ಚಂದ್ರನ ಮೇಲ್ಮೈಯಲ್ಲಿ ಯಾಕೆ ಚಂದ್ರಯಾನ-3 ಸ್ಪಷ್ಟ ಹೆಜ್ಜೆ ಗುರುತು ಮೂಡಿಸಿಲ್ಲ?

Chandrayaan-3 updates : ಆಗಸ್ಟ್ 23ರಂದು, ಭಾರತ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಜಗತ್ತಿನ ನಾಲ್ಕನೇ ದೇಶ ಎಂಬ ಸಾಧನೆ ನಿರ್ಮಿಸಿ, ರಷ್ಯಾ, ಅಮೆರಿಕಾ ಮತ್ತು ಚೀನಾಗಳ ಸಾಲಿಗೆ ಸೇರ್ಪಡೆಯಾಯಿತು.

Chandrayaan-3 footprint : ಚಂದ್ರಯಾನ-3 ಯೋಜನೆಯ ಮಾಡ್ಯುಲ್ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಬಳಿಕ, ರೋವರ್ ಪ್ರಗ್ಯಾನ್ ಹಿಂದಿನ ಚಕ್ರಗಳು ಚಂದ್ರನ ಮಣ್ಣಿನ ಮೇಲೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಂಕೇತ ಮತ್ತು ಭಾರತದ ರಾಷ್ಟ್ರ ಲಾಂಛನಗಳನ್ನು ಮೂಡಿಸಲಿದೆ ಎಂದು ಇಸ್ರೋ ಘೋಷಿಸಿತ್ತು.

ಈ ಯೋಜನೆಯನ್ನು ಜಗತ್ತಿನಾದ್ಯಂತ ಇರುವ ಭಾರತೀಯರು ಶ್ಲಾಘಿಸಿದ್ದು, ಚಂದ್ರನ ಮೇಲ್ಮೈಯಲ್ಲಿ ತನ್ನ ಉಪಸ್ಥಿತಿಯನ್ನು ಮೂಡಿಸುವಲ್ಲಿ ಭಾರತದ ಪ್ರಯತ್ನವಾಗಿದೆ ಎಂದಿದ್ದರು. ಆದರೆ, ಇತ್ತೀಚೆಗೆ ಬರುತ್ತಿರುವ ವರದಿಗಳ ಪ್ರಕಾರ, ರೋವರ್ ಪ್ರಗ್ಯಾನ್ ಹಿಂದಿನ ಚಕ್ರಗಳು ಚಂದ್ರನ ಮೇಲ್ಮೈಯಲ್ಲಿ ತನ್ನ ಸ್ಪಷ್ಟ ಗುರುತುಗಳನ್ನು ಮೂಡಿಸಲು ಸಾಧ್ಯವಾಗಿಲ್ಲ.

ರೋವರ್ ಸ್ಪಷ್ಟವಾಗಿ ಚಂದ್ರನ ಮೇಲ್ಮೈಯಲ್ಲಿ ಗುರುತು ಮೂಡಿಸಲು ಯಾಕೆ ಸಾಧ್ಯವಾಗಲಿಲ್ಲ ಎನ್ನುವುದನ್ನು ಯು ಆರ್ ರಾವ್ ಉಪಗ್ರಹ ಕೇಂದ್ರದ ಇಸ್ರೋದ ಉಪಗ್ರಹ ನಿರ್ಮಾಣ ಕೇಂದ್ರದ ಮಾಜಿ ನಿರ್ದೇಶಕ ಡಾ. ಮೈಲಸ್ವಾಮಿ ಅಣ್ಣಾದೊರೈ ಅವರು ವಿವರಿಸಿದ್ದಾರೆ. ಅವರು, ಭೂಮಿಯ ಮೇಲೆ 26 ಕೆಜಿ ತೂಕ ಹೊಂದಿರುವ ರೋವರ್ ಚಂದ್ರನ ಮೇಲೆ ಕೇವಲ 4.5 ಕೆಜಿ ತೂಕ ಹೊಂದಿದೆ ಎಂದಿದ್ದಾರೆ.

ಭಾರತದ ಮೂನ್ ಮ್ಯಾನ್ ಎಂದೇ ಪ್ರಸಿದ್ಧರಾಗಿರುವ ಅಣ್ಣಾದೊರೈ ಅವರು, ಚಂದ್ರನ ಮೇಲ್ಮೈಯಲ್ಲಿ ರೋವರ್ ತೂಕ ಕಡಿಮೆಯಾಗಿರುವ ಕಾರಣದಿಂದ ಅದು ಸ್ಪಷ್ಟ ಗುರುತನ್ನು ಛಾಪಿಸದಂತೆ ತಡೆದಿರಬಹುದು ಎನ್ನುತ್ತಾರೆ. ಒಂದು ವೇಳೆ ರೋವರ್ ತೂಕ ಏನಾದರೂ ಹೆಚ್ಚಾಗಿದ್ದರೆ, ಅದು ಚಂದ್ರನ ಮೇಲೆ ಸ್ಪಷ್ಟವಾದ ಗುರುತನ್ನು ಮೂಡಿಸುತ್ತಿತ್ತು.

ಭೂಮಿಯ ಮೇಲೆ ರೋವರ್‌ನ ಪರೀಕ್ಷೆಗಳನ್ನು ನಡೆಸುವಾಗ, ವಿಜ್ಞಾನಿಗಳು ಕೃತಕವಾದ, ಚಂದ್ರನ ಮೇಲ್ಮೈ ಮಣ್ಣಿನ ಹಾಸನ್ನು ನಿರ್ಮಿಸಿ, ಪರೀಕ್ಷೆಗಳನ್ನು ಕೈಗೊಂಡಿದ್ದರು. ಆ ಮಣ್ಣಿನ ಹಾಸನ್ನು ಅಪೋಲೋ 11 ಯೋಜನೆಯ ಲ್ಯಾಂಡಿಂಗ್ ಜಾಗದಲ್ಲಿದ್ದ ಮಣ್ಣಿನ ಆಧಾರದಲ್ಲಿ ನಿರ್ಮಿಸಲಾಗಿತ್ತು. ಅಪೋಲೋ 11 ಚಂದ್ರನ ಮಧ್ಯ ಭಾಗದಲ್ಲಿ ಇಳಿದಿತ್ತು. ಆದರೆ, ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿತ್ತು.

ಚಂದ್ರಯಾನ-2 ಮತ್ತು ಚಂದ್ರಯಾನ-3ರ ರೋವರ್‌ಗಳನ್ನು ಭೂಮಿಯಲ್ಲಿ ಪರೀಕ್ಷಿಸುವಾಗ, ಅವುಗಳು ಮಣ್ಣಿನ ಮೇಲೆ ಸ್ಪಷ್ಟವಾಗಿ ಗುರುತು ಮೂಡಿಸಿದ್ದವು ಎಂದಿದ್ದಾರೆ ಅಣ್ಣಾದೊರೈ. ಆದರೆ, ಅದು ಚಂದ್ರನ ಮೇಲೆ ತನ್ನ ಗುರುತನ್ನು ಸ್ಪಷ್ಟವಾಗಿ ಮೂಡಿಸದಿರಲು ಚಂದ್ರಯಾನ-3 ಇಳಿದ ಪ್ರದೇಶದ ಮಣ್ಣಿನಲ್ಲಿರುವ ವ್ಯತ್ಯಾಸ ಕಾರಣವಾಗಿರಬಹುದು ಎಂದು ಅಭಿಪ್ರಾಯ ಪಡುತ್ತಾರೆ.

“ಭೂಮಿಯ ಮೇಲೆ ಹೇಗೆ ಮರಳು ಮಿಶ್ರಿತ ಮಣ್ಣು, ಕೆಸರು ಮಣ್ಣು ಸೇರಿದಂತೆ ವಿವಿಧ ರೀತಿಯ ಮಣ್ಣು ಲಭ್ಯವಿದೆಯೋ, ಅದೇ ರೀತಿ ಚಂದ್ರನ ವಿವಿಧ ಪ್ರದೇಶಗಳಲ್ಲಿ ಮಣ್ಣಿನ ವಿಧ ಬದಲಾಗುವ ಸಾಧ್ಯತೆಗಳಿವೆ” ಎನ್ನುತ್ತಾರೆ ಅಣ್ಣಾದೊರೈ.

ಅದೇನೇ ಆದರೂ, ರೋವರ್‌ನ ತೂಕ ಅದು ಗುರುತು ಮೂಡಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಅದರೊಡನೆ, ರೋವರ್ ಚಕ್ರ ಮಣ್ಣಿನ ಮೂಲಕ ಹೇಗೆ ಚಲಿಸುತ್ತದೆ ಎಂಬ ಅಂಶಗಳೂ ಗಣನೆಗೆ ಬರುತ್ತವೆ.

ಲೇಖಕರು 
ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
)

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Source : https://zeenews.india.com/kannada/india/why-chandrayaan-3-did-not-make-a-clear-footprint-on-the-surface-of-the-moon-160862

Leave a Reply

Your email address will not be published. Required fields are marked *