
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20 ರಿಂದ ಆರಂಭವಾಗಲಿದೆ. ಉಭಯ ತಂಡಗಳ ಮೊದಲ ಪಂದ್ಯಕ್ಕೆ ಲೀಡ್ಸ್ ಆತಿಥ್ಯವಹಿಸುತ್ತಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ನೂತನ ಟೆಸ್ಟ್ ನಾಯಕ ಶುಭ್ಮನ್ ಗಿಲ್ (Shubman Gill) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಈ ವೇಳೆ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ಗಿಲ್, ನಾನು ಮತ್ತು ನಮ್ಮ ತಂಡ ಯಾವುದೇ ಒತ್ತಡದಲಿಲ್ಲ. ಈ ಸರಣಿಯಲ್ಲಿ ನಾನು ಉತ್ತಮ ಪ್ರದರ್ಶನ ನೀಡಬೇಕೆಂಬ ಗುರಿ ಇದೆ. ಅಲ್ಲದೆ ಟೆಸ್ಟ್ ಗೆಲ್ಲಲು ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಲು ನಾನು ಸಿದ್ಧ ಎಂದು ಹೇಳಿಕೊಂಡಿದ್ದಾರೆ.
5 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಜೂನ್ 20 ಶುಕ್ರವಾರದಿಂದ ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಒಂದು ದಿನ ಮೊದಲು, ಜೂನ್ 19 ಗುರುವಾರ, ನಾಯಕ ಶುಭ್ಮನ್ ಗಿಲ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಟೆಸ್ಟ್ ನಾಯಕನಾಗಿ ಯಾವುದೇ ಸರಣಿಯ ಮೊದಲು ಇದು ಅವರ ಮೊದಲ ಪತ್ರಿಕಾಗೋಷ್ಠಿಯಾಗಿತ್ತು. ಆದಾಗ್ಯೂ, ಇಂಗ್ಲೆಂಡ್‌ಗೆ ತೆರಳುವ ಮೊದಲು, ಅವರು ಮುಂಬೈನಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದರು, ಆದರೆ ಸರಣಿಗೆ ಸ್ವಲ್ಪ ಮೊದಲು ಅವರು ಮಾಧ್ಯಮಗಳೊಂದಿಗೆ ಏಕಾಂಗಿಯಾಗಿ ಮಾತನಾಡುತ್ತಿರುವುದು ಇದೇ ಮೊದಲು. ಈ ಪತ್ರಿಕಾಗೋಷ್ಠಿಯಲ್ಲಿ ಗಿಲ್ ಮಾತನಾಡಿದ ಈ 5 ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು
- 20 ವಿಕೆಟ್‌ಗಳನ್ನು ಪಡೆಯದೆ ನೀವು ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ನಾವು ಬೌಲಿಂಗ್ ವಿಭಾಗವನ್ನು ಬಲಪಡಿಸಲು ನೋಡುತ್ತಿದ್ದೇವೆ. ಅಂದರೆ, 20 ವಿಕೆಟ್‌ಗಳನ್ನು ಪಡೆಯಲು ನಾವು ಬ್ಯಾಟಿಂಗ್ ವಿಭಾಗವನ್ನು ಕಡಿಮೆ ಮಾಡಲು ಸಿದ್ಧ. ಅಗತ್ಯವಿದ್ದರೆ ಬ್ಯಾಟಿಂಗ್ ಆಲ್‌ರೌಂಡರ್ ಬದಲಿಗೆ ಪೂರ್ಣ ಪ್ರಮಾಣದ ಬೌಲರ್ ಅನ್ನು ಆಯ್ಕೆ ಮಾಡಲು ಸಿದ್ಧ ಎಂದು ಗಿಲ್ ಸ್ಪಷ್ಟಪಡಿಸಿದರು.
- ಟೆಸ್ಟ್ ಸರಣಿಯ ಮಹತ್ವದ ಕುರಿತು ಮಾತನಾಡಿದ ಗಿಲ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಐಪಿಎಲ್ ಗೆಲ್ಲುವುದಕ್ಕಿಂತ ದೊಡ್ಡ ಸಾಧನೆ. ಐಪಿಎಲ್ ಪ್ರತಿ ವರ್ಷ ಬರುತ್ತದೆ ಮತ್ತು ನಮಗೆ ಪ್ರತಿ ವರ್ಷ ಅವಕಾಶ ಸಿಗುತ್ತದೆ. ಆದರೆ ಟೆಸ್ಟ್ ಸರಣಿ ಗೆಲ್ಲುವುದು ಅದಕ್ಕಿಂತ ದೊಡ್ಡದು ಎಂದು ಗಿಲ್ ಹೇಳಿದರು.
- ಇನ್ನು 3 ನೇ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಗಿಲ್, ‘ನಾವು ಮತ್ತೊಮ್ಮೆ ಪಿಚ್ ನೋಡಿ ಆ ನಂತರ 3 ನೇ ಕ್ರಮಾಂಕವನ್ನು ನಿರ್ಧರಿಸುತ್ತೇವೆ. ವಿರಾಟ್ ಭಾಯ್ ನಿವೃತ್ತಿಯ ನಂತರ, ಗೌತಮ್ ಗಂಭೀರ್ ಮತ್ತು ನಾನು ಮಾತನಾಡಿ 4 ನೇ ನಂಬರ್‌ನಲ್ಲಿ ಆಡಲು ನಿರ್ಧರಿಸಿದೆವು’ ಎಂದು ಹೇಳಿದರು.
- ನಾನು ಬ್ಯಾಟಿಂಗ್ ಮಾಡಲು ಹೋದಾಗ, ನಾನು ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡಲು ಬಯಸುತ್ತೇನೆ, ನಾಯಕತ್ವದ ಬಗ್ಗೆ ಯೋಚಿಸುವುದಿಲ್ಲ. ಏಕೆಂದರೆ ಅದು ಒತ್ತಡವನ್ನು ಉಂಟುಮಾಡುತ್ತದೆ. ನಾನು ಈ ಸರಣಿಯ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಲು ಬಯಸುತ್ತೇನೆ ಎಂದರು.
- ತಂಡದ ಅನುಭವದ ಬಗ್ಗೆ ಮಾತನಾಡಿದ ಗಿಲ್, ‘ನಾವು ಹಿಂದಿನ ಫಲಿತಾಂಶಗಳನ್ನು ನೋಡುವುದಿಲ್ಲ. ನಾವು ಅನಾನುಭವಿಗಳು ಎಂದು ಅನೇಕರು ಹೇಳುತ್ತಿದ್ದಾರೆ ಆದರೆ ಇದರರ್ಥ ನಾವು ಯಾವುದೇ ಹಳೆಯ ಹೊರೆಯನ್ನು (ಹಳೆಯ ಫಲಿತಾಂಶಗಳ ಒತ್ತಡ) ಹೊತ್ತಿಲ್ಲ’ ಎಂದರು.