WPL 2025 Auction: ಈ ದಿನಾಂಕದಂದು ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ ಮಿನಿ ಹರಾಜು.

ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಹಣದ ಸುರಿಮಳೆಯಾಯಿತು. ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಹರಾಜಿನ ಮೋಜು ಎದುರಾಗಲಿದ್ದು, ಮುಂದಿನ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ಗಾಗಿ ಮಹಿಳಾ ಕ್ರಿಕೆಟಿಗರ ಮಿನಿ ಹರಾಜು ನಡೆಯಲ್ಲಿದೆ. ಐಪಿಎಲ್ ನಂತರ, ಈಗ ಮಹಿಳಾ ಪ್ರೀಮಿಯರ್ ಲೀಗ್‌ನ ಹರಾಜು ದಿನಾಂಕದ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಆ ಪ್ರಕಾರ ಮಹಿಳೆಯರ ಪ್ರೀಮಿಯರ್ ಲೀಗ್​ನ ಮುಂದಿನ ಸೀಸನ್‌ಗಾಗಿ ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಮಿನಿ ಹರಾಜು ನಡೆಯಲಿದೆ.

ಮಹಿಳೆಯರ ಪ್ರೀಮಿಯರ್ ಲೀಗ್​ನಲ್ಲಿ ಒಟ್ಟು 5 ತಂಡಗಳು ಪಾಲ್ಗೋಳುತ್ತಿವೆ. ಅದರಲ್ಲಿ ಪ್ರತಿ ತಂಡವು ಆರು ವಿದೇಶಿ ಆಟಗಾರ್ತಿಯರನ್ನು ಒಳಗೊಂಡಂತೆ ಒಟ್ಟು 18 ಆಟಗಾರ್ತಿಯರನ್ನು ತಂಡದಲ್ಲಿ ಹೊಂದಿರಬೇಕು. ಇದೇ ತಿಂಗಳ ಆರಂಭದಲ್ಲಿ ಎಲ್ಲಾ ತಂಡಗಳು ತಮ್ಮ ಧಾರಣ ಪಟ್ಟಿಯನ್ನು ಪ್ರಕಟಿಸಿದ್ದವು. ಭಾಗಶಃ ತಂಡಗಳು ತಮ್ಮ ಕೋರ್ ತಂಡವನ್ನು ಉಳಿಸಿಕೊಂಡಿದ್ದು, ಕೆಲವೇ ಕೆಲವು ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿವೆ.

ಮಿನಿ ಹರಾಜಿನಲ್ಲಿ ಸ್ಟಾರ್ ಪ್ಲೇಯರ್ಸ್​

ಈ ಬಾರಿಯ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ನ್ಯೂಜಿಲೆಂಡ್ ವೇಗದ ಬೌಲರ್ ಲೀ ತಾಹುಹು, ವೆಸ್ಟ್ ಇಂಡೀಸ್ ಆಲ್ ರೌಂಡರ್ ಡೇಂಡ್ರಾ ಡಾಟಿನ್, ಭಾರತದ ಆಲ್ ರೌಂಡರ್ ಸ್ನೇಹ್ ರಾಣಾ, ಲೆಗ್ ಸ್ಪಿನ್ನರ್ ಪೂನಂ ಯಾದವ್ ಮತ್ತು ಕನ್ನಡತಿ ವೇದಾ ಕೃಷ್ಣಮೂರ್ತಿ ಕೂಡ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ ಹಲವು ಯುವ ಆಟಗಾರ್ತಿಯರ ಮೇಲೂ ತಂಡಗಳು ಕಣ್ಣಿಡಲಿವೆ.

ಯಾವ ತಂಡದ ಬಳಿ ಎಷ್ಟು ಹಣವಿದೆ

ವಾಸ್ತವವಾಗಿ ಡಬ್ಲ್ಯುಪಿಎಲ್​ ಹರಾಜಿನಲ್ಲಿ ಪ್ರತಿ ತಂಡಗಳ ಪರ್ಸ್​ ಗಾತ್ರ 15 ಕೋಟಿ ರೂ. ಇರಲಿದೆ. ಇದೀಗ ಮಿನಿ ಹರಾಜು ನಡೆಯುತ್ತಿರುವ ಕಾರಣ ಫ್ರಾಂಚೈಸಿಗಳ ಬಳಿ ಕಡಿಮೆ ಹಣವಿರಲಿದೆ. ಅದರಲ್ಲಿ ಗುಜರಾತ್ ಜೈಂಟ್ಸ್ ತಂಡವು ಗರಿಷ್ಠ 4.40 ಕೋಟಿ ರೂ.ಗಳೊಂದಿಗೆ ಹರಾಜಿಗೆ ಪ್ರವೇಶಿಸಲಿದ್ದು, ಈ ತಂಡವು ಕೇವಲ 4 ಸ್ಲಾಟ್​ಗಳನ್ನು ಭರ್ತಿ ಮಾಡಬೇಕಿದೆ. ಯುಪಿ ವಾರಿಯರ್ಸ್ ತಂಡದ ಬಳಿ 3.90 ಕೋಟಿ ರೂ. ಇದ್ದು, ಹರಾಜಿನಲ್ಲಿ ಗರಿಷ್ಠ 3 ಆಟಗಾರ್ತಿಯರನ್ನು ಖರೀದಿಸಬೇಕಾಗಿದೆ.

ಮತ್ತೊಂದೆಡೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಒಟ್ಟು 14 ಆಟಗಾರ್ತಿಯರನ್ನು ತಂಡದಲ್ಲಿ ಉಳಿಸಿಕೊಂಡಿಸಿದೆ. ಇದೀಗ ಅದರ ಬಳಿ 3.25 ಕೋಟಿ ರೂಪಾಯಿ ಉಳಿದಿದ್ದು, ಗರಿಷ್ಠ 4 ಆಟಗಾರ್ತಿಯರನ್ನು ಖರೀದಿಸಬಹುದಾಗಿದೆ. ಉಳಿದಂತೆ ಮುಂಬೈ ಇಂಡಿಯನ್ಸ್‌ ಬಳಿ 2.65 ಕೋಟಿ ರೂ. ಇದ್ದರೆ, ಡೆಲ್ಲಿ ತಂಡ 14 ಆಟಗಾರರನ್ನು ಉಳಿಸಿಕೊಂಡಿದ್ದು, ಅದರ ಬಳಿ ಕೇವಲ 2.5 ಕೋಟಿ ರೂ. ಹಣವಿದೆ.

Source : https://tv9kannada.com/sports/cricket-news/wpl-2025-mini-auction-to-be-held-on-december-15-in-bengaluru-psr-942150.html

Leave a Reply

Your email address will not be published. Required fields are marked *