World Boxing Championship: ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್​: 2 ಚಿನ್ನದ ಪದಕ ಗೆದ್ದ ಭಾರತ

Women's World Boxing Championships: Saweety Boora, Nitu Ghanghas Clinch Gold Medals

Women’s World Boxing Championships: ದೆಹಲಿಯಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್​​ನಲ್ಲಿ ನೀತು ಗಂಗಾಸ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಹಿಂದೆ ಕಾಮನ್‌ವೆಲ್ತ್ ಗೇಮ್ಸ್‌ನ ಚಿನ್ನದ ಪದಕ ಗೆದ್ದಿದ್ದ ನೀತು, ಶನಿವಾರ ನಡೆದ 48 ಕೆಜಿ ವಿಭಾಗದ ಅಂತಿಮ ಹಣಾಹಣಿಯಲ್ಲಿ ಮಂಗೋಲಿಯನ್ ಮಹಿಳಾ ಬಾಕ್ಸರ್ ಲುತ್ಸಾಯ್ ಖಾನ್ ಅವರನ್ನು ಮಣಿಸಿ ಭಾರತದ ಕೀರ್ತಿ ಪಾತಾಕೆಯನ್ನು ಹಾರಿಸಿದರು. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಎದುರಾಳಿಯ ದೌರ್ಬಲ್ಯಗಳನ್ನೇ ಬಂಡವಾಳ ಮಾಡಿಕೊಂಡ ನೀತು ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ವಿವಿಧ ಕಾಂಬಿನೇಷನ್​ಗಳಲ್ಲಿ ಎದುರಾಳಿಯ ಮೇಲೆ ಪಂಚ್ ಗಳ ಸುರಿಮಳೆಗೈಯುವ ಮೂಲಕ ಸುಲಭವಾಗಿ 5-0 ಅಂತರದಿಂದ ಪಂದ್ಯ ಮುಗಿಸಿದರು.

ಈ ಗೆಲುವಿನೊಂದಿಗೆ ನೀತು ಗಂಗಾಸ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದ 6ನೇ ಮಹಿಳಾ ಬಾಕ್ಸರ್ ಎನಿಸಿಕೊಂಡರು. ನೀತು ಗಂಗಾಸ್​ಗಿಂತಲೂ ಮೊದಲು, ಮೇರಿ ಕೋಮ್ 2002, 2005, 2006, 2008, 2010, 2018 ರಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಹಾಗೆಯೇ 2006 ರಲ್ಲಿ ಸರಿತಾ ದೇವಿ, ಜೆನ್ನಿ ಆರ್ಎಲ್, ಲೇಖಾ ಕೆಸಿ ಕೂಡ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದರು.

ಭಾರತಕ್ಕೆ 2ನೇ ಚಿನ್ನ:

ನೀತು ಗಂಗಾಸ್ ಚಿನ್ನದ ಪದಕ ಖಾತೆ ತೆರೆಯುತ್ತಿದ್ದಂತೆ ಭಾರತಕ್ಕೆ ಸವೀಟಿ ಬೂರಾ ಮತ್ತೊಂದು ಬಂಗಾರದ ಪದಕ ತಂದುಕೊಟ್ಟರು. 81 ಕೆಜಿ ವಿಭಾಗದಲ್ಲಿ ಚೀನಾದ ವಾಂಗ್ ಲಿನ್ ಅವರನ್ನು 4-3 ಅಂತರದಿಂದ ಸೋಲಿಸಿ ಬೂರ ಪದಕ ಗೆದ್ದರು. ಪ್ರಸ್ತುತ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಇದು ಎರಡನೇ ಚಿನ್ನದ ಪದಕವಾಗಿದೆ. 2014ರಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸವೀಟಿ ಒಂಬತ್ತು ವರ್ಷಗಳ ಬಳಿಕ ಇದೀಗ ಚಿನ್ನದ ಪದಕಕ್ಕೆ ಕೊರೊಳೊಡ್ಡಿರುವುದು ವಿಶೇಷ.

ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್​ಶಿಪ್​ನ ಅಂತಿಮ ಸುತ್ತಿನಲ್ಲಿ  ಭಾರತದ ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್ (50 ಕೆಜಿ) ಹಾಗೂ ಲವ್ಲಿನಾ (75 ಕೆಜಿ) ಕೂಡ ಇದ್ದಾರೆ. ಇಬ್ಬರು ಫೈನಲ್ ತಲುಪಿರುವ ಕಾರಣ ಭಾರತವು ಮತ್ತೆರಡು  ಚಿನ್ನದ ಪದಕಗಳ ನಿರೀಕ್ಷೆಯಲ್ಲಿದೆ.

 

 

source https://tv9kannada.com/sports/womens-world-boxing-championships-saweety-boora-nitu-ghanghas-clinch-gold-medals-zp-au50-543075.html

Views: 0

Leave a Reply

Your email address will not be published. Required fields are marked *