ಗಾಳಿ ಅಥವಾ ದಕ್ಷಿಣ ಹಿಂದೂ ಮಹಾಸಾಗರದಿಂದ ಗಾಳಿ ಬೀಸಲು ಪ್ರಾರಂಭವಾದರೆ ಕನಿಷ್ಠ ಹಾಗೂ ಗರಿಷ್ಠ ತಾಪಮಾನದ ಉಷ್ಣಾಂಶದಲ್ಲಿ ಇನ್ನಷ್ಟು ಏರಿಳಿತವಾಗಲಿದೆ.
ರಾತ್ರಿ ವೇಳೆ ಚಳಿ ಅಧಿಕ: ಈ ಬಾರಿ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಚಳಿ ಹೆಚ್ಚಿದೆ. ವಿಜಯಪುರ, ಬೀದರ್, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ರಾಮನಗರ, ಬೀದರ್,ರಾಯಚೂರು, ಕಲಬುರಗಿ, ಯಾದಗಿರಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ರಾತ್ರಿ ವೇಳೆ ಚಳಿ ಅಧಿಕವಾಗಿದೆ. ಸಂಜೆ, ಮುಂಜಾನೆ ಇಬ್ಬನಿ ಹೆಚ್ಚಾಗಿ ಬೀಳುತ್ತಿದೆ. ಮೋಡ ಮುಸುಕಿದ ವಾತಾವರಣ ಇದ್ದಾಗ ಹಗಲಿನಲ್ಲೂ ಚಳಿಯ ಅನುಭವವಾಗುತ್ತಿದೆ. ತಂಪಾದ ಗಾಳಿ ಬೀಸುವುದರಿಂದಲೂ ಕೂಡ ಚಳಿ ಜಾಸ್ತಿ ಆಗುತ್ತಿದೆ.
”ಕಳೆದ ವರ್ಷ ಮಳೆ ಕಡಿಮೆ ಇತ್ತು. ಆದರೆ, ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದೀಗ ಲಾ ನಿನಾ ಶುರುವಾಗಿದೆ. ಇದೆಲ್ಲಾ ಕಾರಣಗಳಿಂದ ರಾಜ್ಯದಲ್ಲಿ ಚಳಿ ಅಧಿಕವಾಗಿದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಕುಸಿತವಾಗಿದೆ” ಎಂದು ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ಮಾಹಿತಿ ನೀಡಿದ್ದಾರೆ.
Views: 0