WPL 2025- ಅಂತಿಮ ಓವರ್ ನಲ್ಲಿ ಹೀಲಿ ಮ್ಯಾಥ್ಯೂಸ್ ಮ್ಯಾಜಿಕ್: ಗುಜರಾತ್ ವಿರುದ್ಧ ರೋಚಕ ಕಾದಾಟದಲ್ಲಿ ಗೆದ್ದ ಮುಂಬೈ

Mumbai Indians Vs Gujarat Giants : ಅಂತಿಮ ಓವರ್ ನಲ್ಲಿ ಗುಜರಾತ್ ಜೈಂಟ್ಸ್ ಗೆಲುವಿಗೆ ಬೇಕಿದ್ದುದು 13 ರನ್, ಕೈಯ್ಯಲ್ಲಿದ್ದುದು 3 ವಿಕೆಟ್. ಕ್ರೀಸಿನಲ್ಲಿದ್ದುದು ಸೆಟ್ ಆಗಿದ್ದ ಕನುಜಾ ಕನ್ವರ್ ಮತ್ತು ಸಿಮ್ರಾನ್ ಶೇಖ್. ನಾಯಕಿ ಹರ್ಮನ್ ಪ್ರೀತ್ ಕೌರ್ ಬೌಲಿಂಗ್ ಗೆ ಆಹ್ವಾನಿಸಿದ್ದು ಹೀಲಿ ಮ್ಯಾಥ್ಯೂಸ್ ಅವರನ್ನು. ಎಲ್ಲರೂ ಇದು ಗುಜರಾತ್ ಗೆ ಸುಲಭದ ಗೆಲುವು ಅಂದುಕೊಂಡಿದ್ದರು. ಆದರೆ ನಡೆದದ್ದೇ ಬೇರೆ! ಹೀಲಿ ಗುಜರಾತ್ ನ ಮೂರೂ ವಿಕೆಟ್ ಅನ್ನೂ ಕಬಳಿಸುವ ಮೂಲಕ ಮುಂಬೈ ತಂಡ 9 ರನ್ ಗಳಿಂದ ಜಯಭೇರಿ ಬಾರಿಸಿತು.

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಸಿಡಿಲಬ್ಬರದ ಅರ್ಧ ಶತಕ, ಸ್ಪಿನ್ನರ್ ಗಳಾದ ಹೀಲಿ ಮ್ಯಾಥ್ಯೂಸ್, ಅಮೇಲಿಯಾ ಕೆರ್ ಅವರ ಮಾರಕ ಹೌರ್ ನೆರವಿನಿಂದ ಮುಂಬಯಿ ಇಂಡಿಯನ್ಸ್‌ ತಂಡ ಮಹಿಳೆಯರ ಪ್ರೀಮಿಯರ್‌ ಲೀಗ್‌ನ 19ನೇ ಪಂದ್ಯದಲ್ಲಿ ಗುಜರಾಜ್‌ ಜೈಂಟ್ಸ್ ವಿರುದ್ಧ 9 ರನ್ ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ವಿರಾಜಮಾನವಾಗಿದೆ. ಮುಂಬೈಗೆ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವುದರಿಂದ ಪ್ರಥಮ ಸ್ಥಾನಿಯಾಗಲು ಅವಕಾಶ ಇದೆ.

ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 180 ಕಠಿಣ ಗುರಿ ಪಡೆದ ಗುಜರಾತ್ ಜೈಂಟ್ಸ್ ತೀವ್ರ ಹೋರಾಟ ನೀಡಿತಾದರೂ ನಿಗದಿತ 20 ಓವರ್ ಗಳು ಮುಗಿಯುವಾಗ 170 ರನ್ ಗಳಿಗೆ ಸರ್ನಪತನ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಬಾರತಿ ಫಾಲ್ಮುಲಿ ತೀವ್ರ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೇವಲ 25 ಎಸೆತಗಳಿಂದ 8 ಬೌಂಡರಿ ಮತ್ತು 4 ಸಿಕ್ಸರ್ ಗಳಿದ್ದ 61 ರನ್ ಹೊಡೆದ ಅವರು ಅಮೇಲಿಯಾ ಕೆರ್ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರು. ಅಲ್ಲಿಂದ ಬಳಿರ ಮುಂಬೈ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಮುಂಬೈ ಪರ ಅಮೇಲಿಯಾ ಕೆರ್ 34 ಕ್ಕೆ 3 ಮತ್ತು ಹೀಲಿ ಮ್ಯಾಥ್ಯೂಸ್ 38ಕ್ಕೆ 3 ವಿಕೆಟ್ ಕಬಳಿಸಿದರು.

ಮುಂಬೈನಿಂದ ಸವಾಲಿನ ಮೊತ್ತ

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ಮುಂಬಯಿ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 179 ರನ್‌ ಸಿಡಿಸಿತು. ಐದು ತಂಡಗಳ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್‌ ಪ್ರವೇಶಿಸುವ ಗುರಿ ಹೊಂದಿರುವ ಮುಂಬಯಿ, 46ಕ್ಕೆ ಅಗ್ರ ಕ್ರಮಾಂಕ ಇಬ್ಬರನ್ನು ಕಳೆದುಕೊಂಡು ಹಿನ್ನಡೆ ಕಂಡಿತು. ಅಮೆಲಿಯಾ ಕೆರ್‌ (5) ಮತ್ತು ಹೀಲಿ ಮ್ಯಾಥ್ಯೂಸ್‌(27) ಸಣ್ಣ ಮೊತ್ತಕ್ಕೆ ಸೀಮಿತಗೊಂಡರು.
ಮೂರನೇ ವಿಕೆಟ್‌ಗೆ ಜತೆಗೂಡಿದ ನ್ಯಾಟ್‌ ಸ್ಕಿವರ್‌ ಬ್ರಂಟ್‌ ಮತ್ತು ನಾಯಕಿ ಹರ್ಮನ್‌ಪ್ರೀತ್‌, ಗುಜರಾತ್‌ ಬೌಲರ್‌ಗಳನ್ನು ಕಾಡಿದರು. 38 ರನ್‌ ಗಳಿಸಿದ ಸ್ಕಿವರ್‌, ಆಶ್ಲೀಗೆ ವಿಕೆಟ್‌ ಒಪ್ಪಿಸಿದರೆ, ಕೌರ್‌ 33 ಎಸೆತಗಳಲ್ಲಿ9 ಫೋರ್‌ ಸಹಿತ 54 ರನ್‌ ಸಿಡಿಸಿದರು. ಈ ಮಧ್ಯೆ, ಅಮನ್‌ಜೋತ್‌ ಕೇವಲ 15 ಎಸೆತಗಳಲ್ಲಿ3 ಫೋರ್‌, 1 ಸಿಕ್ಸರ್‌ ಒಳಗೊಂಡ 27 ರನ್‌ ಗಳಿಸಿ ಮುಂಬಯಿನ ಸವಾಲಿನ ಮೊತ್ತಕ್ಕೆ ನೆರವಾದರು. ಗುಜರಾತ್‌ ಜಯಂಟ್ಸ್‌ ಪರ ಪ್ರಿಯಾ ಮಿಶ್ರಾ, ಆಶ್ಲೀ, ಕಾಶ್ವಿ ಮತ್ತು ತನುಜಾ ತಲಾ ಒಂದು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌

  • ಮುಂಬಯಿ ಇಂಡಿಯನ್ಸ್‌: 20 ಓವರ್‌ಗಳಲ್ಲಿ6 ವಿಕೆಟ್‌ಗೆ 179(ಹರ್ಮನ್‌ಪ್ರೀತ್‌ ಕೌರ್‌ 54, ಸ್ಕಿವರ್‌ ಬ್ರಂಟ್‌ 38, ಹೇಲಿ 27, ಅಮನ್‌ಜೋತ್‌ 27; ಪ್ರಿಯಾ ಮಿಶ್ರಾ 23ಕ್ಕೆ 1, ಆಶ್ಲೀ 27ಕ್ಕೆ 1).
  • ಗುಜರಾತ್ ಜೈಂಟ್ಸ್ : ಭಾರತಿ ಫಾಲ್ಮುಲಿ 61, ಹರ್ಲಿನ್ ಡಿಯೋಲ್ 24, ಲಿಚ್ ಫೀಲ್ಡ್ 22, ಅಮೇಲಿಯಾ ಕೆರ್ 34 ಕ್ಕೆ 3 ಮತ್ತು ಹೀಲಿ ಮ್ಯಾಥ್ಯೂಸ್ 38ಕ್ಕೆ 3

Source : https://vijaykarnataka.com/sports/cricket/news/womens-premier-league-mumbai-indians-beat-gujarat-giants-by-9-runs/articleshow/118856763.cms

Leave a Reply

Your email address will not be published. Required fields are marked *