“ವಿದ್ಯಾ ವಿಕಾಸ ಶಾಲೆಯಲ್ಲಿ ಇಸ್ರೋ ವಿಜ್ಞಾನಿಗಳೊಂದಿಗೆ ‘ವಿಶ್ವ ಬಾಹ್ಯಾಕಾಶ ಸಪ್ತಾಹ–2025’ ವಿಜ್ಞಾನ ಉತ್ಸವ”

ಚಿತ್ರದುರ್ಗ ಅ. 08 ವಿಶ್ವ ಬಾಹ್ಯಾಕಾಶ ಸಪ್ತಾಹ–2025 (“World Space Week–2025”) ಕಾರ್ಯಕ್ರಮವನ್ನು ಬೆಂಗಳೂರು ಇಸ್ರೋ–ಉಪಗ್ರಹ ಕೇಂದ್ರ (ISRO–URSC) ಹಾಗೂ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ಚಿತ್ರದುರ್ಗದ ವಿದ್ಯಾ ವಿಕಾಸ ಆಂಗ್ಲ ಪ್ರೌಢಶಾಲೆಯಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಇಸ್ರೋದ ಹಿರಿಯ ವಿಜ್ಞಾನಿಗಳಾದ ಶ್ರೀ ಶಿವಾನಂದ ಕಾಮತ್, ಶ್ರೀಮತಿ ಸುಮಾ ಹಿರೇಮಠ್, ಶ್ರೀ ಬಾಲಾಜಿ ಆರ್., ಶ್ರೀ ಗೋವಿಂದರಾಜ ಟಿ.ಎಸ್., ಹಾಗೂ ಶ್ರೀಮತಿ ಸುಮಾ ಎಸ್. ಲೊಂಕಡಿ ಅವರು ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಬಾಹ್ಯಾಕಾಶ ವಿಜ್ಞಾನ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡರು. ಚಿತ್ರದುರ್ಗ ವಿಜ್ಞಾನ ಫೌಂಡೇಷನ್‌ನ ಹೆಚ್.ಎಸ್.ಟಿ.ಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ಬಿ. ವಿಜಯ ಕುಮಾರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಪೃಥ್ವೀಶ ಕೂಡ ಉಪಸ್ಥಿತರಿದ್ದರು.

ಶ್ರೀ ಶಿವಾನಂದ ಕಾಮತ್ ಅವರು ಮಾತನಾಡುತ್ತಾ, “ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ಪ್ರತಿ ವರ್ಷ ಅಕ್ಟೋಬರ್ 4ರಿಂದ 10ರವರೆಗೆ ಆಚರಿಸಲಾಗುತ್ತದೆ. 1957ರ ಅಕ್ಟೋಬರ್ 4ರಂದು ಪ್ರಥಮ ಕೃತಕ ಉಪಗ್ರಹವನ್ನು ಉಡಾಯಿಸಿದ ದಿನದ ಸ್ಮರಣಾರ್ಥ ಈ ಆಚರಣೆ ಪ್ರಾರಂಭವಾಯಿತು. ಬಾಹ್ಯಾಕಾಶಕ್ಕೆ ಯಾವುದೇ ಗಡಿ ಇಲ್ಲದಿರುವುದರಿಂದ, ವಿಶ್ವದ 99 ರಾಷ್ಟ್ರಗಳು ಬಾಹ್ಯಾಕಾಶ ಬಳಕೆಯ ಕುರಿತು ಒಪ್ಪಂದಕ್ಕೆ ಬಂದಿವೆ” ಎಂದು ತಿಳಿಸಿದರು.

ಶ್ರೀ ಎಸ್.ಎಂ. ಪೃಥ್ವೀಶ ಅವರು, “ವಿಜ್ಞಾನ ಮಾನವ ಜೀವನದ ಅನಿವಾರ್ಯ ಅಂಗವಾಗಿದೆ. ಸಂವಹನದಿಂದ ಅಂತರಿಕ್ಷದ ಅಧ್ಯಯನವರೆಗೂ ಎಲ್ಲೆಡೆ ವಿಜ್ಞಾನವೇ ಆಧಾರ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಕಾರ್ಯದರ್ಶಿ ಬಿ. ವಿಜಯ ಕುಮಾರ್ ಅವರು ಚಂದ್ರಯಾನ, ಉಪಗ್ರಹ ಮಾದರಿಗಳ ಪ್ರದರ್ಶನ ಹಾಗೂ ವಿಜ್ಞಾನ ವಸ್ತುಗಳ ವೀಕ್ಷಣೆಯನ್ನು ವಿದ್ಯಾರ್ಥಿಗಳು ಪ್ರಯೋಜನಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಸ್ರೋ ವಿಜ್ಞಾನಿಗಳ ತಂಡವು “ವಿಜ್ಞಾನ ಮತ್ತು ಬಾಹ್ಯಾಕಾಶ” ವಿಷಯದ ಮೇಲೆ ಹಲವು ಸ್ಪರ್ಧೆಗಳು ಮತ್ತು ಪ್ರದರ್ಶನಗಳನ್ನು ಹಮ್ಮಿಕೊಂಡಿತ್ತು. 5, 6, 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮೆಮೋರಿ ಟೆಸ್ಟ್, 8, 9, 10ನೇ ತರಗತಿ ಮಕ್ಕಳಿಗಾಗಿ ಪಿಕ್ ಅಂಡ್ ಸ್ಪೀಚ್ ಸ್ಪರ್ಧೆ ಹಾಗೂ ವಿಜ್ಞಾನ ರಸಪ್ರಶ್ನೆ ನಡೆಯಿತು. ಪ್ರತಿ ಶಾಲೆಯಿಂದ ವಿದ್ಯಾರ್ಥಿಗಳ ತಂಡಗಳು ಉತ್ಸಾಹದಿಂದ ಭಾಗವಹಿಸಿತು.

ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಸಭಾ ಕಾರ್ಯಕ್ರಮ ಹಾಗೂ ಸ್ಪರ್ಧೆಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇಸ್ರೋ ವತಿಯಿಂದ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣವನ್ನು ಶ್ರೀ ತಿಪ್ಪೇಸ್ವಾಮಿ ಎನ್.ಜಿ. ಅವರು ನಿರ್ವಹಿಸಿದರು. ಶಿಕ್ಷಕಿ ದೀಪಿಕಾ ಎಂ. ನಿರೂಪಣೆ ಹಾಗೂ ಶಿಕ್ಷಕಿ ಶ್ರೀನಿಧಿ ವಂದನೆ ಸಲ್ಲಿಸಿದರು.

Views: 182

Leave a Reply

Your email address will not be published. Required fields are marked *