ಆಯುಷ್ ಇಲಾಖೆ ಸಹಯೋಗದಲ್ಲಿ ಡಿ.21ರಂದು ವಿಶ್ವ ಧ್ಯಾನ ದಿನಾಚರಣೆ: ಡಾ.ಶಿವಕುಮಾರ್ (ಆಯುಷ್ ಇಲಾಖೆ ಹಿರಿಯ ವೈದ್ಯಾಧಿಕಾರಿ)
ಚಿತ್ರದುರ್ಗ, ಡಿ.14
ಇದೇ ಡಿಸೆಂಬರ್ 21ರ ಭಾನುವಾರ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಧ್ಯಾನ ದಿನಾಚರಣೆ ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಚಿತ್ರದುರ್ಗದಲ್ಲಿಯೂ ಐತಿಹಾಸಿಕ ಶ್ರೀ ಮುರುಘಾ ಮಠದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆದಿ ಯೋಗಿ ಧ್ಯಾನಾಮೃತ ಪಿರಮಿಡ್ ಧ್ಯಾನ ಕೇಂದ್ರ, ಚಿತ್ರದುರ್ಗ ಇವರ ವತಿಯಿಂದ ಬೆಳಿಗ್ಗೆ 9.30ರಿಂದ ಧ್ಯಾನ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಚಂದ್ರಕಾಂತ ನಾಗಸಮುದ್ರ ಸೇರಿದಂತೆ ಇಲಾಖೆಯ ಎಲ್ಲಾ ವೈದ್ಯಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.
2ನೇ ವಿಶ್ವ ಧ್ಯಾನ ದಿನಾಚರಣೆಯ ಪೂರ್ವಭಾವಿಯಾಗಿ ಶನಿವಾರ ಶ್ರೀ ಮುರುಘಾ ಮಠದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿತ್ರದುರ್ಗದ ಎಲ್ಲಾ ಯೋಗ ಹಾಗೂ ಇತರೆ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕರಲ್ಲಿ ಧ್ಯಾನದ ಮಹತ್ವ ಹಾಗೂ ದೈವತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಧ್ಯಾನ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಶ್ರೀ ಬಸವಕುಮಾರಸ್ವಾಮಿ ಮಾತನಾಡಿ, ಧ್ಯಾನವು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆ ಹೆಚ್ಚಿಸುವುದರ ಜೊತೆಗೆ ಮಾನಸಿಕ ಸ್ಥಿರತೆಯನ್ನು ಒದಗಿಸುತ್ತದೆ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿ ಆಗಿದ್ದು, ಜಾಗತಿಕ ಸಾಮರಸ್ಯಕ್ಕೂ ಸಹಕಾರಿಯಾಗಲಿದೆ. ಇಂತಹ ಕಾರ್ಯಕ್ರಮಗಳಿಗೆ ಶ್ರೀ ಮುರುಘಾ ಮಠವು ಸದಾ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸ ಭಾಗವಹಿಸಲಿದ್ದು, ವಿವಿಧ ಕಡೆಗಳಿಂದ ಆಗಮಿಸುವ ಧ್ಯಾನಾಸಕ್ತರಿಗೆ ಶ್ರೀಮಠದ ವತಿಯಿಂದ ಉಚಿತ ಸಾರಿಗೆ ಮತ್ತು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ಡಿಸೆಂಬರ್ 21ರಂದು ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಅಯನಾಂತರ ಸಂಭವಿಸುವುದರಿಂದ ಇದು ವರ್ಷದ ಅತಿ ದೀರ್ಘ ರಾತ್ರಿ ಆಗಿರುತ್ತದೆ. ಈ ದಿನವನ್ನು ಆಂತರಿಕ ಚಿಂತನೆ ಮತ್ತು ಧ್ಯಾನಕ್ಕೆ ಅತ್ಯಂತ ಸೂಕ್ತವೆಂದು ಪರಿಗಣಿಸಿ ವಿಶ್ವ ಧ್ಯಾನ ದಿನಾಚರಣೆಯನ್ನು ಡಿಸೆಂಬರ್ 21ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಆದಿಯೋಗಿ ಧ್ಯಾನಾಮೃತ ಪಿರಮಿಡ್ ಧ್ಯಾನ ಕೇಂದ್ರದ ಡಾ. ಮಂಜುಳಾ, ರಶ್ಮಿ, ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.