ಗಾಂಧಿನಗರದ ಸಮುದಾಯ ಭವನದಲ್ಲಿ “ವಿಶ್ವ ಕ್ಯಾನ್ಸರ್ ದಿನ”: ಆಚರಣೆ

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP)ಮೈಸೂರು ಮತ್ತು ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿನಗರದ ಸಮುದಾಯ ಭವನದಲ್ಲಿ “ವಿಶ್ವ ಕ್ಯಾನ್ಸರ್ ದಿನ” ವನ್ನು ಆಚರಿಸಿದರು.

2025ರ ವಿಶ್ವ ಕ್ಯಾನ್ಸರ್ ದಿನದವನ್ನು “ಯುನೈಟೆಡ್ ಬೈ ಯುನಿಕ್” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸುತ್ತಿದ್ದು, ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಜನರಿಗೆ ಇದರ ಕುರಿತು ಶಿಕ್ಷಣ ನೀಡಲಾಯಿತು.

ಗಾಂಧಿನಗರದ, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಯಮುನಾ ಪಿ.ಎಫ್ ಗೌಡ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಜನರು ತಮ್ಮ ಆರೋಗ್ಯದ ಕುರಿತು ತುಂಬಾ ಜಾಗೃತಿಯನ್ನು ವಹಿಸಬೇಕು. ಮುಖ್ಯವಾಗಿ ಕ್ಯಾನ್ಸರ್ ವಿಷಯಕ್ಕೆ ಬಂದಾಗ ಎಲ್ಲಾ ವರ್ಗದಲ್ಲೂ ನಾನಾ ವಿಧದ ಕ್ಯಾನ್ಸರ್ ರೋಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದು, ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚುವ ವಿಧಾನಗಳು ಮತ್ತು ಇರುವ ಚಿಕಿತ್ಸೆಗಳು ಹಾಗೂ ಕ್ಯಾನ್ಸರ್ ರೋಗ ಬಾರದಂತೆ ತಡೆಗಟ್ಟಲು ಇರುವ ವಿವಿಧ ಚಿಕಿತ್ಸೆ ವಿಧಾನಗಳು ಮತ್ತು ಮುಂಜಾಗ್ರತ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು. ಕ್ಯಾನ್ಸರ್ ನ ವಿವಿಧ ಹಂತಗಳನ್ನು ವಿವರಿಸುತ್ತಾ ಜನರು ಕ್ಯಾನ್ಸರ್ ರೋಗ ಬಂದ ಕೂಡಲೇ ಅದಕ್ಕಾಗಿ ಗಾಬರಿ ಪಡುವ ಅವಶ್ಯಕತೆ ಇಲ್ಲ ಮತ್ತು ಕ್ಯಾನ್ಸರ್ ರೋಗಿಗಳನ್ನು ಪ್ರತ್ಯೇಕವಾಗಿ ನೋಡಬಾರದು ಎಂದು ತಿಳಿಸಿದರು. ಜನರು ಸರಕಾರಿ ಆಸ್ಪತ್ರೆಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು, ಸರಕಾರಿ ಆಸ್ಪತ್ರೆಗಳಲ್ಲೂ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ನುರಿತ ವೈದ್ಯರುಗಳು ಇದ್ದು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಕ್ಯಾನ್ಸರ್ ಕುರಿತು ಮಾಹಿತಿಯನ್ನು ನೀಡಲು ನುರಿತ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೈಸೂರಿನ ನಿವೃತ್ತ ಹಿರಿಯ ಕ್ಲಿನಿಕಲ್ ಸಂಶೋಧನಾ ವೈದ್ಯರು ಡಾ. ವಿಜಯ ಶ್ರೀನಿವಾಸ ಇವರು ಮಾತನಾಡುತ್ತಾ ಕ್ಯಾನ್ಸರ್ ಹೇಗೆ ಹರಡುತ್ತದೆ, ಕ್ಯಾನ್ಸರ್ ನ ವಿವಿಧ ಹಂತಗಳು, ಕ್ಯಾನ್ಸರ್ ಪತ್ತೆ ಮಾಡುವ ವಿಧಾನ, ಕ್ಯಾನ್ಸರ್ ನ ಚಿಕಿತ್ಸೆ ಕ್ರಮಗಳ ಕುರಿತು ತಿಳಿಸಿದರು. ಮುಖ್ಯವಾಗಿ ಮಹಿಳೆಯರಲ್ಲಿ ಬರುವ ಸ್ತನ ಕ್ಯಾನ್ಸರ್, ಗರ್ಭ ಕ್ಯಾನ್ಸರ್, ಬಾಯಿ/ಗಂಟಲು ಕ್ಯಾನ್ಸರ್ ಹೀಗೆ ಬೇರೆಬೇರೆ ರೀತಿಯ ಕ್ಯಾನ್ಸರ್ ಗಳ ಕುರಿತು ಮಾಹಿತಿಯನ್ನು ನೀಡುತ್ತಾ ಅವುಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕು, ಹೇಗೆ ಚಿಕಿತ್ಸೆಯನ್ನು ಪಡೆಯಬೇಕು, ಅದಕ್ಕೆ ಇರುವ ಮುಂಜಾಗ್ರತ ಕ್ರಮಗಳು ಮತ್ತು ಆಹಾರ ಪದ್ಧತಿ ಕುರಿತು ಮಾತನಾಡಿದರು. ಕ್ಯಾನ್ಸರ್ ಇರುವಂತಹ ರೋಗಿಗಳನ್ನು ಯಾವುದೇ ಕಾರಣಕ್ಕೂ ಪ್ರತ್ಯೇಕವಾಗಿ ನೋಡದೆ ಅವರಿಗೆ ಭಾವನಾತ್ಮಕ ಬೆಂಬಲ ಮತ್ತು ಪ್ರೀತಿಯನ್ನು ನೀಡುವ ಮೂಲಕ ಅವರನ್ನು ನಮ್ಮಲ್ಲಿ ಒಬ್ಬರು ಎನ್ನುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಶ್ರೀಮತಿ ಸರಸ್ವತಿ, ನಿರ್ದೇಶಕರು, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು ರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಂಸ್ಥೆಯು ಕಳೆದ 40 ವರ್ಷಗಳಿಂದ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಶಾಲೆ ಬಿಟ್ಟ ಮಕ್ಕಳನ್ನು ಪುನ ಶಾಲೆಗೆ ಸೇರಿಸುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಗುಣಾತ್ಮಕ ಶಿಕ್ಷಣ, ಹೀಗೆ ಕಾರ್ಯ ನಿರ್ವಹಿಸುತ್ತಿದೆ ಎಂದರು. ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಾಮುಖ್ಯತೆ ಕುರಿತು ಮಾತನಾಡುತ್ತಾ ಇವತ್ತು ನಾವು ಪ್ರಪಂಚದಾದ್ಯಂತ ಹಲವಾರು ಜನರು ಕ್ಯಾನ್ಸರ್ ಕಾಯಿಲೆಗಳಿಂದ ಬಳಲುತ್ತಿರುವುದನ್ನು ಕಾಣುತ್ತಿದ್ದೇವೆ ಮುಖ್ಯವಾಗಿ ಇವತ್ತು ನಮ್ಮ ಆಹಾರ ಪದ್ಧತಿ, ನಮ್ಮ ಜೀವನಶೈಲಿ ಮತ್ತು ಕೆಲವು ದುಶ್ಚಟಗಳು ಹಾಗೂ ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಕೊಡದೆ ಇರುವುದರಿಂದ ಇವತ್ತು ಜನರಲ್ಲಿ ನಾನಾ ರೀತಿಯ ಕ್ಯಾನ್ಸರ್ ಕಾಯಿಲೆಗಳು ಪತ್ತೆಯಾಗುತ್ತಿವೆ. ಜನರು ಕ್ಯಾನ್ಸರ್ ಕುರಿತು ಜಾಗೃತರಾಗಬೇಕು ಯಾವುದೇ ಕಾರಣಕ್ಕೂ ಈ ಕಾಯಿಲೆಯ ಬಗ್ಗೆ ಹೆದರಿಕೊಳ್ಳದೆ ಧೈರ್ಯವಾಗಿ ಈ ಕಾಯಿಲೆಯನ್ನು ಎದುರಿಸಬೇಕು ಎಂದು ತಿಳಿಸಿದರು. ಸಂಸ್ಥೆಯು ಗ್ರಾಮೀಣ ಜನರಲ್ಲಿ ಮುಖ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತಿರುವ ಕ್ಯಾನ್ಸರ್ ಕಾಯಿಲೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ ಆರೋಗ್ಯ ಇಲಾಖೆ ಮತ್ತು ಸರಕಾರದೊಂದಿಗೆ ಕೈಜೋಡಿಸಿ ಜನರಲ್ಲಿ ಇಂಥ ಖಾಯಿಲೆಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಅವುಗಳಿಗೆ ಚಿಕಿತ್ಸೆ ಮಾಡುವ ನಿಟ್ಟಿನಲ್ಲಿ ಸಂಸ್ಥೆಯು ತಳಮಟ್ಟದಲ್ಲಿ ಜನರಿಗೆ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ.ವಿಶ್ವ, ಕಾರ್ಯದರ್ಶಿಗಳು, ಸಮುದಾಯ ಭವನ ಗಾಂಧಿನಗರ. ಶ್ರೀಮತಿ.ಚಂದ್ರಮ್ಮ, ಖಜಾಂಜಿ, ಧ್ವನಿ ಮಹಿಳಾ ಒಕ್ಕೂಟ ಇವರುಗಳು ಉಪಸಧರಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ.ವಿಶ್ವ, ಕಾರ್ಯದರ್ಶಿಗಳು, ಸಮುದಾಯ ಭವನ ಗಾಂಧಿನಗರ. ಶ್ರೀಮತಿ.ಚಂದ್ರಮ್ಮ, ಖಜಾಂಜಿ, ಧ್ವನಿ ಮಹಿಳಾ ಒಕ್ಕೂಟ ಇವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಮಾರು 120ಕ್ಕೂ ಹೆಚ್ಚಿನ ಮಹಿಳೆಯರು, ಸಂಸ್ಥೆಯ ಸಂಯೋಜಕರುಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *