ನಾಟಿಂಗ್‌ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಮಹಿಳೆಯರ ಕ್ರಿಕೆಟ್ ಸರಣಿಯ ಮೊದಲ ಹಣಾಹಣಿಯು ಶನಿವಾರ ನಡೆಯಲಿದೆ.
ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪೂರ್ವಭಾವಿ ಅಭ್ಯಾಸಕ್ಕೆ ಈ ಸರಣಿಯು ಉಭಯ ತಂಡಗಳಿಗೆ ಮುನ್ನುಡಿಯಾಗಲಿದೆ. ಹೋದ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಗುಂಪು ಹಂತದಲ್ಲಿಯೇ ಸೋತು ನಿರ್ಗಮಿಸಿತ್ತು.
ಅದರಿಂದಾಗಿ ಮುಂದಿನ ಟೂರ್ನಿಗೆ ಇನ್ನೂ ಸುಮಾರು ಒಂದು ವರ್ಷ ಬಾಕಿಯಿದ್ದಾಗಲೇ ತಯಾರಿ ಆರಂಭಿಸಲಾಗುತ್ತಿದೆ. ಅದಕ್ಕಾಗಿ ಅನುಭವಿ ಮತ್ತು ಯುವ ಆಟಗಾರ್ತಿಯರು ಇರುವ ತಂಡವನ್ನು ಕಣಕ್ಕಿಳಿಸಲಾಗುತ್ತಿದೆ.
ಉಪನಾಯಕಿ ಸ್ಮೃತಿ ಮಂದಾನ ಅವರು ಶೆಫಾಲಿ ವರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್, ವಿಕೆಟ್‌ಕೀಪರ್ ಯಷ್ಟಿಕಾ ಭಾಟಿಯಾ, ಆಲ್‌ರೌಂಡರ್ ದೀಪ್ತಿ ಗೌಡ ಸ್ನೇಹಾ ರಾಣಾ, ರಿಚಾ ಘೋಷ್ ಅವರು ಅನುಭವಿ ಆಟಗಾರ್ತಿಯರಾಗಿದ್ದಾರೆ. ಕ್ರಾಂತಿ ಗೌಡ, ಶ್ರೀಚರಣಿ ಮತ್ತು ಸಯಾಲಿ ಸತಘರೆ ಅವರು ತಂಡದಲ್ಲಿರುವ ಹೊಸಪ್ರತಿಭೆಗಳು.
ಈ ವರ್ಷ ಭಾರತ ತಂಡವು ಆಡುತ್ತಿರುವ ಮೊದಲ ಟಿ20 ಪಂದ್ಯವೂ ಇದಾಗಿದೆ. ಸ್ಪಿನ್ ಆಲ್‌ರೌಂಡರ್ ಸ್ನೇಹಾ ರಾಣಾ ಮತ್ತು ಮಧ್ಯಮವೇಗಿ ಅಮನ್ಜೋತ್ ಕೌರ್ ಅವರ ಮೇಲೆ ಆಯ್ಕೆಗಾರರು ಹೆಚ್ಚು ನಿಗಾ ಇಟ್ಟಿದ್ದಾರೆ. ಏಕೆಂದರೆ ಈ ಸರಣಿಯಲ್ಲಿ ಬೌಲರ್ ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಕರ್ ಅವರು ಆಡುತ್ತಿಲ್ಲ. ಗಾಯದಿಂದಾಗಿ ಅವರು ವಿಶ್ರಾಂತಿಯಲ್ಲಿದ್ದಾರೆ. ಆದ್ದರಿಂದ ಅವರ ಗೈರಿನಲ್ಲಿ ಮಿಂಚುವ ಅವಕಾಶ ಹೊಸಬರಿಗೆ ಇದೆ.
ಆತಿಥೇಯ ತಂಡದಲ್ಲಿ ಅನುಭವಿ ಆಟಗಾರ್ತಿಯರಾದ ಎಮಿ ಜೋನ್ಸ್, ಟ್ಯಾಮಿ ಬೆಮೌಂಟ್, ಡ್ಯಾನಿ ವೈಡ್ ಹಾಜ್ ಮತ್ತು ಸೋಫಿ ಎಕ್ಸೆಲೆಸ್ಟೋನ್ ಅವರಿದ್ದಾರೆ. ಯುವ ಆಟಗಾರ್ತಿಯರಾದ ಐಸಿ ವಾಂಗ್, ಅಲೈಸ್ ಕ್ಯಾಪ್ಸಿ ಮತ್ತು ಸೋಫಿ ಡಂಕ್ಲಿ ಅವರು ತಮ್ಮ ಹೆಜ್ಜೆಗುರುತು ಮೂಡಿಸಲು ಉತ್ಸುಕರಾಗಿದ್ದಾರೆ. ಆದ್ದರಿಂದ ಹರ್ಮನ್‌ಪ್ರೀತ್ ಕೌರ್ ನಾಯಕತ್ವ ಭಾರತ ತಂಡಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆ ಹೆಚ್ಚು.
ಪಂದ್ಯ ಆರಂಭ: ರಾತ್ರಿ 7
ನೇರಪ್ರಸಾರ:
ತಂಡಗಳು
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂದಾನ (ಉಪನಾಯಕಿ) ಶಫಾಲಿ ವರ್ಮಾ ಜೆಮಿಮಾ ರಾಡ್ರಿಗಸ್ ರಿಚಾ ಘೋಷ್ (ವಿಕೆಟ್‌ಕೀಪರ್) ಯಷ್ಟಿಕಾ ಭಾಟಿಯಾ (ವಿಕೆಟ್‌ಕೀಪರ್) ಹರ್ಲೀನ್ ಡಿಯೊಲ್ ದೀಪ್ತಿ ಶರ್ಮಾ ಸ್ನೇಹಾ ರಾಣಾ ಶ್ರೀಚರಣಿ ಶುಚಿ ಉಪಾಧ್ಯಾಯ ಅಮನ್ಜೋತ್ ಕೌರ್ ಅರುಂಧತಿ ರೆಡ್ಡಿ ಕ್ರಾಂತಿ ಗೌಡ ಸಯಾಲಿ ಸತಘರೆ.
ಇಂಗ್ಲೆಂಡ್: ನ್ಯಾಟ್ ಶಿವರ್ ಬ್ರಂಟ್ (ನಾಯಕಿ) ಎಮ್ ಅರ್ಲೋಟ್ ಟ್ಯಾಮಿ ಬೆಮೌಂಟ್ (ವಿಕೆಟ್‌ಕೀಪರ್) ಲಾರೆನ್ ಬೆಲ್ ಅಲೈಸ್ ಕ್ಯಾಪ್ಸಿ ಚಾರ್ಲೀ ಡೀನ್ ಸೋಫಿಯಾ ಡಂಕ್ಲಿ ಸೋಫಿ ಎಕ್ಸೆಲೆಸ್ಟೋನ್ ಲಾರೆನ್ ಫೈಲರ್ ಎಮಿ ಜೋನ್ಸ್ (ವಿಕೆಟ್‌ಕೀಪರ್) ಪೈಜೆ ಶಾಲ್‌ಫೀಲ್ಡ್ ಲಿನ್ಸೆ ಸ್ಮಿತ್ ಡ್ಯಾನಿ ವೈಟ್ ಹಾಜ್ ಐಸಿ ವಾಂಗ್. ಪಂದ್ಯ ಆರಂಭ: ರಾತ್ರಿ 7.