
2023 ರ ಐಸಿಸಿ ಏಕದಿನ ವಿಶ್ವಕಪ್‌ನ (World Cup 2023) ಆತಿಥ್ಯವನ್ನು ವಹಿಸಿಕೊಂಡಿರುವ ಭಾರತ 2011ರ ನಂತರ ಮೊದಲ ಬಾರಿಗೆ ಐಸಿಸಿ ಟೂರ್ನಿಯ ಆತಿಥ್ಯ ವಹಿಸುವ ಗೌರವಕ್ಕೆ ಪಾತ್ರವಾಗಿದೆ. ಈ ಮಹಾಸಮರವನ್ನು ಅಕ್ಟೋಬರ್-ನವೆಂಬರ್ ನಡುವೆ ಆಯೋಜಿಸಲಾಗುತ್ತಿದೆ. ಈ ಟೂರ್ನಿಗೆ ಒಟ್ಟು 8 ತಂಡಗಳು ನೇರ ಪ್ರವೇಶ ಪಡೆದಿವೆ. ಇದರಲ್ಲಿ ಟೀಂ ಇಂಡಿಯಾ (Team India) ಜೊತೆಗೆ ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೇರಿವೆ. ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದ್ದು, ಇನ್ನೂ 2 ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಿ ವಿಶ್ವಕಪ್‌ಗೆ ಎಂಟ್ರಿಕೊಡಲಿವೆ. ಸದ್ಯ ಬಾಂಗ್ಲಾದೇಶ ಮತ್ತು ಐರ್ಲೆಂಡ್ ನಡುವಿನ 3 ಏಕದಿನ ಸರಣಿ ಪೂರ್ಣಗೊಂಡಿದ್ದು ಇದರೊಂದಿಗೆ ವಿಶ್ವಕಪ್ ಸೂಪರ್ ಲೀಗ್ ಟೂರ್ನಿ ಅಂತ್ಯಗೊಂಡಿದೆ. ಈ ವಿಶ್ವಕಪ್ ಸೂಪರ್ ಲೀಗ್ ಸುತ್ತಿನ (World Cup Supple League round) ನಂತರ ಯಾವ 8 ತಂಡಗಳು ನೇರವಾಗಿ ವಿಶ್ವಕಪ್‌ಗೆ ಎಂಟ್ರಿಕೊಡಲಿವೆ ಎಂಬುದು ಸ್ಪಷ್ಟವಾಗಿದೆ. ಏಕದಿನ ಸರಣಿಯಲ್ಲಿ ಐರ್ಲೆಂಡ್ ತಂಡವನ್ನು ಮಣಿಸಿದ ಬಾಂಗ್ಲಾದೇಶ ವಿಶ್ವಕಪ್ ಟೂರ್ನಿಗೆ ನೇರ ಪ್ರವೇಶ ಪಡೆದಿದ್ದಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದೆ.
ಟೀಂ ಇಂಡಿಯಾ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ
ಐರ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು 4 ರನ್ಗಳಿಂದ ಜಯಿಸಿದ ಬಾಂಗ್ಲಾದೇಶ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾವನ್ನು ಹಿಂದಿಕ್ಕಿದೆ. ಸದ್ಯ ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಬಾಂಗ್ಲಾದೇಶ ಮೂರನೇ ಸ್ಥಾನಕ್ಕೆ ತಲುಪಿದ್ದು, ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
Asia Cup 2023: ಬಿಸಿಸಿಐಗೆ ಹಿನ್ನಡೆ; ಪಾಕಿಸ್ತಾನದ ಪರ ನಿಂತ ಶ್ರೀಲಂಕಾ- ಬಾಂಗ್ಲಾದೇಶ..!
10 ತಂಡಗಳ ನಡುವೆ ಹೋರಾಟ
ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲೇ ಹೇಳಿದಂತೆ 10 ತಂಡಗಳು ಆಡಲಿದ್ದು, ಈಗ ನೇರವಾಗಿ ಟೂರ್ನಿಗೆ ಎಂಟ್ರಿಕೊಟ್ಟಿರುವ 8 ತಂಡಗಳನ್ನು ಹೊರತುಪಡಿಸಿ ಉಳಿದ 2 ತಂಡಗಳು ವಿಶ್ವಕಪ್ ಕ್ವಾಲಿಫೈಯರ್ ಸುತ್ತಿನಲ್ಲಿ ನಿರ್ಧಾರವಾಗಲಿವೆ. ಈ ಸುತ್ತಿನಲ್ಲಿ ವಿಂಡೀಸ್, ಶ್ರೀಲಂಕಾ, ಐರ್ಲೆಂಡ್, ಜಿಂಬಾಬ್ವೆ, ನೆದರ್ಲ್ಯಾಂಡ್ಸ್, ನೇಪಾಳ, ಓಮನ್, ಸ್ಕಾಟ್ಲೆಂಡ್, ಯುಎಇ ಮತ್ತು ಯುಎಸ್ಎ ಸೇರಿದಂತೆ 10 ತಂಡಗಳು ಈ 2 ಸ್ಥಾನಗಳಿಗಾಗಿ ತೀವ್ರ ಹೋರಾಟವನ್ನು ನೆಡಸಲಿವೆ. ಈ ಅರ್ಹತಾ ಸುತ್ತು ಜೂನ್ 18 ರಿಂದ ಆರಂಭವಾಗಲಿದೆ.
ಏತನ್ಮಧ್ಯೆ, ವೆಸ್ಟ್ ಇಂಡೀಸ್ ತಂಡವು ಈ ಬಾರಿಯ ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ತಮ್ಮ ತಂಡವನ್ನು ಪ್ರಕಟಿಸಿದೆ. ಅಲ್ಲದೆ, ವಿಂಡೀಸ್ ಕ್ರಿಕೆಟ್ ಮಂಡಳಿಯು ಡ್ಯಾರೆನ್ ಸಾಮಿ ಅವರನ್ನು ಏಕದಿನ ಮತ್ತು ಟಿ20 ಮಾದರಿಗಳಿಗೆ ಕೋಚ್ ಆಗಿ ನೇಮಿಸಿದೆ. ಡ್ಯಾರೆನ್ ಸಾಮಿ ವೆಸ್ಟ್ ಇಂಡೀಸ್ ತಂಡವನ್ನು ಎರಡು ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ್ದರು. ಹೀಗಾಗಿ ಇದೀಗ ವಿಂಡೀಸ್ ತಂಡವನ್ನು ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸುವ ಜವಾಬ್ದಾರಿ ಸಾಮಿ ಮೇಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ