
ದಿನಾಂಕ 24 ಡಿಸೆಂಬರ್ 2024 ರಂದು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ RLHP ಮೈಸೂರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ವರುಣ ಮೈಸೂರು ತಾಲೂಕು ಇವರ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶ್ರೀ ಶಶಿಕುಮಾರ್ ಎಸ್ ಸಂಯೋಜಕರು ಮಾತನಾಡುತ್ತಾ ಸಂಸ್ಥೆಯು ಕಳೆದ 40 ವರ್ಷಗಳಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದ್ದು ಮೈಸೂರು ಮತ್ತು ಟಿ ನರಸೀಪುರ ತಾಲೂಕಿನ 25 ಹಳ್ಳಿಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದೆ.

ಆರೋಗ್ಯ ಎಂಬುದು ಕೇವಲ ದೈಹಿಕ ಕ್ಕೆ ಸಂಬಂಧಿಸಿದಲ್ಲ ಅದು ಮಾನಸಿಕವಾಗಿ, ಬೌದ್ಧಿಕವಾಗಿ, ಸಾಮಾಜಿಕವಾಗಿ ಇರುವಂತದ್ದು. ಯುವಜನರು ತಮ್ಮ ಬುದ್ಧಿಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ತಾವೆಲ್ಲರೂ ಇದರ ಕುರಿತು ಜಾಗೃತಿ ಪಡೆಯಬೇಕು ಎಂದು ತಿಳಿಸಿದರು.

ಡಾಕ್ಟರ್ ಪ್ರಸಾದ್ ಇವರು ಎಚ್.ಐ.ವಿ ಏಡ್ಸ್ ಎಂಬುದು ಮೂರು ವಿಧವಾಗಿ ಹರಡುತ್ತದೆ. ಅಸುರಕ್ಷಿತ ಲೈಂಗಿಕ ಸಂಪರ್ಕ, ಒಬ್ಬರು ಬಳಸಿದ ಸಿರಿಂಜನ್ನು ಇನ್ನೊಬ್ಬರು ಬಳಸುವುದು, ತಾಯಿಯಿಂದ ಮಗುವಿಗೆ ಮತ್ತು ಕಟಿಂಗ್ ಶಾಪುಗಳಲ್ಲಿ ಸೊಂಕಿರುವ ವ್ಯಕ್ತಿಗಳಿಗೆ ಬಳಸಿದ ಬ್ಲೇಡನ್ನು ಇನ್ನೊಬ್ಬರು ಬಳಸುವುದರಿಂದ ಹರಡುತ್ತದೆ. ಇದಕ್ಕೆ ಚಿಕಿತ್ಸೆ ಇರುವುದಿಲ್ಲ ಹಾಗಾಗಿ ಎಲ್ಲರಿಗೂ ಇದರ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಈ ತರಹ ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗಳಲ್ಲಿ ಎ.ಆರ್.ಟಿ ಕೇಂದ್ರಗಳಿಗೆ ಸಂಪರ್ಕಿಸಬೇಕು. ನೀವು ಸಹ ನಿಮ್ಮ ನಿಮ್ಮ ಮನೆಗಳಲ್ಲಿ ಮತ್ತು ನಿಮ್ಮ ಸಮುದಾಯಗಳಲ್ಲಿ ಇದರ ಕುರಿತು ಜಾಗೃತಿ ಮೂಡಿಸಿ ಮುನ್ನೆಚ್ಚರಿಕೆ ಕಾರ್ಯಕ್ರಮಗಳನ್ನು ಅನುಸರಿಸಿರಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ, ಸಹಾಯಕ ಶಿಶು ಅಬಿವೃದ್ದಿ ಯೋಜನಾಧಿಕಾರಿ, ಶ್ರೀಮತಿ ನಾಗರತ್ನ ಮೇಲ್ವಿಚಾರಕರು, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಜೇಶ್ವರಿ ಉಪಸ್ಥಿತರಿದ್ದರು.