IND vs NZ 5ನೇ ಟಿ20: ತವರಿನ ಅಂಗಳದಲ್ಲಿ ಸಂಜು ಮಿಂಚುವರೇ? ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗಿದು ಅಂತಿಮ ಪರೀಕ್ಷೆ!
ತಿರುವನಂತಪುರ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಈಗಾಗಲೇ 3-1 ಅಂತರದಲ್ಲಿ ಕೈವಶ ಮಾಡಿಕೊಂಡಿರುವ ಭಾರತ ತಂಡ, ಶನಿವಾರ ನಡೆಯಲಿರುವ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆಲುವಿನೊಂದಿಗೆ ಸರಣಿ ಮುಗಿಸಲು ಸಜ್ಜಾಗಿದೆ. ಮುಂದಿನ ತಿಂಗಳು ನಡೆಯಲಿರುವ ಪ್ರತಿಷ್ಠಿತ ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಸಿಗಲಿರುವ ಕೊನೆಯ ಪಂದ್ಯ ಇದಾಗಿದ್ದು, ಆಟಗಾರರ ಸಿದ್ಧತೆಯ ದೃಷ್ಟಿಯಿಂದ ಈ ಕಾದಾಟ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಕಣ್ಣು
ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರಿಗೆ ಇದು ತವರಿನ ಅಂಗಳ. ಕಳೆದ ನಾಲ್ಕು ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟ್ ಬೀಸದ ಸಂಜು, ತಮ್ಮ ತವರಿನ ಅಭಿಮಾನಿಗಳ ಎದುರು ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಆರಂಭಿಕರಾದ ಸಂಜು ಮತ್ತು ಅಭಿಷೇಕ್ ಶರ್ಮಾ ಇನಿಂಗ್ಸ್‌ನಲ್ಲಿ ಭದ್ರ ಬುನಾದಿ ಹಾಕಿಕೊಟ್ಟರೆ, ನಂತರ ಬರುವ ಬ್ಯಾಟರ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಕಳೆದ ಪಂದ್ಯದಲ್ಲಿ ಅಭಿಷೇಕ್ ‘ಗೋಲ್ಡನ್ ಡಕ್’ ಆಗಿದ್ದರು ಮತ್ತು ಸೂರ್ಯಕುಮಾರ್ ಯಾದವ್ ಕೂಡ ಬೇಗನೆ ನಿರ್ಗಮಿಸಿದ್ದರು. ಈ ಹಿಂದಿನ ಪಂದ್ಯದಲ್ಲಿ ಶಿವಂ ದುಬೆ ಅವರ ಏಕಾಂಗಿ ಹೋರಾಟ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿತ್ತು.
ಬದಲಾಗಲಿದೆಯೇ ಬೌಲಿಂಗ್ ಪಡೆ?
ಕಳೆದ ಪಂದ್ಯದಲ್ಲಿ ಪ್ರಮುಖ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು, ಇದು ಬೌಲಿಂಗ್ ವಿಭಾಗದಲ್ಲಿ ಕೊರತೆಯಾಗಿ ಕಾಡಿತ್ತು. ಅವರ ಬದಲಿಗೆ ಆಡಿದ್ದ ವೇಗಿ ಹರ್ಷಿತ್ ರಾಣಾ ವಿಕೆಟ್ ಪಡೆಯದೆ ದುಬಾರಿಯಾಗಿದ್ದರು. ಟಿಮ್ ಸೀಫರ್ಡ್ ಮತ್ತು ಡೆವಾನ್ ಕಾನ್ವೆ ಅವರಂತಹ ಆಟಗಾರರನ್ನು ಕಟ್ಟಿಹಾಕಲು ಈ ಪಂದ್ಯದಲ್ಲಿ ವರುಣ್ ಚಕ್ರವರ್ತಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಇನ್ನು ಆಲ್‌ರೌಂಡರ್ ಅಕ್ಷರ್ ಪಟೇಲ್ ಸಂಪೂರ್ಣ ಫಿಟ್ ಆಗಿ ಕಣಕ್ಕಿಳಿಯುವರೇ ಎಂಬುದು ಕುತೂಹಲ ಮೂಡಿಸಿದೆ. ಇಶಾನ್ ಕಿಶನ್ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಪಿಚ್ ರಿಪೋರ್ಟ್ ಹೇಗಿದೆ?
ತಿರುವನಂತಪುರದ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಹೀಗಾಗಿ ಇಲ್ಲಿ ಬೌಲರ್‌ಗಳ ಪಾತ್ರ ನಿರ್ಣಾಯಕವಾಗಲಿದ್ದು, ಟಾಸ್ ಗೆಲ್ಲುವ ನಾಯಕನ ನಿರ್ಧಾರ ಪಂದ್ಯದ ಗತಿಯನ್ನು ಬದಲಿಸಬಹುದು.
ಪಂದ್ಯದ ವಿವರಗಳು:
- ಸ್ಥಳ: ತಿರುವನಂತಪುರ
- ಸಮಯ: ಶನಿವಾರ ರಾತ್ರಿ 7 ಗಂಟೆಗೆ
- ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೊಹಾಟ್‌ಸ್ಟಾರ್ ಆಯಪ್