Women’s World Cup 2025: ಇಂಗ್ಲೆಂಡ್ ವಿರುದ್ಧ ಭಾರತ 4 ರನ್ ಅಂತರದಲ್ಲಿ ಸೋಲು.

ಮಧ್ಯಪ್ರದೇಶದ ಹೋಲ್ಕರ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್‌ (India vs England) ಮಹಿಳಾ ತಂಡಗಳ ನಡುವಿನ 2025 ರ ಮಹಿಳಾ ಏಕದಿನ ವಿಶ್ವಕಪ್​ನ (Women’s ODI World Cup 2025) 20ನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 4 ರನ್​ಗಳಿಂದ ಸೋಲನುಭವಿಸಿದೆ.

ಈ ಮೂಲಕ ಈ ಟೂರ್ನಿಯಲ್ಲಿ ಭಾರತ ತಂಡ ಸತತ ಮೂರನೇ ಪಂದ್ಯದಲ್ಲಿ ಅಂದರೆ ಹ್ಯಾಟ್ರಿಕ್ ಸೋಲು ಕಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ತಂಡ 288 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ 284 ರನ್ ಕಲೆಹಾಕಲಷ್ಟೇ ಶಕ್ತವಾಗಿ 4 ರನ್​ಗಳಿಂದ ಸೋಲೊಪ್ಪಿಕೊಂಡೊತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಈಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಭಾರತಕ್ಕೆ ಬಹಳ ಮುಖ್ಯವಾಗಲಿದೆ.


ಭಾರತಕ್ಕೆ ಉಳಿದ ಪಂದ್ಯಗಳು ನಿರ್ಣಾಯಕ
ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಭಾರತ ಗೆದ್ದರೆ, ಸೆಮಿಫೈನಲ್ ತಲುಪುವ ಅದರ ಆಸೆ ಉಳಿಯುತ್ತದೆ. ಈ ಪಂದ್ಯಾವಳಿಯಲ್ಲಿ ಭಾರತಕ್ಕೆ ಇನ್ನು ಎರಡು ಪಂದ್ಯಗಳು ಉಳಿದಿವೆ. ಒಂದು ನ್ಯೂಜಿಲೆಂಡ್ ವಿರುದ್ಧ ಮತ್ತು ಇನ್ನೊಂದು ಬಾಂಗ್ಲಾದೇಶ ವಿರುದ್ಧ. ಈ ಎರಡೂ ಪಂದ್ಯಗಳನ್ನು ಭಾರತ ಗೆಲ್ಲಲೇಬೇಕು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯವು ಮಾಡು-ಅಥವಾ-ಮಡಿ ಹೋರಾಟವಾಗಿರುತ್ತದೆ.


ಸ್ಮೃತಿ, ಕೌರ್ ಶತಕದ ಜೊತೆಯಾಟ
ಇಂಗ್ಲೆಂಡ್ ನೀಡಿದ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪ್ರತಿಕಾ ರಾವಲ್ ಕೇವಲ 6 ರನ್‌ಗಳಿಗೆ ಔಟಾದರು. ನಂತರ ಸ್ಮೃತಿ ಮಂಧಾನ ಹರ್ಲೀನ್ ಡಿಯೋಲ್ ಜೊತೆ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ 29 ರನ್‌ಗಳ ಪಾಲುದಾರಿಕೆಯ ನಂತರ, ಹರ್ಲೀನ್ ಡಿಯೋಲ್ 24 ರನ್‌ಗಳಿಗೆ ಔಟಾದರು. ನಂತರ ಉಪನಾಯಕಿ ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಮೂರನೇ ವಿಕೆಟ್‌ಗೆ 125 ರನ್‌ಗಳ ಜೊತೆಯಾಟ ನಡೆಸಿದರು. ಆದರೆ ಈ ಹಂತದಲ್ಲಿ ಹರ್ಮನ್‌ಪ್ರೀತ್ ಕೌರ್ 70 ರನ್‌ಗಳಿಸಿ ಔಟಾದರು.


ಕೊನೆಯಲಿ ಎಡವಿದ ಭಾರತ
ನಂತರ ಸ್ಮೃತಿ ಮಂಧಾನ ಮತ್ತು ದೀಪ್ತಿ ಶರ್ಮಾ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ದರು. ಇಬ್ಬರೂ 67 ರನ್‌ಗಳ ಪಾಲುದಾರಿಕೆ ನಡೆಸಿದರು. ಆದರೆ ಸ್ಮೃತಿ ಮಂಧಾನ 88 ರನ್‌ಗಳಿಗೆ ಔಟಾದರು. ನಂತರ ದೀಪ್ತಿ ಶರ್ಮಾ ಕೂಡ  57 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು. ಇದರಿಂದಾಗಿ ತಂಡ ಸಂಕಷ್ಟದಲ್ಲಿ ಸಿಲುಕಿತು. ರಿಚಾ ಘೋಷ್ ಕೂಡ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗದೆ 8 ರನ್ ಗಳಿಸಿ ಔಟಾದರು.


ಕೊನೆಯ ಓವರ್ ರೋಚಕತೆ
ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ 14 ರನ್‌ಗಳು ಬೇಕಾಗಿದ್ದವು.  ಸ್ನೇಹ್ ರಾಣಾ ಮೊದಲ ಎಸೆತದಲ್ಲಿ ಒಂದು ರನ್ ಗಳಿಸಿದರು. ಅಮನ್‌ಜೋತ್ ಕೂಡ ಒಂದು ರನ್ ಗಳಿಸಿದರು. ಇದರಿಂದ 4 ಎಸೆತಗಳಲ್ಲಿ 12 ರನ್‌ ಬೇಕಾಯಿತು. ಸ್ನೇಹ್ ರಾಣಾ ಮೂರನೇ ಎಸೆತದಲ್ಲಿ 1 ರನ್ ಗಳಿಸಿ ಅಮನ್‌ಜೋತ್‌ಗೆ ಸ್ಟ್ರೈಕ್ ನೀಡಿದರು. ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ನಂತರ ಅಮನ್‌ಜೋತ್ ಐದನೇ ಎಸೆತದಲ್ಲಿ ಎರಡು ರನ್ ಗಳಿಸಿ ಸ್ಟ್ರೈಕ್ ಅನ್ನು ತಮ್ಮ ಬಳಿಯೇ ಇಟ್ಟುಕೊಂಡರು. ಆರನೇ ಎಸೆತದಲ್ಲಿ ಅವರು ಬೌಂಡರಿ ಹೊಡೆದರು ಆದರೆ ಅದು ಯಾವುದೇ ಪ್ರಯೋಜನವಾಗಲಿಲ್ಲ.


ಇಂಗ್ಲೆಂಡ್ ಇನ್ನಿಂಗ್ಸ್
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಹೀದರ್ ನೈಟ್ ಅವರ ಶತಕ ಮತ್ತು ಆಮಿ ಜೋನ್ಸ್ ಅವರ ಅರ್ಧಶತಕದ ಸಹಾಯದಿಂದ 289 ರನ್‌ ಕಲೆ ಹಾಕಿತು. ಹೀದರ್ ನೈಟ್ 109 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು . ಆಮಿ ಜೋನ್ಸ್ 56 ರನ್​ಗಳ ಕಾಣಿಕೆ ನೀಡಿದರು. ನಾಯಕಿ ಬ್ರಂಟ್ ಕೂಡ 38 ರನ್​ಗಳ ಇನ್ನಿಂಗ್ಸ್ ಆಡಿದರು. ಭಾರತ ಪರ ದೀಪ್ತಿ ಶರ್ಮಾ ನಾಲ್ಕು ವಿಕೆಟ್ ಪಡೆದರೆ, ಶ್ರೀ ಚರಣಿ ಎರಡು ವಿಕೆಟ್ ಪಡೆದರು.

Views: 6

Leave a Reply

Your email address will not be published. Required fields are marked *