WPL 2025 – ಮುಂಬಯಿ ಇಂಡಿಯನ್ಸ್ ಗೆ ಸವಾಲಾಗಿರುವ ಗುಜರಾತ್ ಜಯಂಟ್ಸ್‌ : ಗೆದ್ದವರಿಗೆ ಫೈನಲ್‌ ಟಿಕೆಟ್‌​

ಹೈಲೈಟ್ಸ್‌:

  • ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ ಡಬ್ಲ್ಯೂಪಿಎಲ್‌ ಎಲಿಮಿನೇಟರ್‌ ಪಂದ್ಯ
  • ಈ ಪಂದ್ಯದ ವಿಜೇತರು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣೆಸಬೇಕಿದೆ
  • ಮುಂಬೈ ಇಂಡಿಯನ್ಸ್ ಗೆ ಹರ್ಮನ್ ಪ್ರೀತ್ ನಾಯಕತ್ವದ ಬಲ ಮತ್ತು ತವರಿನ ಅಭಿಮಾನಿಗಳ ಬೆಂಬಲ

ಮುಂಬಯಿ: ಫೈನಲ್‌ ಪ್ರವೇಶಿಸುವ ಗುರಿಯೊಂದಿಗೆ ಮುಂಬಯಿ ಇಂಡಿಯನ್ಸ್‌ ಮತ್ತು ಗುಜರಾತ್‌ ಜಯಂಟ್ಸ್‌ ತಂಡಗಳು ಮಹಿಳಾ ಪ್ರೀಮಿಯರ್‌ ಲೀಗ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ಗುರುವಾರ ಮುಖಾಮುಖಿಯಾಗಲಿವೆ.

ಕಠಿಣ ಸಂದರ್ಭಗಳಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡುವ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ನಿರ್ಣಾಯಕ ಪಂದ್ಯದಲ್ಲಿ ಹೇಗೆ ಮುನ್ನಡೆಸುತ್ತಾರೆ ಎಂಬುದು ಕುತೂಹಲವಾಗಿದೆ. ಡಬ್ಲ್ಯೂಪಿಎಲ್‌ನ ಅಂಕಪಟ್ಟಿಯಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ 10 ಅಂಕಗಳನ್ನು ಕಲೆ ಹಾಕಿದ ನಂತರ ದಿಲ್ಲಿ ಕ್ಯಾಪಿಟಲ್ಸ್‌ ಸತತ ಮೂರನೇ ಬಾರಿ ಫೈನಲ್‌ ಪ್ರವೇಶಿಸಿದೆ. ಈಗ ಮತ್ತೊಂದು ಸ್ಥಾನಕ್ಕೆ ಟೀಮ್‌ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್‌ ಮತ್ತು ಗುಜರಾತ್‌ ತಂಡದ ನಾಯಕಿ ಆ್ಯಶ್ಲೀ ಗಾಡ್ರ್ನರ್‌ ನಡುವಿನ ಬಳಗದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಮುಂಬಯಿಗೆ ತವರಿನ ಲಾಭ

ಮಾಜಿ ಚಾಂಪಿಯನ್‌ ಮುಂಬಯಿ ತಂಡ ತವರಿನ ಲಾಭ ಹೊಂದಿದೆ. ಕಳೆದ ಸೋಮವಾರ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಲೀಗ್‌ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಅವರ ಅಬ್ಬರದ ಅರ್ಧ ಶತಕದ ನೆರವಿನಿಂದ ಗುಜರಾತ್‌ ವಿರುದ್ಧ ಮುಂಬಯಿ 9 ರನ್‌ಗಳ ಜಯಭೇರಿ ಬಾರಿಸಿದೆ. ಹೀಲಿ ಮ್ಯಾಥ್ಯೂಸ್‌ ತಮ್ಮ ಆಫ್‌ ಸ್ಪಿನ್‌ ಕೈಚಳಕದ ಮೂಲಕ ಎದುರಾಳಿ ತಂಡಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಈ ಮಧ್ಯೆ ಹಿಂದಿನ ಪಂದ್ಯದಲ್ಲಿ ಆಡಿದ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕಿಳಿಯಲು ಮುಂಬಯಿ ಯೋಜಿಸಿದೆ. ಈ ಋುತುವಿನಲ್ಲಿ ಗುಜರಾತ್‌ ತಂಡದ ವಿರುದ್ಧ ಹಿಂದಿನ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ನಂತರ ವೆಸ್ಟ್‌ ಇಂಡೀಸ್‌ ಆಲ್‌ರೌಂಡರ್‌ ಹೇಲಿ, ಮತ್ತೊಮ್ಮೆ ತಂಡಕ್ಕೆ ಮ್ಯಾಚ್‌ ವಿನ್ನರ್‌ ಆಗಿ ಕೊಡುಗೆ ನೀಡಲು ಎದುರು ನೋಡುತ್ತಿದ್ದಾರೆ.

ಕಳೆದ ತಿಂಗಳು ವಡೋದರಲ್ಲಿ ನಡೆದ ಪಂದ್ಯದಲ್ಲಿ 16ಕ್ಕೆ 3 ವಿಕೆಟ್‌ ಪಡೆದು ಗುಜರಾತ್‌ ಜಯಂಟ್ಸ್‌ ತಂಡದ ಬ್ಯಾಟಿಂಗ್‌ ಬೆನ್ನಲುಬನ್ನು ಮುರಿದಿದ್ದ ಅವರು, ಬ್ರೆಬೋರ್ನ್ನಲ್ಲಿ ನಡೆದ ಪಂದ್ಯದಲ್ಲೂ 3 ವಿಕೆಟ್‌ ಕಿತ್ತು ಮುಂಬಯಿ ತಂಡದ ಜಯದಲ್ಲಿಪ್ರಮುಖ ಪಾತ್ರ ವಹಿಸಿದ್ದರು.

ಉತ್ತಮ ಫಾರ್ಮ್ ನಲ್ಲಿ ಬ್ರಂಟ್

ಮುಂಬಯಿ ಪರ ನಾಲ್ಕು ಅರ್ಧ ಶತಕಗಳನ್ನು ಗಳಿಸಿರುವ ನ್ಯಾಟ್‌ ಸ್ಕಿವರ್‌ ಬ್ರಂಟ್‌, ಎಂಟು ಪಂದ್ಯಗಳಿಂದ 416 ರನ್‌ ಗಳಿಸಿದ್ದು, ಋುತುವಿನ ಅತ್ಯಧಿಕ ರನ್‌ ಗಳಿಸಿದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಸ್ಕಿವರ್‌ ಅವರನ್ನು ಗುಜರಾತ್‌ ಬೌಲರ್‌ಗಳು ಲಘುವಾಗಿ ಪರಿಗಣಿಸುವಂತಿಲ್ಲ. ಬೌಲಿಂಗ್‌ನಲ್ಲೂ ಅವರ ಪಾತ್ರವನ್ನು ಕಡೆಗಣಿಸಲಾಗದು. ಋುತುವಿನಲ್ಲಿ ಮುಂಬಯಿ ತಂಡದ ಯಶಸ್ಸಿನ ಓಟದಲ್ಲಿ ಮ್ಯಾಥ್ಯೂ ಜತೆ ಸ್ಕಿವರ್‌ ಪಾತ್ರ ಕೂಡ ಹಿರಿದಾಗಿದೆ.

ಈ ಋುತುವಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಫಾರ್ಮ್ ಕಳಪೆಯಾಗಿದ್ದರೂ ಸೋಮವಾರ ಗುಜರಾತ್‌ ವಿರುದ್ಧ ಸ್ಫೋಟಕ ಅರ್ಧ ಶತಕ ಗಳಿಸಿದ್ದರು. ಇದು ಎಲಿಮಿನೇಟರ್‌ ಪಂದ್ಯಕ್ಕೆ ಸಾಕಷ್ಟು ಆತ್ಮವಿಶ್ವಾಸವನ್ನು ವೃದ್ಧಿಸಿದೆ. ಹಾಲಿ ಋುತುವಿನಲ್ಲಿ ಬೆತ್‌ ಮೂನಿ ಅವರಿಂದ ನಾಯಕತ್ವ ಪಡೆದ ಗಾಡ್ರ್ನರ್‌, ಉದ್ಘಾಟನಾ ಆವೃತ್ತಿಯ ಚಾಂಪಿಯನ್‌ ತಂಡವನ್ನು ಅದರದ್ದೇ ನೆಲದಲ್ಲಿ ಸೋಲಿಸುವುದು ಸುಲಭವಾಗಿಲ್ಲಎಂಬುದನ್ನು ಚೆನ್ನಾಗಿ ಅರಿತಿದೆ. ಆರಂಭಿಕ ಹಿನ್ನಡೆಯ ಹೊರತಾಗಿಯೂ ಕ್ರಮೇಣ ಚೇತರಿಕೆ ಪ್ರದರ್ಶನ ನೀಡಿರುವ ಗುಜರಾತ್‌ ತಂಡ ಮಾಜಿ ಚಾಂಪಿಯನ್‌ಗೆ ಆಘಾತ ನೀಡಿ ಫೈನಲ್‌ ಪ್ರವೇಶಿಸಿದರೆ ಅಚ್ಚರಿ ಪಡಬೇಕಿಲ್ಲ.

  • ಪಂದ್ಯ ಆರಂಭ: ರಾತ್ರಿ 7.30ಕ್ಕೆ
  • ಸ್ಥಳ: ಬ್ರೆಬೋರ್ನ್ ಕ್ರೀಡಾಂಗಣ, ಮುಂಬಯಿ
  • ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್

Source : https://vijaykarnataka.com/sports/cricket/news/womens-premier-league-2025-mumbai-indians-vs-gujarat-giants-eliminator-match-preview/articleshow/118943351.cms

Leave a Reply

Your email address will not be published. Required fields are marked *