✍️ ಲೇಖಕ: ಚೇತನ್ ಚನ್ನಮಲ್ಲಪ್ಪ
“ನೀವು ಕೇಳುತ್ತಿದ್ದೀರಿ ಆಕಾಶವಾಣಿ ಈಗ ಸಮಯ…”
ವಿಶ್ವ ರೇಡಿಯೋ ದಿನ 13 ಫೆಬ್ರುವರಿ: ನಾವೆಲ್ಲ ನಿದ್ದೆಯಲ್ಲಿದ್ದಾಗಲೆ ಅಮ್ಮ ಬೆಳಗ್ಗೆ ಬೇಗನೇ ಎದ್ದು ದೇವರಿಗೆ ಕೈ ಮುಗಿದು ರೇಡಿಯೋ ಹಾಕಿ ತನ್ನ ಕೆಲಸಗಳನ್ನು ಮಾಡಲು ಮುಂದಾಗುತ್ತಿದ್ದಳು. ರೇಡಿಯೋ ಧ್ವನಿ ಕೇಳುತ್ತಲೇ ಹೊದ್ದ ಹೊದಿಕೆಯನ್ನು ಹತ್ತಿರಕ್ಕೆ ಎಳೆದುಕೊಂಡು, ಕಿವಿಗೆ ಏನೂ ಕೇಳದಂತೆ ಸುತ್ತಿಕೊಂಡು ಮತ್ತೆ ಮಲಗುತ್ತಿದ್ದೆವು. ರೇಡಿಯೋದ ಕಾರ್ಯಕ್ರಮಗಳು ಅದರೊಳಗೆ ನುಸುಳಿಕೊಂಡು ಬಂದು ಕೇಳಿಸುತ್ತಿತ್ತು. ಅದರಲ್ಲೂ ವಿಶೇಷವಾದ ಭಕ್ತಿಗೀತೆಗಳೋ ಇನ್ನಾವುದೋ ಹಾಡು, ಮಾತು-ಕತೆಗಳು ಕೇಳಿಬರುತ್ತಿದ್ದಾಗ ನಿದ್ದೆ ಮಾಯವಾಗಿ ರೇಡಿಯೋ ಕೇಳುತ್ತ ಒಂದ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದೆವು.
ನಿದ್ದೆಯಿಂದ ಎದ್ದಾಗಲೂ ನಮ್ಮ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳುತ್ತ ಕಾರ್ಯಕ್ರಮ ಆಲಿಸುತ್ತಿದ್ದೆವು. ‘ಪ್ರದೇಶ ಸಮಾಚಾರ’ ಆಸಕ್ತಿಯಿಂದ ಕೇಳುತ್ತಿದ್ದೆವು. ಸಂಸ್ಕೃತ ವಾರ್ತೆ ಬಂದರAತೂ ‘ಇತಿಃ ಸಂಸ್ಕೃತ ವಾರ್ತಾಹ ಪ್ರವಾಚಕ ಬಲದೇವಾನಂದ್ ಸಾಗರಃ’ ಎಂದು ನಾವೇ ಹೇಳುತ್ತಿದ್ದೆವು. ನಮಗೆ ಸಂಸ್ಕೃತದಲ್ಲಿ ಗೊತ್ತದ್ದ ಏಕೈಕ ಸಾಲು ಎಂದರೆ ಇದು ಮಾತ್ರ ಆಗಿತ್ತು. ಒಂದೆರಡು ಚಿತ್ರಗೀತೆಗಳು. ಹಾಡಿನ ಚಿತ್ರ, ಬರೆದವರು, ಸಂಗೀತ ನೀಡಿದವರು, ಹಾಡಿದವರ ವಿವರ ತಿಳಿಸುತ್ತಿದ್ದರು. ಒಂದು ರೀತಿ ನಮ್ಮ ಬುದ್ಧಿವಂತಿಕೆಯನ್ನು ಈ ವಿವರಗಳು ಹೆಚ್ಚಿಸುತ್ತಿದ್ದವು. ನಂತರ ಹಿಂದಿ ವಾರ್ತೆ ಆರಂಭವಾದರೆ ನಮ್ಮ ರೇಡಿಯೋ ಆಫ್ ಆಗಿತ್ತಿತ್ತು. ನಂತರ ಒಂದಿಷ್ಟು ಸಮಯದ ನಂತರ ಕನ್ನಡ ಕಾರ್ಯಕ್ರಮ ಪ್ರಸಾರ ಆರಂಭವಾಗುವ ಸಮಯಕ್ಕೆ ಮತ್ತೆ ರೇಡಿಯೋದ ಧ್ವನಿ ಕೇಳುತ್ತಿತ್ತು. ಆಗೆಲ್ಲ ರೇಡಿಯೋ ನಮ್ಮ ಬದುಕಿನ ಭಾಗವೇ ಆಗಿತ್ತು. ಆಗಾಗ ಸಿಲೋನ್ ರೇಡಿಯೋ, ನೇಪಾಳದ ರೇಡಿಯೋ ಸಿಗ್ನಲ್ ಕೂಡ ಸಿಗುತ್ತಿತ್ತು ಎಂದು ಅಮ್ಮ ಹೇಳುತ್ತಿದ್ದರು. ಅದರಲ್ಲೂ ಡಾ.ರಾಜ್ ಕುಮಾರ್ ಅವರ ಹಾಡುಗಳನ್ನು ಕೇಳುಗರ ಒತ್ತಾಯದ ಮೇರೆಗೆ ಹಾಕಿತ್ತಿದ್ದರಂತೆ.
ಚಿತ್ರದುರ್ಗ, ಭದ್ರಾವತಿ ರೇಡಿಯೋ ಕೇಂದ್ರದ ಕಾರ್ಯಕ್ರಮಗಳು ನಮಗೆ ಅಭ್ಯಾಸವಾಗಿದ್ದ ಸಮಯ. ಇಷ್ಟೆಲ್ಲ ರೇಡಿಯೋದ ಬಗ್ಗೆ ಹೇಳಲು ಕಾರಣ 13 ಫೆಬ್ರುವರಿ ‘ವಿಶ್ವರೇಡಿಯೋ ದಿನ’. ಇಂದಿನ ಸಾಮಾಜಿಕ ಜಾಲತಾಣ, ದೂರದರ್ಶನ, ಮುಂದುವರಿದ ತಂತ್ರಜ್ಞಾನದಿAದಾಗಿ ರೇಡಿಯೋ ಕೇಳುಗರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದೆನಿಸುತ್ತದೆ. ಆದರೆ ರೇಡಿಯೋದಲ್ಲಿ ಭಿತ್ತಿರಿಸುವ ಕಾರ್ಯಕ್ರಮಗಳ ಮೂಲಕ ಇನ್ನೂ ಜನಮಾನಸದಲ್ಲಿ ತನ್ನ ಛಾಪನ್ನು ಹಾಗೆಯೇ ಉಳಿಸಿಕೊಂಡಿದೆ. ಇAದಿಗೂ ರೇಡಿಯೋದಲ್ಲಿ ಸುದ್ಧಿಗಳನ್ನು ಕೇಳುವಾಗ ಅದು ಬರೀ ಸುದ್ಧಿಯಾಗಿಯೇ ಕೇಳುತ್ತದೆ. ಇಂದಿನ ನ್ಯೂಸ್ ಚಾನಲ್ ಗಳ ರೀತಿಯಲ್ಲಿ ಅರಚಾಟ, ಕೂಗಾಟಗಳಿಲ್ಲದೇ, ಹೇಳಿದ ಸಾಲುಗಳನ್ನೇ ಮತ್ತೆಮತ್ತೇ ಹೇಳುತ್ತ ಹೇಳಬೇಕಾದ ವಿಷಯ ತಿಳಿಸಲು ಸತಾಯಿಸದೇ, ಬ್ರೇಕ್ ತೆಗೆದುಕೊಳ್ಳದೇ ಹೇಳಬೇಕಾದ ವಿಷಯವನ್ನು ಸರಿಯಾದ ರೀತಿಯಲ್ಲಿ ತಿಳಿಸುತ್ತಿದ್ದರು. ಇಂದಿಗೂ ಅದು ಮಾದರಿಯಾಗಿಯೇ ಉಳಿದಿದೆ.
ಮಾರ್ಕೋನಿ ರೇಡಿಯೋ ಕಂಡು ಹಿಡಿದ ಕಥೆಯನ್ನು ಕೇಳಿರುತ್ತೇವೆ. ಭಾರತದಲ್ಲಿ ಮೊದಲಬಾರಿಗೆ 1922ರಲ್ಲಿ ಬ್ರಿಟೀಷ್ ಸರ್ಕಾರದ ಸಮಯದಲ್ಲಿ ಆರಂಭವಾಯಿತು. ಮೈಸೂರು ರೇಡಿಯೋ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾ.ಕಸ್ತೂರಿ ಇವರು ರೇಡಿಯೋಗೆ ‘ಆಕಾಶವಾಣಿ’ ಎಂಬ ಪದವನ್ನು ಸೂಚಿಸಿದರು. ದೇಶದ ಮೊದಲ ರೇಡಿಯೋ ಕೇಂದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಕುವೆಂಪು ರವರು ಕವನವಾಚಿಸುವ ಮೂಲಕ ರೇಡಿಯೋ ಕೇಂದ್ರ ಆರಂಭವಾಯಿತು. ಹಾಗಾಗಿ ರೇಡಿಯೋದಲ್ಲಿ ಮೊದಲಬಾರಿಗೆ ಕನ್ನಡಿಗ ಎಂಬ ಕೀರ್ತಿಗೆ ಪಾತ್ರರಾದರು. ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಆಕಾಶವಾಣಿ ಕೇಂದ್ರಗಳು, ಎಫ್.ಎಂ ಕೇಂದ್ರಗಳು, ಸಮುದಾಯ ಬಾನುಲಿಗಳು ಹೀಗೆ ಹಲವು ರೀತಿಯಲ್ಲಿ ಇಂದು ನಮಗೆ ಸಿಗುತ್ತವೆ. ಪ್ರತಿಯೊಂದ ಕಾರ್ಯಕ್ರಮಗಳು ಭಿನ್ನವಾಗಿವೆ. ಮನೋರಂಜನೆ, ಹಾಡು, ಸಂಗೀತ, ಸುದ್ಧಿ ಸಮಾಚಾರ, ಮಾಹಿತಿ, ರೈತರಿಗೆ ಉಪಯುಕ್ತ ಮಾಹಿತಿ, ಸಮುದಾಯವನ್ನು ಒಳಗೊಂಡ ವಿಶೇಷ ಕಾರ್ಯಕ್ರಮ… ಹೀಗೆಹಲವಾರು ಕಾರ್ಯಕ್ರಮಗಳು ಮೂಡಿ ಬರುತ್ತಲೇ ಇರುತ್ತವೆ.
ಇಂದಿಗೂ ಅದೆಷ್ಟೋ ಕಡೆ ಕೆಲಸ ಮಾಡುವವರು ರೇಡಿಯೋ ಹಾಕಿಕೊಂಡು ತಮ್ಮ ಕೆಲಸ ತಾವು ಮಾಡುತ್ತಲೇ ಇರುತ್ತಾರೆ. ಒಂದೆಡೆ ಕಲಸ ನಿರಂತರವಾಗಿ ಸಾಗುತ್ತಿದ್ದರೆ ಮತ್ತೊಂದೆಡೆ ಕಾರ್ಯಕ್ರಮಗಳನ್ನು ಕೇಳುತ್ತಲೇ ಇರುತ್ತಾರೆ. ಕೆಲಸದ ಸಮಯದ ಬೇಸರವನ್ನು ಇದು ಮರೆಮಾಡುತ್ತದೆ. ಶ್ರವ್ಯ ಮಾಧ್ಯಮಕ್ಕೆ ಶ್ರೋತೃಗಳ ಸಂಖ್ಯೆ ಸದಾ ಹೆಚ್ಚುತ್ತಲೇ ಇದೆ. ಇಂದಿಗೂ ಮನೆಯಲ್ಲಿ ಗೃಹಿಣಿಯರು ರೇಡಿಯೋ ಕೇಳುತ್ತಲೇ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಇದರಲ್ಲಿ ಸಿನಿಮಾ ಗೀತೆಗಳು ಮೂಡಿಬಂದರೆ ಹಬ್ಬವೋ ಹಬ್ಬ. ಭಾನುವಾರ ಮಧ್ಯಹ್ನಾ ಚಲನಚಿತ್ರ ಪ್ರಸಾರವಾಗುವ ಸಮಯ. ರೇಡಿಯೋದಲ್ಲಿ ಬರೀ ಧ್ವನಿಯನ್ನು ಕೇಳುತ್ತಲೇ ನಮ್ಮ ಮನದ ಕಲ್ಪನೆಯಲ್ಲಿ ಚಿತ್ರ ಸಾಗುತ್ತಿರುತ್ತಿತ್ತು.
ಇನ್ನೂ ಕೇಳುಗರು ಬರೆದ ಪತ್ರಕ್ಕೆ ಉತ್ತರಿಸುವ ಮೂಲಕ, ಅವರ ಬೇಡಿಕೆಯ ಹಾಡುಗಳನ್ನು ಪ್ರಸಾರ ಮಾಡುವಾಗಲಂತೂ, ‘ಇದು ನಾವು ಬರೆದ ಪೋಸ್ಟ್. ನಮ್ಮ ಮನೆಯ ಎಲ್ಲರ ಹೆಸರನ್ನು ಹೇಳುತ್ತಾರೆ ಕೇಳಿ’ ಎಂದಾಗ, ಆಕಾಶವಾಣಿ ಕೇಳುವ ಎಲ್ಲರಿಗೂ ನಮ್ಮ ಹೆಸರು, ಊರು ಎಲ್ಲರಿಗೂ ಹೇಳಿದಂತೆ ಆಗ ಆಗುತ್ತಿದ್ದ ಆನಂದವೇ ಬೇರೆ. ‘ನೇರಫೋನ್ ಇನ್’ ಕಾರ್ಯಕ್ರಮಕ್ಕೆ ಕಾಲ್ ಮಾಡಿ ಮಾತನಾಡುವಾಗ ಕುಟುಂಬದ ಎಲ್ಲರೂ ಎದುರಿಗಿಂತ ರೇಡಿಯೋದಲ್ಲಿ ಧ್ವನಿ ಕೇಳುವುದೇ ಚೆಂದ ಎನಿಸಿದ ಕಾಲ. ಯುವ ಪ್ರತಿಭೆಗಳ ಸಂದರ್ಶನ, ಕೃಷಿಕ್ಷೇತ್ರದ ತಿಳಿಯಲು, ಜನಪದ, ಸಂಸ್ಕೃತಿಗಳ ಬಗ್ಗೆ ಪರಿಚಯ, ಸೋಬಾನೆ ಪದಗಳು, ಸಂಸ್ಕೃತ ಕಲಿಕೆ, ವ್ಯಕ್ತಿಪರಿಚಯ ಹೀಗೆ ಹತ್ತುಹಲವು ಕಾರ್ಯಕ್ರಮಗಳನ್ನು ಕೇಳಿಸಿಕೊಳ್ಳುವ ಅವಕಾಶ ರೇಡಿಯೋದಿಂದ ಸಿಗುತ್ತಿತ್ತು. ಮೊಟ್ಟ ಮೊದಲ ಬಾರಿಗೆ ನಾವು ಬರೆದ ಪತ್ರವನ್ನು ಓದಿ ‘ಈ ಹಾಡನ್ನು ಪ್ರಸಾರ ಮಾಡಿ ಎಂದು ಕೇಳಿರುವ ಶ್ರೋತೃಗಳೆಂದರೆ…’ ಎಂದು ನಮ್ಮ ಕುಟುಂಬದ ಸದಸ್ಯರ ಹೆಸರನ್ನು ಹೇಳಿದಾಗ ಆದ ಆನಂದವೇ ಬೇರೆ. ಜೊತೆಗೆ ಒಮ್ಮೆ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಕಾಲ್ ಮಾಡಿ ಶಿವಮೊಗ್ಗದ ಸ್ಕೌಟ್ ಮತ್ತು ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತರಾಗಿದ್ದ ಟಿ.ವಿ.ನಾರಾಯಣಶಾಸ್ತಿç ಅವರೊಂದಿಗೆ ಮಾತನಾಡಿದ್ದು, ಅದರ ಮೂಲಕ ಸ್ಕೌಟಿಂಗ್ ಚಟುವಟಿಕೆಗಳಲ್ಲಿ ತೊಡಿಸಿಕೊಂಡದ್ದನ್ನು ಮರೆಯಲಾಗುವುದಿಲ್ಲ. ಆಕಾಶವಾಣಿ ಭದ್ರಾವತಿ ಆಯೋಜಿಸಿದ್ದ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದಾಗ ಆಕಾಶವಾಣಿ ಕೇಂದ್ರದ ಪರಿಚಯವೇ ಆಯಿತು. ಮೊದಲಬಾರಿಗೆ ಕೆಂದ್ರವನ್ನು, ಕಾರ್ಯಕ್ರಮಗಳು ಹೇಗೆಲ್ಲಾ ಸಿದ್ಧಗೊಳ್ಳುತ್ತವೆ ಎಂಬುದನ್ನು ನೋಡಿದೆವು. ಯುವವಾಣಿ ಕಾರ್ಯಕ್ರಮದಲ್ಲಿ ಸಂದರ್ಶನಕ್ಕೆ ಎಂದು ಆಹ್ವಾನ ಬಂದಾಗ ಕುಣಿದು ಕುಪ್ಪಳಿಸಿದ್ದು, ರೆಕಾರ್ಡ್ ಮಾಡುವಾಗಿ ಪಡೆದುಕೊಂಡ ಸಲಹೆ, ಸೂಚನೆಗಳನ್ನು ಎಂದಿಗು ಮರೆಯಲಾಗುವುದಿಲ್ಲ.
4 ವರ್ಷಗಳ ಹಿಂದೆ ಆರಂಭವಾದ ರೇಡಿಯೋ ಶಿವಮೊಗ್ಗ 90.8ಎಫ್.ಎಂ ಸಮುದಾಯ ಬಾನುಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗುರುಗಳಾದ ಅಜೇಯಸಿಂಹ ಅವರಿಂದ ಅಲ್ಲಿಗೆ ಭೇಟಿಕೊಡುವಂತಾಯಿತು. ಜೊತೆಗೆ ಒಂದಿಷ್ಟು ಕಾರ್ಯಕ್ರಮಗಳನ್ನು ನೀಡುವಂತಾಯಿತು. ಇದರಿಂದಾಗಿ ರೇಡಿಯೋ ಇನ್ನಷ್ಟು ಹತ್ತಿರವಾಯಿತು. ರೇಡಿಯೋ ಕೇಂದ್ರದಲ್ಲಿ ಒಬ್ಬನಾಗುವ ಅವಕಾಶ ಸಿಕ್ಕಾಗ ಅನಿಸಿದ್ದು, ಬಾಲ್ಯದಲ್ಲಿ ರೇಡಿಯೋ ಕೇಳುವಾಗ ಅನಿಸಿದ್ದು, ಈಗ ರೇಡಿಯೋ ಕೇಂದ್ರದಲ್ಲಿ ಹಲವಾರು ಕಾರ್ಯಕ್ರಮದ ಭಾಗವಾಗಿರುವುದು ಎಷ್ಟೊಂದು ಬದಲಾವಣೆ ಆಯಿತಲ್ಲ. ಕಾರ್ಯಕ್ರಮ ಕೇಳುತ್ತಿದ್ದ ಸಮಯದಿಂದ ಹಿಡಿದು ಇಂದು ಕಾರ್ಯಕ್ರಮ ನೀಡುವ ಹಂತಕ್ಕೆ ಬಂದು ಪ್ರತಿನಿತ್ಯವೂ ರೇಡಿಯೋ ನಮ್ಮ ಧ್ವನಿ ಕೇಳುವುದು ಅದೊಂತರ ಸಮಾಧಾನ, ಹೆಮ್ಮೆಯ ಭಾವ. ಕಾರ್ಯಕ್ರಮ ನೀಡಲು ನಿರಂತರ ಓದು, ಅಧ್ಯಯನ ಸಾಗುವ ಮೂಲಕ ನಾವು ನಿಂತ ನಿರಾಗದೇ ಸದಾ ಚಲನಶೀಲರಾಗಿರಬೇಕು ಎಂಬುದನ್ನು ರೇಡಿಯೋ ಕಲಿಸಿದೆ, ಕಲಿಸುತ್ತ ಇದೆ.
ಧಾವಂತದ ಇಂದಿನ ದಿನಗಳಲ್ಲೂ ರೇಡಿಯೋ ಕೇಳುಗರಿದ್ದಾರೆ, ಕಾರ್ಯಕ್ರಮಕ್ಕೆ ಸ್ಪಂದನೆ ನೀಡುತ್ತಿದ್ದಾರೆ. ತಾವು ಆಸಕ್ತಿಯಿಂದ ಭಾಗವಹಿಸುವ, ಕಾರ್ಯಕ್ರಮ ಕೇಳುವುದರ ಮೂಲಕ ಪ್ರತಿಕ್ರಿಯಿಸುವುದನ್ನು ಕಂಡಾಗ ರೇಡಿಯೋ ಮೂಲೆಗುಂಪಾಗಿಲ್ಲ, ಮೂಲೆಯಲ್ಲಿರುವವರನ್ನು ತಲುಪುತ್ತಿದೆ. ಮನೆಯ ಮೂಲೆಯಲ್ಲಿದ್ದ ರೇಡಿಯೋ ಮೊಬೈಲ್ ನಲ್ಲೂ ಕೇಳಸಿಗುತ್ತಿದೆ. ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡವರಿಗೆ ಕೊಂಚ ವಿರಾಮ ನೀಡುತ್ತಿದೆ, ಒಳ್ಳೊಳ್ಳೆಯ ಕಾರ್ಯಕ್ರಮಗಳ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸುತ್ತಿದೆ ಇದು ನಿರಂತರವಾಗಿರಲಿ ಎನ್ನುವಾಗಲೂ ದೂರದಿಂದ, ‘ನೀವು ಕೇಳುತ್ತಿದ್ದೀರಿ ಆಕಾಶವಾಣಿ ಈಗ ಸಮಯ…’ ಎಂದಾಗ ಆ ಸಾಲುಗಳು ಸದಾ ನಮ್ಮೊಳಗೆ ಕಲ್ಪನಾಲೋಕವನ್ನು ವಿಸ್ತರಿಸುತ್ತವೆ ಎಂಬುದAತೂ ಸುಳ್ಳಲ್ಲ…

ಚೇತನ್ ಚನ್ನಮಲ್ಲಪ್ಪ
ಗ್ರಂಥಫಾಲಕರು
ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಗಳು
![]()