WI vs SA: 10 ಬೌಂಡರಿ, 11 ಸಿಕ್ಸರ್, 118 ರನ್! ಗೇಲ್ ದಾಖಲೆ ಪುಡಿಗಟ್ಟಿದ 34 ವರ್ಷದ ಬ್ಯಾಟರ್!

WI vs SA 2nd t20 Johnson Charles smashes 39 balls century Breaks Chris Gayle record

ದಕ್ಷಿಣ ಆಫ್ರಿಕಾ ವಿರುದ್ಧ ಸೂಪರ್‌ಸ್ಪೋರ್ಟ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (South Africa vs West Indies) ತಂಡದ ಸ್ಫೋಟಕ ಬ್ಯಾಟರ್ ಜಾನ್ಸನ್ ಚಾರ್ಲ್ಸ್ (Johnson Charles) ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿ ನೂತನ ದಾಖಲೆ ಬರೆದಿದ್ದಾರೆ. ಜೊತೆಗೆ ಈ ಹಿಂದೆ ಅದೇ ವಿಂಡೀಸ್ ತಂಡದ ಮಾಜಿ ಆಟಗಾರ ಯೂನಿವರ್ಸಲ್ ಬಾಸ್ ಕ್ರೀಸ್ ಗೇಲ್ (Chris Gayle) ಬರೆದಿದ್ದ ವೇಗದ ಶತಕದ ದಾಖಲೆಯನ್ನು ಮುರಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಚಾರ್ಲ್ಸ್, ವಿಂಡೀಸ್ ತಂಡ ಬೃಹತ್ ಟಾರ್ಗೆಟ್ ಸೆಟ್​ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಚಾರ್ಲ್ಸ್ ಅವರ ಅಬ್ಬರದ ಶತಕದ ನೆರವಿನಿಂದಾಗಿ ವಿಂಡೀಸ್ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಬರೋಬ್ಬರಿ 259 ರನ್​ಗಳ ಟಾರ್ಗೆಟ್ ನೀಡಿದೆ.

16 ಎಸೆತಗಳಲ್ಲಿ ಅರ್ಧಶತಕ

ಒಂದು ದಿನದ ಹಿಂದೆ ಕೇವಲ 8 ಎಸೆತಗಳಲ್ಲಿ 23 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್‌ನ ರೋಚಕ ವಿಜಯಕ್ಕೆ ಪ್ರಮುಖ ಕೊಡುಗೆ ನೀಡಿದ ಜಾನ್ಸನ್ ಚಾರ್ಲ್ಸ್, ಅದೇ ಮೈದಾನದಲ್ಲಿ ಈಗ ನೂತನ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ ಮೊದಲ ಓವರ್‌ನಲ್ಲಿಯೇ ಬ್ರಾಂಡನ್ ಕಿಂಗ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಆನಂತರ ಜೊತೆಯಾದ ಜಾನ್ಸನ್ ಚಾರ್ಲ್ಸ್ ಮತ್ತು ಕೈಲ್ ಮೇಯರ್ಸ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ್ದರಿಂದ ಮೊದಲ ವಿಕೆಟ್ ಪತನದ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಅದರಲ್ಲೂ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್​ಗೆ ಮುಂದಾದ ಚಾರ್ಲ್ಸ್, ಮೊದಲು ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆನಂತರ ಕೇವಲ 16 ಎಸೆತಗಳಲ್ಲಿ ಉಳಿದ 50 ರನ್ ಪೂರ್ಣಗೊಳಿಸಿ, ದಾಖಲೆಯ ಶತಕ ಸಿಡಿಸಿದರು.

ಕೇವಲ 39 ಎಸೆತಗಳಲ್ಲಿ ಶತಕ

13ನೇ ಓವರ್‌ನಲ್ಲಿ ಸಿಸಂದ ಮಗಲಾ ಅವರ ನಾಲ್ಕನೇ ಎಸೆತವನ್ನು ಎಕ್ಸ್‌ಟ್ರಾ ಕವರ್‌ನಲ್ಲಿ ಸಿಕ್ಸರ್‌ಗೆ ಕಳುಹಿಸುವ ಮೂಲಕ ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ ಕ್ರಿಸ್ ಗೇಲ್ ಅವರ 47 ಎಸೆತಗಳಲ್ಲಿ ಶತಕ ಸಿಡಿಸಿದ ದಾಖಲೆಯನ್ನು ಮುರಿದರು. ಗೇಲ್ 2016ರಲ್ಲಿ ಈ ಅದ್ಭುತ ಸಾಧನೆ ಮಾಡಿದ್ದರು. ಅಂತಿಮವಾಗಿ 14ನೇ ಓವರ್ ಕೊನೆಯ ಎಸೆತದಲ್ಲಿ ಮಾರ್ಕೋ ಯಾನ್ಸನ್​ಗೆ ಬಲಿಯಾದ ಚಾರ್ಲ್ಸ್, ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 46 ಎಸೆತಗಳನ್ನು ಎದುರಿಸಿ, 10 ಬೌಂಡರಿ ಹಾಗೂ 11 ಸಿಕ್ಸರ್​ಗಳ ನೆರವಿನಿಂದ 118 ರನ್ ಬಾರಿಸಿದರು.

ಚಾರ್ಲ್ಸ್ ವಿಕೆಟ್ ಬಳಿಕ ಜೊತೆಯಾದ ನಾಯಕ ಪೊವೆಲ್ ಹಾಗೂ ಶೆಫರ್ಡ್​ ಕೂಡ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದರು. ಅಂತಿಮ ಹಂತದಲ್ಲಿ ಅರ್ಧಶತಕದ ಜೊತೆಯಾಟವನ್ನಾಡಿದ ಈ ಜೋಡಿ ವಿಂಡೀಸ್ ತಂಡವನ್ನು ನಿಗದಿತ 20 ಓವರ್​ಗಳಲ್ಲಿ 259 ರನ್​ಗಳಿಗೆ ಕೊಂಡೊಯ್ದರು. ಇದರಲ್ಲಿ ಪೊವೆಲ್ 19 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 29 ರನ್ ಸಿಡಿಸಿದರೆ, ಬೌಂಡರಿ, ಸಿಕ್ಸರ್​ಗಳ ಮಳೆಗರೆದ ಶೆಫರ್ಡ್ ಕೇವಲ 18 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್​ಗಳ ಸಹಿತ 41 ರನ್ ಚಚ್ಚಿದರು.

source https://tv9kannada.com/sports/cricket-news/wi-vs-sa-2nd-t20-johnson-charles-smashes-39-balls-century-breaks-chris-gayle-record-psr-au14-543527.html

Views: 0

Leave a Reply

Your email address will not be published. Required fields are marked *